ರಾಮ ರಾವಣನನ್ನು ಕೊಂದ, ಕೃಷ್ಣ ಬಂದು ಅನೇಕರನ್ನು ತನ್ನ ಶ್ರೀಚಕ್ರದಿಂದ ಕೊಂದ ಈ ಉಭಯತರು ಇಂದು ಸಮಸ್ತ ಭಾರತೀಯರಿಗೆ ದೇವರಾಗಿದ್ದಾರೆ, ಪ್ರಾತಃಸ್ಮರಣೀಯರಾಗಿದ್ದಾರೆ. ದೇವರಾಗಿರುವ ರಾಮನು ರಾವಣನಂತಹ ಶ್ರೇಷ್ಠ ಬ್ರಾಹ್ಮಣನನ್ನು ಕೊಂದು ಬ್ರಹ್ಮಹತ್ಯಾ ಶಾಪಕ್ಕೆ ಗುರಿಯಾಗುತ್ತೆನೆಂದು, ರಾಮೇಶ್ವರಕ್ಕೆ ಬಂದು, ಅಲ್ಲಿ ರಾಮಲಿಂಗೇಶ್ವರನ ಪೂಜೆ ಮಾಡಿದನೆಂಬ ಕಥೆಗಳು ಪುರಾಣಗಳಲ್ಲಿ ಬರುತ್ತವೆ. ಹೀಗಿರುವಾಗ ಮೂಲತಃ ಭೀಮಕವಿ ಮತ್ತು ಹರಿಹರ ಇಬ್ಬರೂ ಸನಾತನ ಧರ್ಮದ ಬ್ರಾಹ್ಮಣ ಕವಿಗಳು. ಅವರ ಮನಸ್ಸಿನಲ್ಲಿಯೂ ಇಂತಹ ಪುರಾಣದ ಕಲ್ಪನೆಯ ಚಿತ್ರಣವೇ ತುಂಬಿರುವುದರಲ್ಲಿ ಸಂದೇಹವಿಲ್ಲ.
ಹೀಗಾಗಿ ಹರಿಹರ ಮೊದಲು ಹೇಳುವ ಮಾತುಗಳನ್ನು ಎಲ್ಲರೂ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು- ರಾಮ ಮತ್ತು ಕೃಷ್ಣರು ಭೂಮಿಗೆ ಭಾರವಾದವರನ್ನು ಹೇಗೆ ಕೊಂದರೊ, ಹಾಗೆ ಶಿವಧರ್ಮಕ್ಕೆ ಅಡ್ಡಿಯಾಗಿರುವ ಬಿಜ್ಜಳನನ್ನು ಕೊಲ್ಲಿ ಎಂದು ಹೇಳಿದರೆಂದು ಈ ಬ್ರಾಹ್ಮಣ ಕವಿಗಳು ಚಿತ್ರಿಸಿದ್ದಾರೆ. ಇನ್ನೂ ವಿಶೇಷವೆಂದರೆ ಇದರ ಕ್ರೆಡಿಟ್ ಎಲ್ಲಾ ಶಿವಯೋಗಿ ಸಿದ್ಧರಾಮರಿಗೆ ಸಲ್ಲಬೇಕೆಂದು ರಾಘವಾಂಕನೂ ಕೂಡ ತನ್ನ ‘ಸಿದ್ಧರಾಮ ಚಾರಿತ್ರ’ದಲ್ಲಿ ಮಲ್ಲಿ ಬೊಮ್ಮಣ್ಣಗಳಿಗೆ ಬಿಜ್ಜಳನನ್ನು ಕೊಲ್ಲಿ ಎಂದು ಹೇಳುತ್ತಾನೆ ಎಂಬ ಪ್ರಸಂಗ ಬರುತ್ತದೆ.

