ಶರಣ ಸಾಹಿತ್ಯ ಪರಿಷತ್ತು ನಗರ ಯುವ ಘಟಕದ ಉದ್ಘಾಟನೆ
ಸುತ್ತೂರು:
ಮನುಷ್ಯರ ನಡುವೆ ಇದ್ದ ಜಾತಿಭೇದ; ಲಿಂಗಭೇದ; ವರ್ಗಭೇದ; ವರ್ಣಭೇದ ಮುಂತಾದ ಎಲ್ಲಾ ಭೇದಗಳ ವಿರೋಧಿಸಿ, ವೈಜ್ಞಾನಿಕವಾದ; ಪ್ರಜ್ಞಾಪೂರ್ಣವಾದ; ಮಾನವೀಯವಾದ ಮೌಲ್ಯಗಳ ತಳಹದಿಯ ಮೇಲೆ; ಮನುಷ್ಯನನ್ನೇ ಕೇಂದ್ರವಾಗಿಸಿಕೊಂಡು ಕಟ್ಟಲ್ಪಟ್ಟ ಏಕೈಕ ಧರ್ಮ ಬಸವಾದಿ ಪ್ರಮಥರ ಶರಣ ಧರ್ಮ; ಆ ಧರ್ಮದ ನೀತಿ ಸಂಹಿತೆಗಳೆ ವಚನಗಳು, ಅವು ಹಿಂದೆಂದಿಗಿಂತ ಇಂದೇ ಹೆಚ್ಚು ಪ್ರಸ್ತುತವಾಗಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ, ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಇಲ್ಲಿನ ಜೆಎಸ್ಎಸ್ ವಸತಿ ಶಾಲೆಯ ಸಹಯೋಗದೊಂದಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಏರ್ಪಡಿಸಿದ್ದ, ‘ಯುವ ಘಟಕ’ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ‘ವಚನಗಳ ಪ್ರಸ್ತುತತೆ’ ಬಗ್ಗೆ ಮಾತನಾಡುತ್ತಿದ್ದರು.
ವಚನಗಳು ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಿವೆ, ಬದುಕಿದ್ದನ್ನೇ ಬರೆದಿದ್ದ, ಬರೆದದ್ದನ್ನೆ ಬದುಕಿದ್ದ, ಅಪ್ಪಟ ಕನ್ನಡ ಕೃಷಿಕರ ಮನೋಭೂಮಿಕೆಯ ಉತ್ಕೃಷ್ಟ ಅಕ್ಷರೋತ್ಪನ್ನಗಳಾಗಿರುವ ಅವು, ಕಾವ್ಯಾತ್ಮಕತೆಯಿಂದಾಗಿ ಒಮ್ಮೊಮ್ಮೆ ಓದಿದಾಗಲೊಂದೊಂದು ತೆರನಾದ, ನವನವೀನವಾದ ಒಳನೋಟಗಳನ್ನೂ, ಆಶಯಗಳನ್ನೂ, ನೈತಿಕ ಮೌಲ್ಯಗಳನ್ನೂ, ಮಾನವೀಯವಾದ ರೀತಿ ನೀತಿಗಳನ್ನು ಪ್ರಸಾದಿಸುತ್ತಲೇ ಬರುತ್ತಿವೆ.

ಹಾಗಾಗಿಯೇ ನಾವು ಹೊರಳಿ ಮರಳಿ ಅವುಗಳಲ್ಲಿಗೇ ಹೋಗುತ್ತಿದ್ದೇವೆ, ಹೊಸ ಭಾಷಿಕ ಪದಗಳ ಜೊತೆಗೆ ಹೊಸ ಮಂಥನಗಳನ್ನೂ, ಆದರ್ಶ ಬದುಕಿನ ಆಶಯಗಳನ್ನೂ, ಹೊಸ ಸುಸಂಸ್ಕೃತಿಯ ದೃಷ್ಟಿಕೋನಗಳನ್ನು ಕಲ್ಪಿಸಿಕೊಡುವ ಅವು, ಅನುಭವ ಹಾಗೂ ಅನುಭಾವದ ಕೂಡಲ ಸಂಗಮವಾಗಿದ್ದು, ಇಂದಿಗೂ ಅವು ಪ್ರಸ್ತತವೇ ಆಗಿವೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಂದಿನ ಶರಣರ ವಚನಗಳಿಗೆ ಇಂದಿನ ನಾವೇ ಪ್ರಸ್ತುತರಾಗಿಲ್ಲ ಎಂದು ವಿಷಾದಿಸಿದರು.
