ರಾಮನಗರ :
ನಗರಸಭೆ ಆವರಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಹೊಸದಾಗಿ ಪ್ರತಿಷ್ಠಾಪಿಸಲಾಗಿರುವ ಬಸವೇಶ್ವರರ ಪುತ್ಥಳಿಯನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶುಕ್ರವಾರ ಅನಾವರಣಗೊಳಿಸಿದರು.
ಮಾತನಾಡಿದ ಅವರು, ‘ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರ ಚಿತ್ರ ಇಟ್ಟುಕೊಂಡು ಜಾತಿ ರಾಜಕಾರಣ ಮಾಡಲಾಗುತ್ತಿದೆ. ಈ ದಾರ್ಶನಿಕರು ಜಾತಿಗೆ ಸೀಮಿತವಾದವರಲ್ಲ. ಅದನ್ನು ಮೀರಿ ಮಾನವಾಭ್ಯುದಯಕ್ಕೆ ಶ್ರಮಿಸಿದವರು’ಎಂದರು.
ಬಸವಣ್ಣ, ಅಂಬೇಡ್ಕರ್ ಅಮಲಿನ ಬದಲು ಅರಿವು ಬೆಳೆಸಿಕೊಳ್ಳಬೇಕು. ಆಗ ಮಾತ್ರ, ಅವರಿಬ್ಬರ ಆಶಯದ ಸಮ ಸಮಾಜ ನಿರ್ಮಾಣ ಸಾಧ್ಯ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.

ಜಾತಿ ಮತ್ತು ಕಸುಬನ್ನು ವಂಶಪಾರಂಪರ್ಯ ಮಾಡಲಾಗಿತ್ತು. ಈ ಜಾತಿ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ 12ನೇ ಶತಮಾನದ ವಚನಕಾರರು ಧ್ವನಿ ಎತ್ತಿದರು. ಆ ಸಿದ್ಧಾಂತವನ್ನು ಸಂವಿಧಾನದಲ್ಲಿಯೂ ಕಾಣಬಹುದಾಗಿದೆ. ನಮ್ಮಲ್ಲಿನ ಅನೇಕ ಜನರು ವಚನ – ಸಂವಿಧಾನವನ್ನು ಓದಲಿಲ್ಲ. ಓದಿದ ಕೆಲವರು ಅರ್ಥ ಮಾಡಿಕೊಳ್ಳಲಿಲ್ಲ. ಅರ್ಥ ಮಾಡಿಕೊಂಡ ಬಹುತೇಕು ಬದುಕಿನಲ್ಲಿ ಅದನ್ನು ಅನುಷ್ಠಾನ ಮಾಡಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪುತ್ಥಳಿ ಅನಾವರಣಗೊಳಿಸಿದ ದೇಶಿಕೇಂದ್ರ ಸ್ವಾಮೀಜಿ ಬಸವಣ್ಣರವರು ಧಾರ್ಮಿಕ ನೆಲೆಗಟ್ಟನ್ನು ಮುಖ್ಯವಾಗಿಟ್ಟುಕೊಂಡು ಮಾಡಿದ ಕ್ರಾಂತಿ ವಿಕಸಿತ ಸಮಾಜವನ್ನು ಸುಧಾರಣೆ ಮಾಡುತ್ತಿದೆ ಎಂದು ಹೇಳಿದರು.
ಬಸವಣ್ಣರವರ ಸಾಮಾಜಿಕ ಸುಧಾರಣೆಗಳು ಕೇವಲ ಲೌಕಿಕ, ಸಾಮಾಜಿಕ ಹಾಗೂ ಮೇಲುಸ್ತರದಲ್ಲಿ ನಡೆದಿದ್ದು ಅಲ್ಲ. ಮನುಷ್ಯನ ಶ್ರೇಯಸ್ಸಿಗೆ ಮೋಕ್ಷ ಸಾಧನೆ, ಧಾರ್ಮಿಕ ಪ್ರಜ್ಞೆ, ಆಧ್ಯಾತ್ಮಿಕ ನಡವಳಿಕೆ ಎಲ್ಲವನ್ನು ಒಟ್ಟುಗೂಡಿಸಿ ಸಮಗ್ರ ಬದಲಾವಣೆ ಆಗಬೇಕೆಂದು ಧಾರ್ಮಿಕ ತಳಹಾದಿಯ ಮೇಲೆ ಸಾಮಾಜಿಕ ಸುಧಾರಣೆ ತರಲು ಬಯಸಿದವರು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ಪ್ರಜಾಪ್ರಭುತ್ವದ ಆತ್ಮವಾದ ಸಂಸತ್ತನ್ನು 800 ವರ್ಷಗಳ ಹಿಂದೆಯೇ ಬಸವಣ್ಣನವರು ಅನುಭವ ಮಂಟಪ ಕಟ್ಟಿ ಸಾಕಾರಗೊಳಿಸಿದರು. ನಗರಸಭೆಯು ಬಸವಣ್ಣನವರ ಆಶಯದಂತೆ ಬಡವರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲರ ಕಲ್ಯಾಣದ ಬದ್ದತೆಯೊಂದಿಗೆ ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನಕಪುರದ ದೇಗುಲ ಮಠದ ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ, ಮರಳೇಗವಿಮಠದ ಶಿವರುದ್ರ ಸ್ವಾಮೀಜಿ, ದೊಡ್ಡ ಮರಳವಾಡಿ ಮಠದ ಮೃತ್ಯುಂಜಯ ಸ್ವಾಮೀಜಿ, ಕೇತೋಹಳ್ಳಿಯ ಸಿದ್ದಲಿಂಗ ಸ್ವಾಮೀಜಿ, ಬಿಡದಿ ಚೌಕಿ ಮಠದ ಹುಚ್ಚಪ್ಪ ಸ್ವಾಮೀಜಿ, ಚನ್ನಪಟ್ಟಣ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಸ್ವಾಮೀಜಿ, ರೇವಣಸಿದ್ದೇಶ್ವರ ಬೆಟ್ಟದ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಬಮೂಲ್ ನಿರ್ದೇಶಕ ಪಿ. ನಾಗರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ್, ತಾಲ್ಲೂಕು ಅಧ್ಯಕ್ಷ ಪೋಲೀಸ್ ಶಂಕರಪ್ಪ, ವೀರಶೈವ ಸಂಘದ ತಾಲ್ಲೂಕಾಧ್ಯಕ್ಷ ಎಂ.ಆರ್. ಶಿವಕುಮಾರ ಸ್ವಾಮಿ, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿಭೂತಿಕೆರೆ ಶಿವಲಿಂಗಯ್ಯ, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್ ಆರೀಫ್, ಸದಸ್ಯರು ಹಾಗೂ ಇತರರು ಇದ್ದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಗೈರಾಗಿದ್ದರು. ದಿವ್ಯ ಆಲೂರು ನಿರೂಪಣೆ ಮಾಡಿದರು. ನಗರಸಭೆಯ ಕಂದಾಯ ನಿರೀಕ್ಷಕ ಆರ್. ನಾಗರಾಜು ಗಣ್ಯರನ್ನು ಸ್ವಾಗತಿಸಿದರು. ಪೌರಾಯುಕ್ತ ಡಾ. ಜಯಣ್ಣ ವಂದನಾರ್ಪಣೆ ಮಾಡಿದರು. ಬ್ಯಾಡರಹಳ್ಳಿ ಶಿವಕುಮಾರ್ ಅವರ ತಂಡ ಗೀತ ಗಾಯನ ಪ್ರಸ್ತುತಪಡಿಸಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