ರಾಘವಾಂಕನೂ ಹರಿಹರ ಕವಿಯ ಅಳಿಯ, ಅಂದರೆ ಅವನೂ ಸನಾತನಧರ್ಮದ ಬ್ರಾಹ್ಮಣ ಕವಿಯೇ ಆಗಿದ್ದಾನೆ. ಮಲ್ಲಿ ಬೊಮ್ಮಣ್ಣ ಮೂಲತಃ ಒಬ್ಬ ಮಂತ್ರಿಯಾಗಿದ್ದ. ಮಂತ್ರಿಗಳಾದವರಿಗೆ ರಾಜಕೀಯ ಸೇಡು ದ್ವೇಷಗಳಿರುವುದು ಸಹಜ. ಹೀಗಾಗಿ ಮಲ್ಲಿಬೊಮ್ಮಣ್ಣಗಳು ಬಿಜ್ಜಳನ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವದು ಸಹಜ ಪ್ರಕ್ರಿಯೆಯಾಗಿದೆ.
ಇಂದು ಸಾಮಾಜಿಕ ಜಾಲತಾಣಗಳಲ್ಲಿ ಭೀಮಕವಿ ಬಸವಪುರಾಣ ಮತ್ತು ಹರಿಹರನ ರಗಳೆಯ ಸಾಲುಗಳನ್ನು ಹಾಕುತ್ತಿರುವ ವ್ಯಕ್ತಿಗಳು ಮುಖ್ಯವಾಗಿ ನಿಜವಾದ ಸಂಶೋಧಕರು ಬರೆದ ಕೃತಿಗಳನ್ನು ಅವಲೋಕಿಸಿ, ಪರಿಶೀಲಿಸಿ ಇಂತಹ ವಿಚಾರಗಳನ್ನು ಹಾಕಿ ಚರ್ಚೆ ಮಾಡಬೇಕು. ಅದನ್ನು ಬಿಟ್ಟು, ಯಾರು ಯಾರೋ ಬರೆದವರೆಲ್ಲ ಸಂಶೋಧಕರಾಗುವುದಿಲ್ಲ. ನಿಜವಾದ ಸಂಶೋಧಕರ ಕೃತಿಗಳನ್ನು ಅವಲೋಕಿಸಿ, ಅಧ್ಯಯನ ಮಾಡಿ ಚರ್ಚೆ ಮಾಡಿದರೆ ಸೌಹಾರ್ದಯುತವಾದ ಸಂವಾದ ನಡೆಯಲು ಸಾಧ್ಯ.
ಬಸವ ಪುರಾಣ, ಬಸವರಾಜ ದೇವರ ರಗಳೆ ಕಥೆಗಳನ್ನು ಬಿಟ್ಟರೆ, ಬಸವಣ್ಣನವರು ಚಾರಿತ್ರಿಕ ವ್ಯಕ್ತಿ ಎನ್ನಲು ಆಧಾರಗಳಿಲ್ಲ ಎಂದು ಊಹಾಪೋಹ ಮಾಡುತ್ತಿದ್ದಾರೆ. ಅಂತವರೆಲ್ಲ ಪಿ.ಬಿ. ದೇಸಾಯಿ ಅವರ ‘Basaveshwar And His Times’ ‘ಬಸವೇಶ್ವರ ಮತ್ತು ಅವನ ಕಾಲ’ ಗ್ರಂಥವನ್ನು ಅವಲೋಕಿಸಬೇಕು. ಪಿ.ಬಿ.ದೇಸಾಯಿ ಅವರು ಬಸವಣ್ಣನವರ ಅಷ್ಟಶತಮಾನೋತ್ಸವ ಕಾಲಕ್ಕೆ ಈ ಗ್ರಂಥವನ್ನು ರಚನೆ ಮಾಡಿದರು. ತುಂಬ ಮೌಲಿಕವಾಗಿರುವ ಈ ಗ್ರಂಥವನ್ನು ಪ್ರೊ. ಸದಾನಂದ ಕನವಳ್ಳಿ ಮತ್ತು ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಕೃತಿ ಗದುಗಿನ ತೋಂಟದಾರ್ಯಮಠದಿಂದ ೨೦೧೭ರಲ್ಲಿ ಪ್ರಕಟವಾಗಿದೆ. ಆದರೆ ಈ ಕೃತಿಯನ್ನು ಯಾವೊಬ್ಬ ಲಿಂಗಾಯತನೂ ಓದಿಲ್ಲ ಎಂಬುದು ವಿಷಾದದ ಸಂಗತಿ. ಇತ್ತೀಚೆಗೆ ಮಹಾರಾಷ್ಟ್ರದ ಹಿರಿಯ ಸಂಶೋಧಕರಾದ ಡಾ. ಅಪ್ಪಾಸಾಹೇಬ ಪೂಜಾರ ಎಂಬುವರು ಈ ಕೃತಿಯ ಮಹತ್ವವನ್ನು ಅರಿತುಕೊಂಡು ಮರಾಠಿ ಭಾಷೆಗೆ ಅನುವಾದ ಮಾಡಿರುವುದು ಅಭಿಮಾನ ಪಡುವ ಸಂಗತಿ. ಲಿಂಗಾಯತರು ಓದುವ ಪ್ರವೃತ್ತಿ ಬೆಳೆಸಿಕೊಂಡರೆ, ನಿಜವಾದ ಇತಿಹಾಸ ತಿಳಿಯುತ್ತದೆ. ವಿತಂಡವಾದಗಳಿಗೆ ಅವಕಾಶವಿಲ್ಲದಂತೆ ಚರ್ಚೆ ಮಾಡಲು ಅನುಕೂಲವಾಗುತ್ತದೆ.