ಅದಕ್ಕೂ ಮೊದಲು ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟನೆ ಮಾಡಿ ಮಾತನಾಡಿದ ಮೈಸೂರು ವಿ.ವಿ.ಯ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು, ಶಿಕ್ಷಣದೊಂದಿಗೆ ಜೀವನದ ಮೌಲ್ಯಗಳನ್ನೂ ಮಕ್ಕಳಿಗೆ ನೀಡಬೇಕೆಂಬ ಸದಾಶಯದಿಂದ ಪೂಜ್ಯ ರಾಜೇಂದ್ರ ಶ್ರೀಗಳು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ಅದರ ಭಾಗವೇ ಯುವ ಘಟಕ, ಮಕ್ಕಳಿಗೆ ವಚನಗಳ ಉದ್ದೇಶ, ವಚನಕಾರರ ಆಶಯಗಳನ್ನು ಪರಿಚಯಿಸಿ, ಉತ್ತಮ ಸಮಾಜ ನಿರ್ಮಿಸುವುದು ಯುವ ಘಟಕದ ಮುಖ್ಯ ಗುರಿಯಾಗಬೇಕು, ಯುವ ಪೀಳಿಗೆಗೆ ವಚನಗಳು ಬಹುಮುಖ್ಯವಾಗಿವೆ, ಅವರುಗಳು ಅವುಗಳನ್ನೋದಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದರು.
ಪ್ರಧಾನ ಭಾಷಣ ಮಾಡಿದ ನವದೆಹಲಿಯ ನೆಹರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ. ವಿಶ್ವನಾಥ, ಈ ನೆಲದ ಮೂಲಭಾಷೆ ವಚನಗಳಲ್ಲಿದೆ, ಅದು ಸರಳವಾಗಿದ್ದು ಎಲ್ಲರಿಗೂ ಅರ್ಥವಾಗುವಂತಿದೆ, ಬಹುಮುಖ್ಯವಾಗಿ ಕಾಯಕ, ದಾಸೋಹ, ಮೌಢ್ಯತೆ ನಿವಾರಣೆಗೆ ವಚನಕಾರರು ಮಹತ್ವ ನೀಡಿ, ಸಮಾಜದ ಉದ್ಧಾರಕ್ಕಾಗಿ ತನು ಮನಗಳಿಂದ ಸವೆದರು, ತಮ್ಮ ವಚನಗಳ ಮೂಲಕ ನಮಗೊಂದು ಸುಸಂಸ್ಕೃತ ಸಮಾಜದ ತಳಹದಿಯ ಹಾಕಿಕೊಟ್ಟರು ಎಂದರು.
ಸಾನಿಧ್ಯ ವಹಿಸಿದ್ದ ಸುತ್ತೂರು ಮಠದ ಕಿರಿಯ ಶ್ರೀಗಳಾದ ಶ್ರೀ ಜಯರಾಜೇಂದ್ರ ಸ್ವಾಮೀಜಿಯವರು, ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದೆ ಹಾಗೂ ನೀಡುತ್ತಲೂ ಇದೆ, ಅದರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.
ಸಮಾಜವನ್ನು ಸಂಸ್ಕರಿಸುವ ಕಾಯಕ ಅದರದ್ದಾಗಿದ್ದು, ಅದರ ಒಂದು ಭಾಗವಾದ ಯುವ ಘಟಕವಿಂದು ಉದ್ಘಾಟನೆಯಾಗುತ್ತಿರುವುದು ಬಹು ಸಂತೋಷದ ವಿಚಾರ, ಅದರ ಆಶಯದಂತೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಚನಗಳ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಆಗ ಖಂಡಿತ ಅವರ ಮನಸ್ಸು ಪರಿಶುದ್ಧವಾಗುತ್ತದೆ, ಮನ ಶುದ್ಧವಾದರೆ ಸಹಜವಾಗಿ ವ್ಯಕ್ತಿತ್ವದ ವಿಕಸನವಾಗುತ್ತದೆ, ಶ್ರವಣ, ಮನನ, ನಿಧಿಧ್ಯಾಸನದಿಂದ ವಚನಗಳನ್ನು ಆಳವಾಗಿ ಅರಿತು, ಅವುಗಳ ಸತ್ವ ತತ್ವಗಳ ತಿಳಿದು ಬದುಕಿಗೆ ಅಳವಡಿಸಿಕೊಳ್ಳಬೇಕು.

