ಕನ್ನೇರಿ ಸ್ವಾಮಿ ಹಿಂದೂ ಸಮಾವೇಶಕ್ಕೆ ದೊರೆಯದ ರಾಜಕೀಯ ಬೆಂಬಲ

ಬಸವಕಲ್ಯಾಣ

ಕನ್ನೇರಿ ಸ್ವಾಮಿಯ ಸಮಾವೇಶಕ್ಕೆ ತಾಲೂಕು ಆಡಳಿತ ಅನುಮತಿ ಕೊಡದಿರುವುದು ಸಂಘ ಪರಿವಾರಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಆದರೆ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶವನ್ನು ಮಾಡೇ ಮಾಡುತ್ತೇವೆ ಎಂದು ಹಠ ಹಿಡಿದಿರುವ ಸಂಘಟಕರಿಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಅವರು ನಿರೀಕ್ಷಿಸಿದಂತೆ ರಾಜಕೀಯ ಬೆಂಬಲವೂ ದೊರೆಯುತ್ತಿಲ್ಲ ಎನ್ನುವ ಸೂಚನೆಗಳಿವೆ.

ಬಸವ ಸಂಘಟನೆಗಳ, ಅನುಯಾಯಿಗಳ, ಲಿಂಗಾಯತ ಮಠಾಧೀಶರ ಆಕ್ರೋಶಕ್ಕೆ ಗುರಿಯಾಗಲು ಇಚ್ಚಿಸದೆ ಯಾವ ಪ್ರಮುಖ ಸ್ಥಳೀಯ ರಾಜಕಾರಣಿಯೂ ಇಲ್ಲಿಯವರೆಗೆ ಬಹಿರಂಗವಾಗಿ ಸಮಾವೇಶದ ಸಿದ್ಧತೆ ಕಾರ್ಯಗಳಲ್ಲಿ ಕಾಣಿಸಿಕೊಂಡಿಲ್ಲ.

ನಗರದ ಸೀತಾ ಕಾಲೋನಿಯಲ್ಲಿ ಜೂನ್ 10ರಂದು ಹಿಂದೂ ಸಮಾವೇಶದ ಕಾರ್ಯಾಲಯ ಉದ್ಘಾಟನೆಯಾಯಿತು. ಅಲ್ಲಿ ಯಾವ ಶಾಸಕ ಅಥವಾ ಪ್ರಭಾವಿ ರಾಜಕಾರಣಿಯೂ ಕಾಣಿಸಿಕೊಳ್ಳಲಿಲ್ಲ. ಮುಖ್ಯವಾಗಿ ಸ್ಥಳೀಯ ಶಾಸಕ ಶರಣು ಸಲಗರ ಕೈ ಕೊಟ್ಟಿದ್ದು ದೊಡ್ಡ ಹಿನ್ನಡೆಯೆಂದೇ ಹೇಳಬಹುದು.

ಬಸವ ಕಲ್ಯಾಣದಲ್ಲಿ ಆರೆಸ್ಸೆಸ್ ಅವರ ಕೆಲಸ ಮಾಡಿಕೊಡುವ ಮುಖ್ಯ ವ್ಯಕ್ತಿ ಸಲಗರ. ಬಸವ ಸಂಘಟನೆಗಳ ವಿರೋಧದ ನಡುವೆಯೂ ರಂಭಾಪುರಿ ಸ್ವಾಮೀಜಿಯ ದಸರಾ ದರ್ಬಾರಿನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿದ್ದರು. ಅವರು ಅದೇ ರೀತಿ ಇಲ್ಲೂ ದುಡಿಯುವ ಲಕ್ಷಣ ಸಧ್ಯಕ್ಕೆ ಕಾಣಿಸುತ್ತಿಲ್ಲ.