೧೯೩೦ರ ದಶಕದಲ್ಲಿ ಚಿಲಕೂರು ನಾರಾಯಣರಾವ್ ಎಂಬ ಸಂಶೋಧಕರೊಬ್ಬರು ಬಸವಣ್ಣನವರು ಐತಿಹಾಸಿಕ ವ್ಯಕ್ತಿ ಅಲ್ಲ ಎಂದು ಬರೆದರು, ಆಗ ಡಾ. ಹಳಕಟ್ಟಿಯವರು ಶ್ರಮಪಟ್ಟು ಅರ್ಜುನವಾಡದ ಶಾಸನವನ್ನು ಹಲಸಂಗಿಯ ಮಧುರಚೆನ್ನ ಮತ್ತು ಡಾ. ನಂದಿಮಠ ಅವರ ಸಹಾಯದಿಂದ ಸಂಶೋಧಿಸಿ ಶಿವಾನುಭವ ಪತ್ರಿಕೆಯಲ್ಲಿ ಮೊಟ್ಟಮೊದಲು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ನಮ್ಮ ನಾಡಿನ ಬಹುದೊಡ್ಡ ಸಂಶೋಧಕರಾಗಿದ್ದ ಗೋವಿಂದ ಪೈಗಳು ‘ಮೂರು ಉಪನ್ಯಾಸಗಳು’ ಎಂಬ ಕೃತಿಯಲ್ಲಿ ಬಸವಣ್ಣನವರನ್ನು ಕುರಿತು ಅತ್ಯಂತ ವಸ್ತುನಿಷ್ಠವಾದ ವಿಷಯಗಳನ್ನು ಸಂಶೋಧನಾತ್ಮಕವಾಗಿ ಬರೆದು, ಬಸವಣ್ಣನವರು ಐತಿಹಾಸಿಕ-ಚಾರಿತ್ರಿಕ ವ್ಯಕ್ತಿ ಎಂಬುದನ್ನು ತೋರಿಸಿಕೊಟ್ಟರು.
ಧಾರವಾಡದಲ್ಲಿದ್ದ ಜಿ. ಎಸ್. ದೀಕ್ಷಿತ್ ಎಂಬ ಮಹಾ ಸಂಶೋಧಕರು ಬಸವಣ್ಣನವರ ಮತ್ತು ಬಿಜ್ಜಳನ ನಡುವಿನ ಸಂಬಂಧ ಕುರಿತು ಅನೇಕ ಸಂಶೋಧನಾತ್ಮಕ ಲೇಖನಗಳನ್ನು ಬರೆದರು. ಪಿ.ಬಿ.ದೇಸಾಯಿ, ಡಾ. ಹಳಕಟ್ಟಿವರು, ಜಿ. ಎಸ್. ದೀಕ್ಷಿತ್, ಗೋವಿಂದ ಪೈ ಇವರು ನಿಜವಾದ ಸಂಶೋಧಕರು. ಇವರ ಸಂಶೋಧನೆಗಳಿಗೆ ಒಂದು ನೆಲೆ ಇದೆ, ಬೆಲೆ ಇದೆ. ಗೋವಿಂದ ಪೈಗಳನಂತೂ ಇಂದಿನ ನಮ್ಮ ಸಮಾಜ ಮರೆತು ಬಿಟ್ಟಿದೆ. ಕನ್ನಡದ ಮೊದಲ ರಾಷ್ಟ್ರಕವಿಯಾಗಿದ್ದ ಮಂಜೇಶ್ವರದ ಗೋವಿಂದ ಪೈಗಳು ಮಾಡಿದ ಬಸವ ಸೇವೆ ನಿಜಕ್ಕೂ ಅಭಿನಂದನೀಯ.
