ರಾಯಚೂರು :
ಪೂಜ್ಯ ಬಂಥನಾಳ ಸಂಗನಬಸವ ಶಿವಯೋಗಿಗಳ ಪುಣ್ಯಸ್ಮರಣೆ ಅಂಗವಾಗಿ ಅವರ ಕುರಿತಾಗಿ ವಿಶೇಷ ಚಿಂತನಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು.
ಡಾ. ಪ್ರಿಯಾಂಕಾ ಗದ್ವಾಲ್ ಅವರು ಮಾತನಾಡಿ, ಪೂಜ್ಯ ಬಂಥನಾಳ ಸಂಗನಬಸವ ಶ್ರೀಗಳು ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳ ಜೊತೆಗೆ ಬಸವತತ್ವವನ್ನು ವಿಶ್ವಕ್ಕೆ ತಲುಪಿಸುವ ಉದ್ದೇಶದಿಂದ ಬಸವ ಪ್ರವಚನವನ್ನು ಮಾಡುತ್ತಿದ್ದರು.
ಧೀರ ಸನ್ಯಾಸಿಯಾದ ಶ್ರೀಗಳ ಕಾರ್ಯಸಾಧನೆ ಹಾಗೂ ಆದರ್ಶಗಳನ್ನು ಇಂದಿನ ಯುವ ಸನ್ಯಾಸಿಗಳು ಕಲಿಯಬೇಕಾಗಿದೆ ಎಂದರು.
ಬಸವ ಕೇಂದ್ರದ ಉಪಾಧ್ಯಕ್ಷರಾದ ಚನ್ನಬಸವ ಇಂಜಿನಿಯರ್ ಅವರು ಮಾತನಾಡುತ್ತಾ, ಡಾ. ಫ. ಗು. ಹಳಕಟ್ಟಿ ಅವರು ಸ್ಥಾಪಿಸಿದ ಬಿಎಲ್ ಡಿಇ ಸಂಸ್ಥೆಯ ಅಧ್ಯಕ್ಷರಾಗಿ ಶಿವಯೋಗಿಗಳು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಸಂಸ್ಥೆಗೆ ಹೆಚ್ಚಿನ ಜಾಗಬೇಕೆಂಬ ಉದ್ದೇಶದಿಂದ ಶರಣೆ ಬಂಗಾರಮ್ಮ ಸಜ್ಜನ (ಕೊಡೆಕಲ್) ಅವರ ಮನೆಗೆ ಹೋಗಿ ಅವರ ಮನವೊಲಿಸಿ ಒಟ್ಟು 56 ಎಕರೆ 28 ಗುಂಟೆ ಜಾಗವನ್ನು ದಾಸೋಹ ರೂಪದಲ್ಲಿ ಪಡೆದುಕೊಂಡರು.

ಇಂದು ಅಲ್ಲಿ ಆರ್ಟ್ಸ್, ಸೈನ್ಸ್, ಕಾಮರ್ಸ್, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಹಾಗೂ ಡಿಪ್ಲೋಮಾ ಕೋರ್ಸ್ ಗಳು ನಡೆಯುತ್ತಿದ್ದು, ಇದಕ್ಕೆಲ್ಲ ಪೂಜ್ಯ ಶ್ರೀಗಳ ದೂರದೃಷ್ಟಿ, ಪ್ರೇರಣೆಯಿಂದ ಮಾತ್ರ ಸಾಧ್ಯವಾಯಿತೆಂದು ನೆನಪಿಸಿದರು.