ಬೀದರ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಕೂಡ ಕೈ ಜೋಡಿಸುವ ಸಾಧ್ಯತೆ ಕಡಿಮೆ. ವಿವಾದ ಇರುವಲ್ಲಿ ಅವರು ಕಾಣಿಸಿಕೊಳ್ಳುವುದೇ ಇಲ್ಲ. ಭಾಲ್ಕಿ ಅಪ್ಪಾವರ ವಿರುದ್ಧ ಅವರು ಹೋಗೋದಿಲ್ಲ ಎಂಬುದು ಇಲ್ಲಿನ ಮಾತು.

ಹುಮ್ನಾಬಾದ ಶಾಸಕ ಸಿದ್ದು ಪಾಟೀಲ ಹಿಂದುತ್ವವಾದಿ. ಆದರೆ ಅವರೂ ಕನ್ನೇರಿ ಸ್ವಾಮಿ ಸಮಾವೇಶದ ಯಾವುದೇ ಸಿದ್ಧತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ.


ಬಸವಕಲ್ಯಾಣದಲ್ಲಿ ಕನ್ನೇರಿ ಸ್ವಾಮಿ ಸಮಾವೇಶದ ಪೂರ್ವಭಾವಿ ಸಭೆ

ಔರಾದ ಶಾಸಕ ಪ್ರಭು ಚವ್ಹಾಣ ಬಸವಪರ ರಾಜಕಾರಣಿ. ಯಾವ ಬಸವ ವಿರೋಧಿ ಕಾರ್ಯಕ್ರಮಗಳಿಗೆ ಅವರು ಬರುವುದಿಲ್ಲ ಎಂಬುದು ಬಸವಭಕ್ತರ ಅಭಿಪ್ರಾಯ.

ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಸೇರಿ ಈಗ ಆ ಪಕ್ಷಕ್ಕೂ ಬೇಡವಾಗಿರುವ ಗುಂಡುರೆಡ್ಡಿ ಕಮಲಾಪುರೆ ಈ ಸಮಾವೇಶದ ಮುಖ್ಯ ಸಂಘಟಕ. ಇವರಿಗೆ ವರ್ಚಸ್ಸಿಗಿಂತ ಬೇರೆ ರಾಜಕಾರಣಿಗಳ ಜೊತೆ ವೈಮನಸ್ಸೇ ಜಾಸ್ತಿ. ಯಾವುದೇ ದೊಡ್ಡ ಚುನಾವಣೆ ಗೆದ್ದಿಲ್ಲ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿರುವುದು ಇವರ ಹೆಗ್ಗಳಿಕೆ. ಬಜರಂಗದಳದ ಸಂಚಾಲಕ ರವಿ ನಾವದ್ಗೇಕರ್ ಮತ್ತಿತರ ಸಂಘ ಪರಿವಾರದ ಕಟ್ಟಾಳುಗಳು ಕೆಲವರು ಇವರ ಜೊತೆ ನಿಂತಿದ್ದಾರೆ.

ಇಲ್ಲಿಯವರೆಗೆ ಸಿದ್ಧತಾ ಸಭೆಗಳಲ್ಲಿ ಕೆಲವು ಪಂಚಪೀಠದ ಶಿವಾಚಾರ್ಯರು, ಆರೂಢ ಪರಂಪರೆಯ ಸ್ವಾಮಿಗಳು, ಆರೆಸ್ಸೆಸ್, ಬಜರಂಗದಳದ ಕಾರ್ಯಕರ್ತರು, ಬಿಜೆಪಿಯ ಸಣ್ಣಪುಟ್ಟ ಮುಖಂಡರು ಹೊರತುಪಡಿಸಿ ಬೇರಾರೂ ಭಾಗವಹಿಸಿಲ್ಲ.

ರಂಭಾಪುರಿ ಸ್ವಾಮೀಜಿ ಅವರ ದಸರಾ ದರ್ಬಾರ್ ನಡೆಸಿದ ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು, ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮಿಗಳು, ರಾಜೇಶ್ವರದ ಘನಲಿಂಗ ರುದ್ರಮುನಿ ಶಿವಾಚಾರ್ಯರು ಇದರಲ್ಲಿ ಸಕ್ರಿಯವಾಗಿದ್ದಾರೆ.