ಚಿಲಕೂರು ನಾರಾಯಣರ ಮಾದರಿಯಲ್ಲಿಯೇ ಕಪಟರಾಳ ಕೃಷ್ಣರಾಯರು ‘ಅನುಭವ ಮಂಟಪ’ವೇ ಇರಲಿಲ್ಲ ಎಂದು ವಾದ ಮಾಡಿದರು. ಆಗಲೂ ಲಿಂಗಾಯತ ವಿದ್ವಾಂಸರೆಲ್ಲ ಸುಮ್ಮನೆ ಇದ್ದರು. ಆದರೆ ಕ್ರೈಸ್ತ ಧರ್ಮೀಯರಾಗಿದ್ದ ಉತ್ತಂಗಿ ಚೆನ್ನಪ್ಪನವರು ‘ಅನುಭವ ಮಂಟಪದ ಐತಿಹಾಸಿಕತೆ’ ಎಂಬ ಲೇಖನಗಳ ಸರಮಾಲೆಯನ್ನು ಬರೆದರು. ಆ ಎಲ್ಲ ಲೇಖನಗಳನ್ನು ಮುರುಘಾಮಠದ ಮೃತ್ಯುಂಜಯಪ್ಪಗಳು ತಮ್ಮ ಬಾಲಲೀಲಾ ಶಿವಯೋಗೀಶ್ವರ ಗ್ರಂಥಮಾಲೆಯಿಂದ ಪುಸ್ತಕ ರೂಪದಲ್ಲಿ ಮೊದಲ ಬಾರಿಗೆ ಪ್ರಕಟಿಸಿದರು.
ಸದ್ಧರ್ಮದೀಪಿಕೆ ಸಂಪಾದಕರಾಗಿದ್ದ ಶ್ರೀ ಚನ್ನಮಲ್ಲಿಕಾರ್ಜುನರು ಬರೆದ ‘ಬಸವೇಶ್ವರ ಕಾಲ’ ಮತ್ತು ಮೊರಾರ್ಜಿದೇಸಾಯಿ ಮಂತ್ರಿಮಂಡಲದಲ್ಲಿ ಸ್ವಾತಂತ್ರ್ಯಪೂರ್ವ ಮುಂಬೈ ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದ ಹಿರಿಯ ವಿದ್ವಾಂಸ ಶ್ರೀ ಎಂ.ಪಿ. ಪಾಟೀಲ ಅವರು ಬರೆದ ‘ಬಸವೇಶ್ವರನ ಕಾಲ’ ಎಂಬ ಎರಡು ಮಹತ್ವದ ಕೃತಿಗಳನ್ನು ಅವಲೋಕನ ಮಾಡಿದರೆ, ಬಸವಣ್ಣನವರ ಕಾಲದ ಬಗ್ಗೆ ಒಂದು ಸ್ಪಷ್ಟವಾದ ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶಕ್ಕೆ ಹೋದ ಸಂದರ್ಭದಲ್ಲಿ ‘ಅನುಭವ ಮಂಟಪ’ದ ಮಹತ್ವ ಕುರಿತು ತುಂಬ ಅರ್ಥಪೂರ್ಣವಾದ ಮಾತುಗಳನ್ನು ಆಡಿದರು. ಆದರೆ ನಮ್ಮ ಕನ್ನಡದ ಕೆಲವು ಸಂಪ್ರದಾಯ ಬದ್ಧ ಮನಸ್ಸುಗಳಿಗೆ ಈ ಮಾತುಗಳನ್ನು ಅರಗಿಸಿಕೊಳ್ಳಲಾಗಲಿಲ್ಲ. ಆಗ ಮತ್ತೆ ಅನುಭವ ಮಂಟಪದ ವಿಷಯವನ್ನು ಕೆದಕಿದರು.
