ಬಸವಕಲ್ಯಾಣ: ಶ್ರಾವಣ ಮಾಸ ಪ್ರವಚನಕ್ಕೆ ಗಂಗಾ ಮಾತಾಜಿಗೆ ಆಮಂತ್ರಣ

ಸಂಗಮೇಶ ಜವಾದಿ
ಸಂಗಮೇಶ ಜವಾದಿ

ಬಸವಕಲ್ಯಾಣ:

ಸಮಾನತೆ, ಭಾವೈಕ್ಯತೆ ಮತ್ತು ಕಾಯಕದ ನೆಲ ಬಸವಕಲ್ಯಾಣ ಶ್ರೀಕ್ಷೇತ್ರವು ಪವಿತ್ರ ಮಾನವೀಯತೆಯ ಮೌಲ್ಯಾಧಾರಿತ ಭೂಮಿಯಾಗಿದೆ ಎಂದು ಬಸವ ಧರ್ಮ ಪೀಠದ ಪೀಠಾಧಿಪತಿಗಳಾದ ಪೂಜ್ಯ ಡಾ. ಗಂಗಾ ಮಾತಾಜಿ ಅವರು ಹೇಳಿದರು.

ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮದಲ್ಲಿ ಜರುಗುತ್ತಿರುವ ರಾಷ್ಟ್ರೀಯ ಬಸವ ದಳದ ಮಹಾ ಅಧಿವೇಶನದಲ್ಲಿ ಶ್ರಾವಣ ಮಾಸದ ಪ್ರವಚನ ಆಮಂತ್ರಣ ಪತ್ರವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಮುಂಬರುವ ಶ್ರಾವಣ ಮಾಸದಲ್ಲಿ ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು ಆಯೋಜಿಸಿರುವ ಐತಿಹಾಸಿಕ ಪ್ರವಚನ ಕಾರ್ಯಕ್ರಮವು ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆಮಂತ್ರಣ ಪತ್ರ ಹಸ್ತಾಂತರದ ಬಳಿಕ ಮಾತನಾಡಿದ ರವೀಂದ್ರ ಕೋಳಕೂರ, “ಶ್ರಾವಣ ಮಾಸದಲ್ಲಿ ಬಸವಕಲ್ಯಾಣದಲ್ಲಿ ನಡೆಯಲಿರುವ ಪ್ರವಚನ ಕಾರ್ಯಕ್ರಮಕ್ಕೆ ಸರ್ವ ಭಕ್ತರಿಗೂ ಆದರದ ಸ್ವಾಗತವಿದೆ.

ಬಸವಕಲ್ಯಾಣ ಕ್ಷೇತ್ರವು ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಪವಿತ್ರ ನೆಲವಾಗಿದೆ. ಅಂತಹ ಪವಿತ್ರ ನೆಲದಲ್ಲಿ ಶ್ರಾವಣ ಮಾಸದ ಪ್ರವಚನಗಳು ಜರುಗುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಮತ್ತು ಸಮಿತಿ ಪದಾಧಿಕಾರಿಗಳು ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ಆಯೋಜಿಸಲಿದ್ದಾರೆ” ಎಂದು ತಿಳಿಸಿದರು.

ಸಾಹಿತಿ ಸಂಗಮೇಶ ಎನ್. ಜವಾದಿ ಅವರು ಮಾತನಾಡಿ, ಬಸವಣ್ಣನವರ ತತ್ವಗಳನ್ನು ಜನರ ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಪ್ರವಚನಗಳು ಪ್ರಮುಖ ಪಾತ್ರ ವಹಿಸುತ್ತವೆ. ಶ್ರಾವಣ ಮಾಸದ ದಿನಗಳಲ್ಲಿ ನಡೆಯುವ ಈ ಪ್ರವಚನಗಳಿಂದ ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಕಾಯಕದ ಮಹತ್ವ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.

ಬಸವಕಲ್ಯಾಣ ತಾಲೂಕು ರಾಷ್ಟ್ರೀಯ ಬಸವ ದಳದಿಂದ ಪ್ರವಚನ ಆಮಂತ್ರಣ ಪತ್ರವನ್ನು ಗಂಗಾಮಾತಾಜಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಸವಕಲ್ಯಾಣ ಬಸವ ಮಹಾಮಠದ ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿ, ಪೂಜ್ಯ ಲಾವಣ್ಯದೇವಿ ಮಾತಾಜಿ, ರಾಷ್ಟ್ರೀಯ ಬಸವದಳ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರಮೌಳಿ, ಜಯಶ್ರೀ ಪಾಟೀಲ, ಗಣ್ಯರಾದ ದತ್ತು ಗೌಡಗಾಂವೆ, ಮನೋಹರ ಮೇಧಾ, ಸುರೇಶ ಸ್ವಾಮಿ, ರಾಜೇಂದ್ರಕುಮಾರ ಗಂದಗೆ ಸೇರಿದಂತೆ ರಾಷ್ಟ್ರೀಯ ಬಸವ ದಳದ ಅನೇಕ ಮುಖಂಡರು ಮತ್ತು ಭಕ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *