ಇತ್ತೀಚಿನ ದಿನಗಳಲ್ಲಿ ಕೆಲವರು ಬಸವಣ್ಣನವರನ್ನು ಬರೀ ಸಾಮಾಜಿಕ ಸುಧಾರಣೆಯ ಹರಿಕಾರರಾಗಿ, ಮಾನವತಾವಾದಿ, ವಿಚಾರವಾದಿ, ರಾಜಕಾರಣಿ, ಕವಿ – ಹೀಗೆ ಹಲವಾರು ಮುಖಗಳಲ್ಲಿ ನೋಡುತ್ತಿದ್ದಾರೆ.
ಇದು ಸರಿ ಅನಿಸಿದರೂ ಬಸವಣ್ಣನವರು ಒಬ್ಬರು ಆಸ್ತಿಕರು, ಒಂದು ಧರ್ಮದ ಸಂಸ್ಥಾಪಕರು ಮತ್ತು ಆಧ್ಯಾತ್ಮಿಕ ಸಾಧಕರು ಎಂಬುದನ್ನು ಮರೆಯುವ ಹಾಗಿಲ್ಲ. ಶರಣರ ವಚನಗಳೇ ಹೇಳುವಂತೆ ಶಿವನೇ ಬಸವಣ್ಣ ಬಸವಣ್ಣನೇ ಶಿವ. ಅಣ್ಣನವರನ್ನು ನಾವು ಕೇವಲ ಹುಲು ಮಾನವರು ಎನ್ನಲೂ ಸಾಧ್ಯವಿಲ್ಲ.
ಅವರು ಶಿವಯೋಗದ ಸಾಧೆನೆಯ ಮೂಲಕ ನರನಿಂದ ಹರನಾದವರು ಮನುಷ್ಯನಿಂದ ಮಹಾದೇವನಾದವರು. ಆದರೆ ದುರದೃಷ್ಟವಶಾತ್ ಶಿವಯೋಗಿ ಬಸವಣ್ಣನವರು ಯಾರಿಗೂ ಕಾಣುತ್ತಿಲ್ಲ.
ಇಂದು ಎಷ್ಟು ಜನ ಬಸವಣ್ಣನವರ ಬಗ್ಗೆ ಮಾತಾನಾಡುವವರು ಇಷ್ಟಲಿಂಗ ಧರಿಸಿ, ವಿಭೂತಿ ಧರಿಸಿ ಲಿಂಗ ನಿಷ್ಠರಾಗಿದ್ದಾರೆ. ಅತಿಯಾದ ವೈಚಾರಿಕತೆಯೂ ಸಹ ಪಟ್ಟಭದ್ರ ಹಿತಾಸಕ್ತಿಗಳ ಹಾಗೆ ಬಸವಣ್ಣನವರ ಸಿದ್ದಾಂತಕ್ಕೆ ಮಾರಕವಾಗಿದೆ.
ಇತ್ತೀಚೆಗೆ ನಮ್ಮ ಪರಿಸ್ಥಿತಿ ಹೇಗಾಗಿದೆ ಎಂದರೆ ಅಷ್ಟಾವರಣಧಾರಣೆಯೇ ಇಲ್ಲದವರನ್ನು ವೇದಿಕೆಗೆ ಕರೆಸಿ ಅವರಿಂದ ನಾವು ಷಟ್ಸ್ಥಲ ಪ್ರವಚನ ಕೇಳುವ ಪರಿಸ್ಥಿತಿಗೆ ಬಂದಿದ್ದೇವೆ. ಇದು ಆಂತರಿಕ ಗೊಂದಲಕ್ಕೆ ಕಾರಣವಾಗುವುದರ ಜೊತೆಗೆ ಶರಣರ ಮೇಲಿನ ಭಕ್ತಿಗೆ ಮಾರಕವಾಗಿದೆ. ಅಂಗದಲ್ಲಿ ಲಿಂಗವಿಲ್ಲದೆ ಇರುವವರನ್ನು ನನ್ನವರೆನ್ನುವುದಿಲ್ಲ ಎನ್ನುವ ಗುರು ಬಸವಣ್ಣನವರ ವಿಚಾರಕ್ಕೆ ವಿರೋಧವಾಗಿದೆ .