ಹೀಗೆ ಕಾಲಕಾಲಕ್ಕೆ ಬಸವಾದಿ ಶಿವಶರಣರನ್ನು ಟೀಕಿಸುವ ಒಂದು ಕೆಟ್ಟ ಸಂಪ್ರದಾಯ ಕೆಲವು ವ್ಯಕ್ತಿಗಳಲ್ಲಿ ಆಗಾಗ ಬರುತ್ತದೆ. ಈ ಹಿಂದೆ ಕಾಶಿನಾಥ ಶಾಸ್ತ್ರಿ ಎಂಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಬಸವಾದಿ ಶಿವಶರಣರನ್ನು ಟೀಕಿಸಿ ಬರೆದ, ಕೊನೆಗಾಲದಲ್ಲಿ ಪಶ್ಚಾತ್ತಾಪ ಪಟ್ಟ. ಶರಣರೊಡನೆ ಸರಸವಾಡಿದರೆ, ಸುಣ್ಣದ ಕಲ್ಲನ್ನು ಕಟ್ಟಿಕೊಂಡು ನೀರಿನ ಮಡುವಿನಲ್ಲಿ ಬಿದ್ದಂತಾಗುತ್ತದೆ ಎಂಬುದಕ್ಕೆ ಇತಿಹಾಸದಲ್ಲಿ ಅನೇಕ ದಾಖಲೆಗಳಿವೆ. ಹೀಗಾಗಿ ಶರಣರು ನೀಡಿದ ಧರ್ಮದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದೆ, ಹೀಗೆ ಅಸಂಬಂಧವಾಗಿ ಅಸಂಗತವಾಗಿ ಪ್ರಲಾಪಿಸುವುದು ಯಾರಿಗೂ ಶೋಭೆ ತರುವ ಸಂಗತಿಯಲ್ಲ.

ಬಸವಣ್ಣನವರ ಘನ ವ್ಯಕ್ತಿತ್ವ ಎಂತಹದು ಎಂಬುದಕ್ಕೆ ಪುರಾಣಗಳನ್ನು ಆಧರಿಸದೆ, ಶರಣರೇ ಬರೆದ ವಚನಗಳನ್ನು ಗಮನಿಸಿದರೆ ತಿಳಿಯುತ್ತದೆ. ವಚನಗಳನ್ನು ಆಳವಾಗಿ ಅಧ್ಯಯನ ಮಾಡಿದರೆ, ಒಟ್ಟು ಶರಣ ಚಳುವಳಿಯ ಮಹತ್ವ ತಿಳಿಯುತ್ತದೆ. ಆದರೆ ವಚನಗಳಲ್ಲಿ ವೈರುಧ್ಯಗಳಿವೆ ಎಂಬ ಮಾತು ಮೇಲಿಂದ ಮೇಲೆ ಬರುತ್ತದೆ. ಇದು ಸಹಜವೇ. ಒಂದೇ ಮನೆಯಲ್ಲಿರುವ ಅಪ್ಪ ಮಕ್ಕಳಿಗೆ, ಅಣ್ಣ ತಮ್ಮಂದಿರಲ್ಲಿ ವೈರುಧ್ಯವಿರುವಾಗ ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರು, ಏಳು ನೂರಾ ಎಪ್ಪತ್ತು ಅಮರಗಣಂಗಳು ಇದ್ದ ಅನುಭವ ಮಂಟಪದಲ್ಲಿ ವೈರುಧ್ಯರೂಪದ ಅಭಿಪ್ರಾಯಗಳಿರುವುದು ಸಹಜ.
ಕೆಳವರ್ಗದಿಂದ ಬಂದ ಶರಣರು ಪ್ರಶ್ನೆ ಮಾಡಿರುವುದು ಸಹಜವಾಗಿದೆ. ಹೀಗಾಗಿ ಬಸವಾದಿ ಶಿವಶರಣರು ಈ ಲೋಕಕ್ಕೆ ಕೊಟ್ಟ ಮೌಲ್ಯಗಳನ್ನು ಕುರಿತು ನಾವೆಲ್ಲ ಅಧ್ಯಯನ-ಅನುಸಂಧಾನ ಮಾಡಬೇಕಾದ ಅನಿವಾರ್ಯತೆ ಇದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