ಮಾತು ಮನುಷ್ಯನಿಗೆ ಭಗವಂತ ಕರುಣಿಸಿದ ಶ್ರೇಷ್ಠ ಕಲೆ, ಒಳ್ಳೆಯ ಮಾತು ಸ್ನೇಹ ಸಂಬಂಧ ಬೆಳೆಸುತ್ತವೆ, “ಮಾತನಾಡಿದರೆ ಮುತ್ತಿನ ಹಾರದಂತಿರಬೇಕು…” ಹಾಗೂ “ಕಳಬೇಡ ಕೊಲಬೇಡ…” ಎಂಬಂತಹ ಶ್ರೇಷ್ಠ ವಚನಗಳು ಇದನ್ನೇ ಸಾರುತ್ತಿವೆ, ಶರಣರ ನಾಲ್ಕಾರು ವಚನಗಳು ಹೇಳುವಂತೆ ಬದುಕಿದರೂ ನಮ್ಮ ಜೀವನ ಮಾನ್ಯವೂ ಧನ್ಯವೂ ಆಗುತ್ತದೆ ಎಂದರು.
ಸ್ವರಚಿತ ಆಧುನಿಕ ವಚನಗಳನ್ನು ರಚಿಸಿದ್ದ ೩೦ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮವಾಗಿ ವಚನ ರಚಿಸಿದ್ದ ಐದು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ, ಉಳಿದವರೆಲ್ಲರಿಗೂ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಲಮಟ್ಟಿಯ ಡಾ. ರುದ್ರಮುನಿ ಸ್ವಾಮೀಜಿ, ಜೆಎಸ್ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್ ಪಿ ಉದಯಶಂಕರ, ಸಹಾಯಕ ಸಂಯೋಜನಾಧಿಕಾರಿ ವೀರಭದ್ರಯ್ಯ, ದತ್ತಿ ದಾನಿಗಳಾದ ಬ್ರಿಗೇಡಿಯರ್ ಶಿವಾನಂದ ಮತ್ತು ಎಂ.ಎ. ಚಿದಾನಂದ, ಯುವ ಘಟಕದ ಪದಾಧಿಕಾರಿಗಳು, ಜೆಎಸ್ಎಸ್ ಸಂಸ್ಥೆಗಳ ಮುಖ್ಯಸ್ಥರು, ಗುರುಬಳಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.
ಯುವ ಘಟಕದ ಸಂಚಾಲಕಿ ರಶ್ಮಿ ಷಡಕ್ಷರಿ ಎಲ್ಲರನ್ನೂ ಸ್ವಾಗತಿಸಿದರು, ಗೌರವ ಸಲಹೆಗಾರರಾದ ಡಾ. ಶೈಲಜಾ ನಾಗರಾಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವ ಘಟಕದಿಂದ ಸಾಮೂಹಿಕವಾಗಿ ವಚನ ಗಾಯನ ಹಾಗೂ ಪ್ರಾರ್ಥನೆ ಮಾಡಲಾಯಿತು. ಕಾರ್ಯದರ್ಶಿ ಸುನೀತಾ ಶರಣು ಸಮರ್ಪಣೆ ಸಲ್ಲಿಸಿದರು. ವೇದಿಕೆಯ ಮೇಲೆ ಕದಳಿ ವೇದಿಕೆಯ ಅಧ್ಯಕ್ಷರಾದ ಶೋಭಾರಾಣಿ ಜೈಪ್ರಕಾಶ್ ಉಪಸ್ಥಿತರಿದ್ದರು.

ಯುವ ಘಟಕದ ನೂತನ ಸಂಚಾಲಕಿ ರಶ್ಮಿ ಷಡಕ್ಷರಿ ಅವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಪರಿಷತ್ತಿನ ಉಪಾಧ್ಯಕ್ಷರುಗಳಾದ ಚಿನ್ನಸ್ವಾಮಿ, ಎಂ.ಎ. ನೀಲಾಂಬಿಕಾ, ಕಾರ್ಯದರ್ಶಿ ನಂದೀಶ, ಖಜಾಂಚಿ ಡಾ. ಮುದ್ದುಮಲ್ಲೇಶ, ಸಂಚಾಲಕರಾದ ಡಾ.ಲೋಕೇಶಪ್ಪ, ಕಲ್ಯಾಣಿ ನಟರಾಜ ಮುಂತಾದವರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

ಎಲ್ಲಾ ಕಾಲೇಜುಗಳಲ್ಲಿ ವಚನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಮತ್ತು ಇದೆ ರೀತಿಯಾಗಿ ವಚನಗಳ ಮೂಲ ಆಶಯವನ್ನ ತಿಳಿಸಿದರೆ ಬೇಗ ಬಸವಣ್ಣನವರ ಧರ್ಮ ಅರ್ಥವಾಗುತ್ತದೆ