ದಸರಾ ದರ್ಬಾರ್ ಅನುಭವದಿಂದ ಇಲ್ಲಿನ ಬಸವ ಸಂಘಟನೆಗಳು ಪಾಠ ಕಲಿತಿರುವುದು ಈ ಬೆಳವಣಿಗೆಗೆ ಮುಖ್ಯ ಕಾರಣ.

೨೦೨೫ರಲ್ಲಿ ಗಂಭೀರವಾದ ಕ್ರಮ ತೆಗೆದುಕೊಂಡಿದ್ದರೆ ಬಸವಕಲ್ಯಾಣದಲ್ಲಿ ದಸರಾ ದರ್ಬಾರ್ ನಡೆಯುತ್ತಿರಲಿಲ್ಲ. ನಾವು ಯಾರದೋ ಮಾತು ಕೇಳಿ ತಟಸ್ಥರಾಗಿದ್ದರಿಂದ ಅವರು ಬಂದು ದರ್ಬಾರ್ ಮಾಡಿ ಹೋದರು. ಆದರೆ ಕನ್ನೇರಿ ಸ್ವಾಮಿ ಸಮಾವೇಶ ನಡೆಯಲು ಬಿಡುವುದಿಲ್ಲ. ಬಸವಭಕ್ತರಿಗೆ ಈ ಸಮಾವೇಶದ ಹುನ್ನಾರ ಅರ್ಥವಾಗಿದೆ. ಸಂಘಟಿತರಾಗಿ ನಾವು ಇದನ್ನು ತಡೆಯುತ್ತಿದ್ದೇವೆ, ಎಂದು ಬಸವ ಸಂಘಟನೆಯೊಂದರ ಪ್ರಮುಖರು ಹೇಳಿದರು.

ಭಾಲ್ಕಿ ಪಟ್ಟದ್ದೇವರು ಕನ್ನೇರಿ ಸ್ವಾಮಿ ಸಮಾವೇಶದ ಪ್ರತಿರೋಧದ ನಾಯಕತ್ವ ವಹಿಸಿರುವುದು ಮುಖ್ಯವಾದ ಬೆಳವಣಿಗೆ. ಇಂತಹ ವಿಷಯಗಳಲ್ಲಿ ಅವರು ಸಾಮಾನ್ಯವಾಗಿ ಗಟ್ಟಿ ನಿಲುವು ತೆಗೆದುಕೊಳ್ಳದಿದ್ದರೂ, ಅವರನ್ನು ಎದುರು ಹಾಕಿಕೊಂಡು ಇಲ್ಲಿ ರಾಜಕಾರಣ ಮಾಡಲಿಕ್ಕಾಗುವುದಿಲ್ಲ.

ಇಂತಹ ವಿರೋಧದ ನಡುವೆ ಯಾರಾದರು ರಾಜಕಾರಣಿ ಈ ಹಿಂದೂ ಸಮಾವೇಶಕ್ಕೆ ಕೈಜೋಡಿಸಿದರೆ ಜಿಲ್ಲೆಯ ಬಹುಸಂಖ್ಯಾತ ಬಸವಭಕ್ತರ ಮತಗಳನ್ನು ಕಳೆದುಕೊಳ್ಳುವುದು ಶತಸಿದ್ಧ. ಅಂತಹ ಕಾರ್ಯಕ್ಕೆ ಯಾರೂ ಕೈಹಾಕಲಾರರು, ಎಂದು ಬಸವಪರ ಸ್ವಾಮೀಜಿಯೊಬ್ಬರು ಹೇಳುತ್ತಾರೆ.

ಇಲ್ಲಿಯವರೆಗೆ ನಡೆದಿರುವ ಕನ್ನೇರಿ ಸ್ವಾಮಿ ಸಮಾವೇಶಗಳು ಲಿಂಗಾಯತ ರಾಜಕಾರಣಿಗಳ ಸಹಾಯದಿಂದಲೇ ನಡೆದಿವೆ ಎನ್ನುವುದನ್ನು ಗಮನಿಸಬೇಕು.

