ಬಸವಧರ್ಮ ಹೃದಯ ಧರ್ಮವಾಗಿದೆ : ಡಾ. ಮೃತ್ಯುಂಜಯ ರುಮಾಲೆ

ಬಸವ ಮೀಡಿಯಾ
ಬಸವ ಮೀಡಿಯಾ

ಅನುಭವ ಮಂಟಪ ತಿಂಗಳ ಕಾರ್ಯಕ್ರಮ

ಬೀದರ:

ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ 187 ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜಯಂತಿಯು ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ನಡೆಯಿತು.

ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಜಗನ್ನಾಥ ಬಿ. ಪಾಟೀಲ ಅವರು ಉದ್ಘಾಟಿಸಿ ಮಾತನಾಡುತ್ತ, ಡಾ. ಬಸವಲಿಂಗ ಪಟ್ಟದ್ದೇವರು ಹುಟ್ಟು ಹಾಕಿರುವ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲವು ಸಂಸ್ಕೃತಿ ಸಂಸ್ಕಾರದಿಂದ ಕೂಡಿದ ಶಿಕ್ಷಣವು ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸವಾಗುವಂತಹದಾಗಿದೆ. ಇಂದಿನ ಯುವ ಜನಾಂಗಕ್ಕೆ ನಮ್ಮ ಧರ್ಮ ಮತ್ತು ದೇಶದ ಇತಿಹಾಸ ಪರಿಚಯ ಮಾಡಿಕೊಡುವುದು ಅವಶ್ಯಕತೆ ಇದೆ. ಪೂಜ್ಯರು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಹಿರೇಮಠ ಸಂಸ್ಥಾನದ ಪೀಠಾಧೀಶರಾದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ವಚನ ಸಾಹಿತ್ಯ ಬೆಳೆಯಲು ಮತ್ತು ಪ್ರಚಾರ ಮಾಡುವಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರು ಅವಿಶ್ರಾಂತ ಪರಿಶ್ರಮ ಮಾಡಿದ್ದಾರೆ. ಪ್ರಸ್ತುತ ಸಮಾಜದಲ್ಲಿಯ ಭ್ರಷ್ಟಾಚಾರ, ಅನ್ಯಾಯದ ಬೇರು ಸಮೇತ ಕಿತ್ತುಹಾಕಬೇಕಾದರೆ ಬಸವಾದಿ ಶರಣರ ವಚನಗಳೇ ದಾರಿ ದೀಪವಾಗಿವೆ.

12ನೇ ಶತಮಾನದ ಶರಣೆ ಕಸಗೂಡಿಸುವ ಸತ್ಯಕ್ಕರವರು ಕಲ್ಯಾಣ ಸ್ವಚ್ಛಗೊಳಿಸಿ ವಚನಗಳನ್ನು ರಚಿಸಿದ್ದಾರೆ. ಅಂತರಂಗ, ಬಹಿರಂಗದ ಸ್ವಚ್ಛತೆಯ ಬದುಕು ಅವರದಾಗಿತ್ತು. ಜೀವನದಲ್ಲಿ ವ್ಯಕ್ತಿ ಪರಧನ, ಪರಸ್ತ್ರೀ, ಪರದೈವವೆಂಬ ನಿಯಮಗಳನ್ನು ಪಾಲಿಸಬೇಕು. ಅಕ್ಕಮಹಾದೇವಿ ತಾಯಿ ಹೇಳುವಂತೆ, ಜಗದಲ್ಲಿ ಸ್ತುತಿ ನಿಂದೆಗಳು ಬಂದರೂ ಸಮಾಧಾನದಿಂದ ಜೀವನ ಮುಂದುವರೆಸಿಕೊಂಡು ಹೋಗಬೇಕು ಎಂದು ನುಡಿದರು.

ಹೊಸಪೇಟೆಯ ಸಾಹಿತಿಗಳಾದ ಡಾ. ಮೃತ್ಯುಂಜಯ ರುಮಾಲೆಯವರು ಡಾ. ಫ.ಗು. ಹಳಕಟ್ಟಿಯವರ ಕುರಿತು ಅನುಭಾವ ಮಂಡಿಸುತ್ತಾ, ಡಾ. ಫ.ಗು. ಹಳಕಟ್ಟಿ, ಹರ್ಡೇಕರ್ ಮಂಜಪ್ಪ ಮತ್ತು ಉತ್ತಂಗಿ ಚನ್ನಬಸಪ್ಪನವರು ವಚನ ಸಾಹಿತ್ಯದ ಸಾರವನ್ನು ಅಧ್ಯಯನ ಮಾಡಿ ತನು, ಮನ, ಧನದಿಂದ ಸರ್ವಶ್ರೇಷ್ಠ ಸೇವೆ ಮಾಡಿದ್ದಾರೆ. ಡಾ. ಫ.ಗು. ಹಳಕಟ್ಟಿಯವರದು ಒಂದು ವಚನದಿಂದ ಅವರ ಇಡೀ ಬದುಕೆ ಪರಿವರ್ತನೆಯಾಗಿದೆ. ಮುಂದೆ ಅವರು ಸಕಲ ಶರಣರ ವಚನಗಳನ್ನು ಸಂಶೋಧಿಸಿ ಲಿಂಗಾಯತ ಧರ್ಮದ ಪ್ರಚಾರ ಮಾಡಿದರು. ಬಸವ ಧರ್ಮ ಹೃದಯ ಧರ್ಮವಾಗಿದೆ.

ತಂದೆ-ತಾಯಿ ಮತ್ತು ಬಸವಾದಿ ಶರಣರನ್ನು ಪ್ರೀತಿ ವಾತ್ಸಲ್ಯದಿಂದ ಕಾಣಬೇಕು.

ಅಂದಿನ ಸಮಯದಲ್ಲಿ ಆಂಗ್ಲ ಮತ್ತು ಮರಾಠಿ ಪ್ರಭಾವದಲ್ಲಿ ಕನ್ನಡದ ವಚನ ಆಸ್ತಿಯನ್ನು ಸಂರಕ್ಷಣೆ ಮಾಡಿದವರು ಫ.ಗು. ಹಳಕಟ್ಟಿಯವರು. “ಶಿವಾನುಭವ”ಎಂಬ ಪತ್ರಿಕೆ ಸ್ಥಾಪಿಸಿ ಬಸವ ತತ್ವದ ಸಂದೇಶವನ್ನು ಸಮಾಜಕ್ಕೆ ಮುಟ್ಟಿಸುವಂತ ಕಾರ್ಯ ಮಾಡಿದ್ದಾರೆ. ಅವರ ಜೀವನವು ಶಾಶ್ವತ ಆಧ್ಯಾತ್ಮಿಕ ಜೀವನವಾಗಿದೆ.

ಈ ಶತಮಾನದಲ್ಲಿ ಡಾ. ಚನ್ನಬಸವ ಪಟ್ಟದ್ದೇವರು 70 ವರ್ಷ ಅವಿಶ್ರಾಂತವಾಗಿ ಲಿಂಗಾಯತ ಧರ್ಮ ಮತ್ತು ಕನ್ನಡದ ಸೇವೆ ಮಾಡಿದ ಮಹಾಪುರಷರಾಗಿದ್ದಾರೆ ಎಂದು ವಿಷಯ ಪ್ರತಿಪಾದಿಸಿದರು.

ಸನ್ಮಾನಿತರಾದ ಬೀದರ ರೋಟರಿ ಕ್ಲಬ್‌ ಅಧ್ಯಕ್ಷರಾದ ಸ್ಪೂರ್ತಿ ಬಸವರಾಜ ಧನ್ನೂರ ರವರು ಮಾತನಾಡಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಕುಮಾರಿ ರೀತಿಕಾ ವಿಶ್ವನಾಥ ಮಾತನಾಡಿದರು. ಪ್ರಸಾದ ನಿಲಯದ ಕಾರ್ಯದರ್ಶಿಗಳಾದ ಪ್ರೊ ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕಿ ಸುವರ್ಣಾ ಚಿಮಕೋಡೆ ವೇದಿಕೆಯ ಮೇಲೆ ಗೌರವ ಉಪಸ್ಥಿತರಿದ್ದರು.

ದಾಸೋಹಿಗಳಾದ ಪ್ರೊ. ಭಾಗೀರಥಿ ಶಾಮರಾವ ಕೊಂಡಾ ಗುರುಬಸವ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಜಗನ್ನಾಥ ಬಿ. ಪಾಟೀಲ್, ಸ್ಪೂರ್ತಿ ಬಸವರಾಜ ಧನ್ನೂರ, ಸಂಗಮೇಶ ರಾಜಕುಮಾರ ಚನ್ನಬಟ್ಟೆ ಕಾರಮುಂಗಿ, ಸಂತೋಷ ಸಾವಳೆ, ನಿಕಿತ ಪಾಟೀಲ್ ರವರನ್ನು ಪೂಜ್ಯರು ಸನ್ಮಾನಿಸಿದರು.

ರಾಜಕುಮಾರ ಜುಬೈ ಸ್ವಾಗತ ಕೋರಿದರೆ, ಪ್ರೊ ಉಮಾಕಾಂತ ಮೀಸೆ ಅತಿಥಿಗಳ ಪರಿಚಯ ಭಾಷಣ ಮಾಡಿದರು. ಕುಮಾರಿ ರಾಮೇಶ್ವರಿ ನಾಗನಾಥ ನಿರೂಪಿಸಿದರು. ವಿಜಯಲಕ್ಷ್ಮೀ ಹುಗ್ಗೆಳ್ಳಿ ವಂದಿಸಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ಕೊರವಂಜಿ ರೂಪಕ ಪ್ರದರ್ಶಿಸಲಾಯಿತು. ಚನ್ನಬಸಪ್ಪ ನೌಬಾದೆ ಮತ್ತು ಶ್ರೀನಿವಾಸ ಪಾಪಡೆ ರವರು ವಚನ ಗಾಯನ ನಡೆಸಿಕೊಟ್ಟರು. ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದವರಿಂದ ಗುರುಬಸವ ಪ್ರಾರ್ಥನೆ ಮತ್ತು ಭಜನೆ ನೆರವೇರಿತು.

ಪ್ರಮುಖರಾದ ಸಿದ್ಧಯ್ಯ ಕವಡಿಮಠ, ಶ್ರೀಕಾಂತ ಬಿರಾದಾರ, ಮಲ್ಲಿಕಾರ್ಜುನ ಹುಡುಗೆ, ಗುರುನಾಥ ಬಿರಾದಾರ, ಬಸವರಾಜ ಹಳ್ಳಿ, ತೀರ್ಥಮ್ಮ ರೆಡ್ಡಿ, ಶರಣಪ್ಪಾ ಖೇಡ, ಲಕ್ಷ್ಮೀಬಾಯಿ ಮಾಳಗೆ, ಡಾ. ವೈಜಿನಾಥ ಬಿರಾದಾರ, ಪ್ರೇಮಾ ಮುಚಳಂಬೆ, ಮಹಾನಂದಾ ಸ್ವಾಮಿ, ನಾಗಶೆಟ್ಟಿ ಜ್ಯೋತೆಪ್ಪನೋರ ಮತ್ತು ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯ ಹಾಗೂ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ಮತ್ತು ಶರಣ, ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *