ಬಸವಕೇಂದ್ರದ ಮಹಾಮನೆ ಕಾರ್ಯಕ್ರಮದಲ್ಲಿ ಅನುಭವ ಮಂಟಪದ ಬಗ್ಗೆ ಚರ್ಚೆ
ರಾಯಚೂರು:
ಬಸವ ಕೇಂದ್ರದ 170ನೇ ಮಹಾಮನೆ ಕಾರ್ಯಕ್ರಮ ಲಿಂಗೈಕ್ಯ ಲಕ್ಷ್ಮಮ್ಮ ಆಶಾಪುರ ಅವರ ಸ್ಮರಣೆಯಲ್ಲಿ ಜ್ಯೋತಿ ಕಾಲೋನಿಯ ವೆಂಕಣ್ಣ ಆಶಾಪುರ ಅವರ ಮನೆಯಲ್ಲಿ ಈಚೆಗೆ ನಡೆಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೂಜ್ಯ ನಿಜಾನಂದ ಮಹಾಸ್ವಾಮಿಗಳು ಶಾಂತಾಶ್ರಮ, ಮಿಟ್ಟಿಮಲ್ಕಾಪುರ ಅವರು ಆಶೀರ್ವಾದದ ನುಡಿಗಳನ್ನಾಡುತ್ತಾ, ಅನುಭವ ಮಂಟಪದಲ್ಲಿ ದೇಹವೇ ದೇವಾಲಯ, ಕಾಯಕವೇ ಕೈಲಾಸ ಎಂದು ಹೇಳಿ, ಜಂಗಮ ಸ್ವರೂಪವಾದ ಇಷ್ಟ ಲಿಂಗದಲ್ಲಿ ನಿಷ್ಠೆ ಇಟ್ಟು ನಿಜದ ನೆಲೆಯ ಮಹಾಬೆಳಗನ್ನು ಕಾಣಬೇಕು ಎಂಬುದು ಬಸವಣ್ಣನವರ ನಿಲುವಾಗಿತ್ತು ಎಂದರು.
ಬಸವಣ್ಣನವರ ಮೂಲವಾಣಿಯಾದ ನುಡಿದಂತೆ ನಡೆ, ಇದೇ ಜನ್ಮ ಕಡೆ ಎಂದು ತಿಳಿಸುತ್ತಾ, ಇದು ಕಲ್ಯಾಣನಾಡಿನ ಪರಿಕಲ್ಪನೆಯ ಮಹಾಮನೆ ಎಂದರು.

ಅತಿಥಿಗಳಾದ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಡಾ. ಸರ್ವಮಂಗಳ ಸಕ್ರಿ ಅವರು ಮಾತನಾಡಿ, ಬಸವಣ್ಣ “ಜಂಗಮ ಭಕ್ತಿಯ ಮಾಡಿದನೆಂದು ಮಹಾಮನೆ ಕಟ್ಟಿದ ಎನ್ನುತ್ತಾರೆ ಮೋಳಿಗೆ ಮಾರಯ್ಯನವರು ಎಂದು ಹೇಳುತ್ತಾ, ಮಹಾ ಮನೆಯಲ್ಲಿ ಶರಣ ಶರಣೆಯರು ಸಾಧಿಸಿದ ಅಧ್ಯಾತ್ಮ ಸಾಧನೆಯನ್ನು ಅಭ್ಯಸಿಸಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಕೂಡ ಶರಣರಂತೆ ಪ್ರೀತಿ ವಿಶ್ವಾಸದಿಂದ ಬಾಳೋಣವೆಂದರು.

ವಿಶ್ವದ ಮೊದಲ ಪಾರ್ಲಿಮೆಂಟ್ ಮಾನವರ ಆತ್ಮಕಲ್ಯಾಣವನ್ನು ಉದ್ದರಿಸುವ ಅನುಭವ ಮಂಟಪವದು. ಮರ್ತ್ಯಲೋಕದ ಈ ಮಹಾಮನೆಗೆ ರೂಪವಿಲ್ಲ. ವಿಶ್ವವೇ ಒಂದು ಕುಟುಂಬ ಎಂಬ ಬಸವತತ್ವ ಸಿದ್ಧಾಂತವೇ ಈ ಮಹಾಮನೆಯ ಉಸಿರು. 770 ಅಮರ ಗಣಂಗಳನ್ನು ಅನುಭವ ಮೂರ್ತಿ ಮಾಡಿದಾತ ಬಸವಣ್ಣ ಎಂದು ಹೇಳಿದರು.
ಚಿತ್ರಕಲಾ ಶಿಕ್ಷಕರಾದ ಗಿರೀಶ ಮಾತನಾಡುತ್ತಾ, ಕಾಯಕ ಜೀವಿಗಳನ್ನು ಸಂಘಟಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿದವರು ಬಸವಣ್ಣನವರು. ಕಲ್ಯಾಣದಲ್ಲಿ ಬಸವಣ್ಣನವರು ನಡೆಸಿದ ಪರಿವರ್ತನಾಂದೋಲನ ಸರ್ವ ಜನಾಂಗದವರಿಗೆ ಸಮಾನ ಅವಕಾಶ ನೀಡಿದ್ದರಿಂದಲೇ ‘ಬಸವ ಕಲ್ಯಾಣದಲ್ಲಿರುವ ಅನುಭವ ಮಂಟಪವೇ ಮಹಾಮನೆಯಾಗಲು’ ಸಾಧ್ಯವಾಯಿತೆಂದರು.

ಬಸವ ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿಜಾನಂದ ಸ್ವಾಮೀಜಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಏ ಜಿ ಪಿ ಅಬ್ದುಲ್ ಕಲಾಂ ಪ್ರಶಸ್ತಿ ಪಡೆದ ರಾಘವೇಂದ್ರ ಆಶಾಪೂರ ಅವರಿಗೆ ಗೌರವ ಸನ್ಮಾನ ನೀಡಲಾಯಿತು.

ವಚನ ಗಾಯನವನ್ನು ನಾಗೇಶ್ವರಪ್ಪ ಎಸ್. ಐ. ಹಾಗೂ ಸಂಗಡಿಗರು ನಡೆಸಿಕೊಟ್ಟರು, ಸಾಮೂಹಿಕ ಬಸವ ಪ್ರಾರ್ಥನೆಯನ್ನು ಹೇಮಾವತಿ ಮಾಡಿಸಿದರು. ಕಲ್ಯಾಣಮ್ಮನವರು ಸ್ವಾಗತಿಸಿದರು. ಪ್ರಾಸ್ತಾವಿಕ ನುಡಿಗಳನ್ನು ರಾಘವೇಂದ್ರ ಆಶಾಪುರ ಆಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಎಸ್. ಶಂಕರಗೌಡರು ಶರಣು ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸುಮಾರು 150 ಜನ ಶರಣ ಶರಣೆಯರು ಉಪಸ್ಥಿತರಿದ್ದರು.