ಬಬಲೇಶ್ವರದಲ್ಲಿ ಎಂ.ಬಿ. ಪಾಟೀಲರ ವಿರುದ್ಧ ಸೋತಿರುವ, ಬಿಜೆಪಿ ಟಿಕೇಟ್ ಆಕಾಂಕ್ಷಿ ವಿಜುಗೌಡ ಪಾಟೀಲ ಹಾಗೂ ವಿಜಯಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕೈಜೋಡಿಸಿ ಭಾಗಿಗಳಾದರು.

ರಬಕವಿ-ಬನಹಟ್ಟಿಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ, ನಿಪ್ಪಾಣಿ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಸಮಾವೇಶಕ್ಕೆ ದುಡಿದರು.

ಶಹಾಪುರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ, ಮಾಜಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ, ಈಗಿನ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಗದಗದಲ್ಲಿ ನರಗುಂದ ಬಿಜೆಪಿ ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸಂಪೂರ್ಣ ರೀತಿಯಲ್ಲಿ ಕೈಜೋಡಿಸಿ ಭಾಗವಹಿಸಿದರು.

“ಇಲ್ಲೆಲ್ಲಾ ಲಿಂಗಾಯತ ರಾಜಕಾರಣಿಗಳನ್ನೇ ಬಸವ ಅನುಯಾಯಿಗಳ ವಿರುದ್ಧ ಬಳಸಿಕೊಂಡರು. ಅಲ್ಲಿರೋ ಬಸವಪರ ಸಂಘಟನೆಗಳು, ಮಠಾಧೀಶರು ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದರೆ ಅಲ್ಲೂ ಸಮಾವೇಶಗಳು ಬಂದ್ ಆಗುತ್ತಿದ್ದವು. ಇವರನ್ನ ಹೇಗೆ ವಿರೋಧಿಸಬೇಕೆಂದು ಬಸವ ಕಲ್ಯಾಣ ತೋರಿಸಿದೆ,” ಎಂದು ಪ್ರಮುಖ ಲಿಂಗಾಯತ ಮಠಾಧೀಶರೊಬ್ಬರು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
2 Comments
  • ಕರ್ನಾಟಕದಲ್ಲಿ ಈ ಆರೂಢ ಪರಂಪರೆಯ ಸ್ವಾಮಿಗಳು ಬಹುತೇಕ ಕಡೆ ತತ್ವ ಸಿದ್ಧಾಂತಃ ಮರೆತು ಈಗ ಅಪ್ಪಟ ಕೋಮುವಾದಿ ಆಗಿ ಹೋಗಿವೆ, ಅದಕ್ಕೆ ಕಾರಣ ಪೂರ್ವಶ್ರಮದ ವೀರಶೈವರ ಪ್ರಭಾವ, ಈಗ ಈ ಕನ್ಹೆರಿ ಸ್ವಾಮಿಯನ್ನು ಮೆರೆಸಲು ಅಡ್ಡಡುತ್ತಿವೆ. ಸಂಸ್ಕೃತ ಎಂದರೆ ಪಂಚಪ್ರಾಣ ಇವಕ್ಕೆ, ಅವಕ್ಕೂ ತಿಳಿಯೋದಿಲ್ಲ, ಕೇಳುವವರು ಲೆಕ್ಕಕ್ಕಿಲ್ಲ, ಇಂಥವೆಲ್ಲ ಅದು ಯಾಕೆ ಕಾವಿ ಹಾಕಿ ಸಮಾಜಕ್ಕೆ ತಲೆನೋವು ತಂದಿಡುತ್ತಾವೋ?

  • E Rajeshwara shaivacharya ennuva swami basava virodhiyagiddu enthaha uddeshap00rita manasthiti ಉಳ್ಳವರಾಗಿರುತ್ತಾರೆ ಇವರಿಗೆ ಸಮುದಾಯವೇ ಪಾಠ ಕಲಿಸುವ, ಉಡು

Leave a Reply

Your email address will not be published. Required fields are marked *