ವಿಶ್ರಾಂತ ಎ.ಎಸ್.ಐ. ನಾಗೇಶ್ವರಪ್ಪ ಮಾತನಾಡಿ, ಶೈಕ್ಷಣಿಕ ಕ್ಷೇತ್ರವೇ ಅವರ ಮೂಲ ಗುರಿಯಾಗಿದ್ದರಿಂದ ಮುದ್ದೇಬಿಹಾಳದಲ್ಲಿ ಶರಣೆ ಚಿನಿವಾರ್ ಗಂಗಮ್ಮನವರ ಮನವೊಲಿಸಿದರು. ಅವರಿಂದ 25 ಎಕರೆ ಜಾಗೆಯನ್ನು ದಾಸೋಹ ರೂಪದಲ್ಲಿ ಪಡೆದು ಅಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಹೈಸ್ಕೂಲ್, ಪಿಯುಸಿ ಕಾಲೇಜ್, ಮಹಾವಿದ್ಯಾಲಯ ಹಾಗೂ ಡಿಪ್ಲೋಮಾ ಕೋರ್ಸ್ಗಳನ್ನು ಪ್ರಾರಂಭಿಸಿ ಮಕ್ಕಳಿಗೆ ವಿದ್ಯೆ ತಲುಪಿಸಿದ ಕೀರ್ತಿ ಈ ಪೂಜ್ಯರಿಗೆ ಸಲ್ಲುತ್ತದೆ ಎಂದರು.
ಎ. ವೀರಭದ್ರಪ್ಪ ಅವರು ಶ್ರೀಗಳ ಕುರಿತು ಮಾತನಾಡುತ್ತಾ, ಬಸವಾದಿ ಪ್ರಮಥರ ಆಶಯದಂತೆ ಮತ್ತು ಅವರ ನೆನಪಾಗಿ ವಿಜಯಪುರದಲ್ಲಿ 770 ಅಮರಗಣಂಗಳ ಗಣಾಧೀಶರ ಲಿಂಗ ಸ್ಥಾಪನೆ, ಸುಕ್ಷೇತ್ರ ಲಚ್ಯಾಣದಲ್ಲಿ ಒಂದು ಲಕ್ಷ ತೊಂಬತ್ತಾರು ಸಾವಿರ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದ್ದನ್ನು ಸ್ಮರಿಸುತ್ತಾ, ಆ ಕಾರ್ಯಕ್ರಮದಿಂದ ಬಂದ ಹಣದಲ್ಲಿ ಅರ್ಧದಷ್ಟು ಹಣವನ್ನು ಬಿಎಲ್ ಡಿಇ ಸಂಸ್ಥೆಗೆ ಶೈಕ್ಷಣಿಕ ಪ್ರಗತಿಗಾಗಿ ಮುಡುಪಾಗಿಟ್ಟರು.
ಉಳಿದ 25 ರಷ್ಟು ಹಣವನ್ನು ಪ್ರಸಾದಕ್ಕಾಗಿ, 25ರಷ್ಟು ಹಣವನ್ನು ಪ್ರಚಾರಕ್ಕೆ ಮತ್ತು ರಸ್ತೆ ರಿಪೇರಿಗಾಗಿ ಉಪಯೋಗಿಸಿ ಲೆಕ್ಕವನ್ನು ಅಚ್ಚುಕಟ್ಟಾಗಿ ಸಾರ್ವಜನಿಕರಿಗೆ ಒಪ್ಪಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದೆಂದರು.
ಹೀಗೆ ಶ್ರೀಗಳು ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿಯೇ ಮುಡುಪಾಗಿಟ್ಟು ಅಮರರಾದ ಅವರು ಸದಾ ಸ್ಮರಣೀಯರೆಂದರು.
ಅಮರಪ್ಪ ಅಮೀನಗಡ ಸ್ವಾಗತಿಸಿದರು. ನಾಗೇಶ್ವರಪ್ಪ ಹಾಗೂ ಶರಣೆಯರು ವಚನ ಗಾಯನ, ಸಾಮೂಹಿಕ ಬಸವ ಪ್ರಾರ್ಥನೆ ನಡೆಸಿಕೊಟ್ಟರು. ಶರಣ- ಶರಣೆಯರು ಉಪಸ್ಥಿತರಿದ್ದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
