ಬೆಂಗಳೂರು:
ವಿಶ್ವಕಲ್ಯಾಣ ಮಿಷನ್ ಚಾರಿಟಬಲ್ ಟ್ರಸ್ಟ್ ಹಾಗೂ ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿಯ ವತಿಯಿಂದ, ಬೆಂಗಳೂರಿನ ವಿಶ್ವಕಲ್ಯಾಣ ಮಿಷನ್‌ನ ಪೂಜ್ಯ ಬಸಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ, ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ 23ರಂದು ಬೆಳಿಗ್ಗೆ 10 ಗಂಟೆಯಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಬಸವ ಪಂಚಮಿ ಹಾಗೂ ದಾಸೋಹಮೂರ್ತಿ ನೀಲಗಂಗಾಂಬಿಕೆಯವರ ನೀಲಾಂಬಿಕಾ ಷಷ್ಠಿಯ ಅಂಗವಾಗಿ 831ನೇ ಲಿಂಗೈಕ್ಯ ಸಂಸ್ಕರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಮಾತೆ ಗಂಗಾದೇವಿಯವರು ಸಾನಿಧ್ಯ ವಹಿಸುವರು. ಮಾತೆ ಜ್ಞಾನೇಶ್ವರಿ, ಮಾತೆ ಕಸ್ತೂರಿದೇವಿ ಹಾಗೂ ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರು ಸಮ್ಮುಖ ವಹಿಸುವರು.
ಭಾರತ ಸರ್ಕಾರದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಶ್ರಾಂತ ಉಪಲೋಕಾಯುಕ್ತರು ಹಾಗೂ ನಿವೃತ್ತ ನ್ಯಾಯಮೂರ್ತಿಗಳಾದ ಸುಭಾಷ್ ಬಿ. ಆದಿಯವರು ಬಸವ ಧ್ವಜಾರೋಹಣ ನೆರವೇರಿಸುವರು.

12ನೇ ಶತಮಾನದ ಮಹಾನ್ ಶರಣರಾದ ಶರಣ ಬಹುರೂಪಿ ಚೌಡಯ್ಯನವರ ಸ್ಮರಣಾರ್ಥ ನೀಡಲಾಗುವ ಶ್ರೀ ಬಹುರೂಪಿ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಸಾಧು ಕೋಕಿಲ ಅವರಿಗೆ ಪ್ರದಾನ ಮಾಡಲಾಗುವುದು.
ಪೂಜ್ಯ ಮಾತೆ ಮಹಾದೇವಿಯವರು ರಚಿಸಿರುವ “ವಚನ ಸಂಗಮ”ಕೃತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ಅಧ್ಯಕ್ಷರಾದ ತಾಯ್ನಾಡು ರಾಘವೇಂದ್ರ ಅವರು ಲೋಕಾರ್ಪಣೆ ಮಾಡುವರು.
ಮಾತೆ ಜ್ಞಾನೇಶ್ವರಿಯವರು ಸಂಪಾದಿಸಿರುವ “ಸಚ್ಚಿದಾನಂದ ಪ್ರಿಯೆಯ ವಚನಗಳು”ಕೃತಿಯನ್ನು ಡಿ.ಎಕ್ಸ್. ಮ್ಯಾಕ್ಷನ್ ನಿರ್ದೇಶಕರಾದ ಡಾ. ಎಸ್.ಪಿ. ದಯಾನಂದ ಅವರು ಲೋಕಾರ್ಪಣೆ ಮಾಡುವರು.
ದಾವಣಗೆರೆಯ ಸುನೀತಾ ರಾಜು ಅವರು ರಚಿಸಿರುವ “ಅಂತರಂಗ ಇದೇ ಬಹಿರಂಗ”ಕೃತಿಯನ್ನು ಪವರ್ ಟಿ.ವಿ.ಯ ಮುಖ್ಯ ನಿರೂಪಕರಾದ ಶ್ರೀಮತಿ ಸಿಂಧೂರ ಅವರು ಲೋಕಾರ್ಪಣೆ ಮಾಡುವರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯರಾದ ಅಮರೇಶ ಮಿಣಜಗಿ, ಹಿರಿಯ ನ್ಯಾಯವಾದಿಗಳಾದ ಜೆ. ಜೈರಾಜ್ ಹಾಗೂ ಎಸ್.ವಿ.ವಿ.ಕೆ. ಕಾಲೇಜಿನ ಪ್ರಾಂಶುಪಾಲರು ಮತ್ತು ಕನ್ನಡ ವಿಚಾರವಾದಿಗಳಾದ ಪೂರ್ಣಿಮಾ ಹೆಗ್ಗಡೆ ಅವರು ಭಾಗವಹಿಸುವರು.
ರಾಜ್ಯಮಟ್ಟದ ಬಸವಾತ್ಮಜೆ ವಿದ್ಯಾರತ್ನ ಪ್ರಶಸ್ತಿ-2026ರ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪೂಜ್ಯ ಮಾತೆ ಮಹಾದೇವಿಯವರ ಸ್ಮರಣಾರ್ಥ “ಬಸವಾತ್ಮಜೆ ವಿದ್ಯಾರತ್ನ ಪ್ರಶಸ್ತಿ-2026” ನೀಡಿ ಗೌರವಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ಗಾಯಕಿ ವಿಜಯಲಕ್ಷ್ಮಿ ಈಶ್ವರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ವಿದುಷಿ ಇಂದಿರಾ ಕುಲಕರ್ಣಿಯವರ “ನಟರಾಜ ನಾಟ್ಯ ಕೇಂದ್ರ” ತಂಡದಿಂದ ವಿಶೇಷ ವಚನಾಭಿನಯ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಶರಣ ಬಂಧುಗಳಿಗಾಗಿ ಬೆಳಗಿನ ತಿಂಡಿ ಪ್ರಸಾದ ಹಾಗೂ ಮಧ್ಯಾಹ್ನದ ಊಟದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಜಾತಿ, ಮತ, ಪಂಥಗಳ ಯಾವುದೇ ಭೇದವಿಲ್ಲದೆ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
