2008ರಲ್ಲಿ ಚರ್ಚ್ ಗಲಾಟೆ ವಿಷಯದಲ್ಲಿ ಬಜರಂಗ ದಳದ ಸಂಚಾಲಕ ಮಹೇಂದ್ರ ಕುಮಾರ್ ಅರೆಸ್ಟ್ ಆಗಿ ಮಂಗಳೂರು ಜೈಲಿಗೆ ಹೋದರು. ಇಡೀ ದೇಶದಲ್ಲೇ ಹಿಂದೂ, ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ವಿಭಾಗಗಳಿರುವ ಏಕೈಕ ಜೈಲ್ ಅದು.
ಅಲ್ಲಿ ಮಹೇಂದ್ರ ಕುಮಾರ್ ಬೇರೆ ಬೇರೆ ಹಿಂದುತ್ವ ಗಲಾಟೆಗಳಲ್ಲಿ ಜೈಲು ಸೇರಿದ್ದ ನೂರಾರು ಕಾರ್ಯಕರ್ತರನ್ನು ನೋಡಿದರು. ಎಲ್ಲಾ ಹಿಂದುಳಿದ ಜಾತಿಗಳ ಹುಡುಗರು, ಒಬ್ಬ ಬ್ರಾಹ್ಮಣ ಅಥವಾ ಆರ್ ಎಸ್ ಎಸ್ ನಾಯಕ ಅಲ್ಲಿರಲಿಲ್ಲ ಎಂದು ಅವರಿಗೆ ಅನಿಸಿತು.
ಕೇಸು ಜಡಿಸಿಕೊಂಡು ಜೈಲಿನಲ್ಲಿ ಕೊಳಿಯುತ್ತಿದ್ದ ಹುಡುಗರಿಗೆ ಜಾಮೀನು ಕೊಟ್ಟು ಬಿಡಿಸಿಕೊಂಡು ಬರಲು ಯಾವ ಸಂಘದ ನಾಯಕನೂ ಮುಂದೆ ಬರಲಿಲ್ಲ. ಮನೆಯವರ ಅಥವಾ ಸ್ನೇಹಿತರ ಸಹಾಯದಿಂದ ಹೊರಗೆ ಬಂದ ಮೇಲೆ ಕೋರ್ಟಿಗೆ ವರ್ಷಾನುಗಟ್ಟಲೆ ಅಲೆದಾಟ, ಲಾಯರ್ ಫೀಸಿಗೆ ಮನೆ ಚಿನ್ನ ಅಡ ಇಡುವ ಪರಿಸ್ಥಿತಿ. ಬಸ್ ಚಾರ್ಜಿಗೆ, ಹೊತ್ತು ಊಟಕ್ಕೆ ಒದ್ದಾಟ.

ಮಹೇಂದ್ರ ಕುಮಾರ್ 52 ಕೇಸು ಜಡಿಸಿಕೊಂಡಿದ್ದರು. ಚರ್ಚ್ ದಾಳಿಯಲ್ಲಿ ಅರೆಸ್ಟ್ ಆದಾಗ ರಾಜ್ಯದ ಮೂಲೆ ಮೂಲೆ ಪೊಲೀಸ್ ಸ್ಟೇಷನ್ಗಳಿಂದ ಬಾಡಿ ವಾರೆಂಟ್ ಬಂದವು. ಜೈಲಿನಿಂದ ಹೊರಬರಲು ಪ್ರಯಾಸ, ನಂತರ ಒಂದು ಕಡೆ ನಿಲ್ಲಲಾಗದಂತಹ ಅಲೆದಾಟ.
ಮಹೇಂದ್ರ ಕುಮಾರ್ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದ, ಹಲವಾರು ಕ್ಷೇತ್ರಗಳಲ್ಲಿ ಪ್ರಭಾವವಿದ್ದ ವ್ಯಕ್ತಿ. ಆಗ ಇದ್ದುದ್ದು ಬಿಜೆಪಿ ಸರಕಾರ, ಗೃಹ ಮಂತ್ರಿ ಆಚಾರ್ಯ ಆರ್ ಎಸ್ ಎಸ್ ನಾಯಕರು. ಇವು ಯಾವುದೊ ಅವರ ಕಷ್ಟದ ಕಾಲದಲ್ಲಿ ನೆರವಾಗಲಿಲ್ಲ.
ಈ ಯಾತನೆ, ಒತ್ತಡದಿಂದ 47ನೇ ವಯಸ್ಸಿಗೆ ಅವರು ಹೃದಯಾಘಾತಕ್ಕೆ ಬಲಿಯಾದರು. ಅವರ ಅನುಭವ, ಆಲೋಚನೆ ಕೆಲವು ತಿಂಗಳ ಹಿಂದೆ ಪುಸ್ತಕ ರೂಪದಲ್ಲಿ ಬಂದಿತು (ನಡು ಬಗ್ಗಿಸದ ಎದೆಯ ಧ್ವನಿ, ಲಡಾಯಿ ಪ್ರಕಾಶನ, 200 ರೂಪಾಯಿ). ಹಿಂದುತ್ವಕ್ಕಾಗಿ ಹೊಡೆದಾಡುತ್ತಿರುವ ಲಿಂಗಾಯತ, ಹಿಂದುಳಿದ ವರ್ಗಗಳ ಹುಡುಗರು ಓದಬೇಕಾದ ಕಥೆಯಿದು.
ಮಹೇಂದ್ರ ಕುಮಾರ್ ಹೇಳುವಂತೆ ಗಲಾಟೆ ಮಾಡಿಸುವುದು, ರಣ ತಂತ್ರ ಹೆಣೆಯುವ ಯಾರೂ ಗಲಾಟೆ ನಡೆದಾಗ, ಪೊಲೀಸರು ಲಾಠಿ ರುಚಿ ತೋರಿಸಿದಾಗ, ಜೈಲು ಸೇರುವಾಗ ಕಾಣಿಸುವುದಿಲ್ಲ. ಮಂಗಳೂರು ಬಜರಂಗ ದಳದ ಮೂಲಕ ಚರ್ಚ್ ದಾಳಿ ಮಾಡಿಸಿದ್ದು ಯಾರೋ, ಆದರೆ ಜೈಲಿಗೆ ಹೋಗಿದ್ದು ಈ ಗಲಾಟೆಯ ಬಗ್ಗೆ ಏನೂ ಗೊತ್ತಿಲ್ಲದ್ದೇ ಇದ್ದ ಮಹೇಂದ್ರ ಕುಮಾರ್. ಜಗದೀಶ ಶೆಟ್ಟರ್, ಪ್ರಭಾಕರ ಕಲ್ಲಡ್ಕರಂತವರ ಎಷ್ಟು ನಾಯಕರ ಮಕ್ಕಳು ಜೈಲಿಗೆ ಹೋಗಿದ್ದಾರೆ? ಇದು ಮಹೇಂದ್ರ ಕುಮಾರ್ ಕೇಳುವ ದೊಡ್ಡ ಪ್ರಶ್ನೆ.
ಹಿಂದುತ್ವದ ಹೆಸರಿನಲ್ಲಿ ಸಂಘ ಪರಿವಾರದ ನಾಯಕರು ಹಣ ಮಾಡಿಕೊಳ್ಳುವ, ಅಥವಾ ಬೇರೆ ಕೆಲಸ ಸಾಧಿಸಿಕೊಳ್ಳುವ ಅನೇಕ ನಿದರ್ಶನಗಳು ಈ ಪುಸ್ತಕದಲ್ಲಿ ಕಾಣುತ್ತವೆ.
ಅಷ್ಟೇ ಅಲ್ಲ, ಹಿಂದುತ್ವಕ್ಕೆ ರಕ್ತ ಬಸಿದು ಕೊಟ್ಟಿರುವಂತಹ ಸತ್ಯಜಿತ್ ಸೂರತ್ಕಲ್. ಕಿಶೋರ್ ಭಂಡಾರಿ, ಸುದರ್ಶನ್, ವಿನಯ್ ಶೆಟ್ಟಿರಂತಹ ನಿಷ್ಠಾವಂತ ಕಾರ್ಯಕರ್ತರಿಗೆ ರಾಜಕೀಯವಾಗಿ ಬೆಳೆಯಲು ಬಿಡುವುದಿಲ್ಲ. ಬದಲಿಗೆ ತಮ್ಮ ಪ್ರಯೋಜನಕ್ಕೆ ಬರುವವರಿಗೆ ಅಥವಾ ತೇಜಸ್ವಿ ಸೂರ್ಯನಂತಹ ಆಯ್ದ ವ್ಯಕ್ತಿಗಳಿಗೆ ಮಾತ್ರ ಅವಕಾಶ.