‘ಬಸವಾದಿ ಶರಣರು ನುಡಿದಂತೆ ನಡೆದು ಜಗತ್ತಿನಲ್ಲಿ ಚಿರಸ್ಥಾಯಿಯಾದರು’

ಸಿದ್ಧಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ

ಬಸವನಬಾಗೇವಾಡಿ:

ಪ್ರತಿಯೊಬ್ಬರೂ 12ನೇ ಶತಮಾನದ ಬಸವಾದಿ ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಂತಾಗಬೇಕೆಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ವಚನ‌ ಶಿಲಾ ಮಂಟಪದ ಆವರಣದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಶಿವಯೋಗಿಗಳವರ 92ನೇ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ಗುರುವಂದನ ಸಮಾರಂಭದ ಸಾನಿಧ್ಯ ವಹಿಸಿ, ಉದ್ಘಾಟಿಸಿ ಮಾತನಾಡಿದರು.

ಬಸವಾದಿ ಶರಣರು ಸಾಮಾನ್ಯರಂತೆ ಬದುಕಿ ತಮ್ಮ ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ನೀಡಿದ್ದಾರೆ. ಅವರು ನುಡಿದಂತೆ ನಡೆಯುವ ಮೂಲಕ ಜಗತ್ತಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಶ್ರೀಮಠದ ಲಿಂಗೈಕ್ಯ ಚನ್ನಬಸವ ಸ್ವಾಮೀಜಿಯವರು ತಮ್ಮ ಬದುಕಿನಲ್ಲಿ ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಂಡು ಶರಣ ತತ್ವದಂತೆ ಆಧ್ಯಾತ್ಮ ಬದುಕು ಸಾಗಿಸಿದರು. ಇವರು ವಚನ ಸಾಹಿತ್ಯ ಶಾಶ್ವತವಾಗಿ ಸಂರಕ್ಷಣೆ ಮಾಡುವ ಉದ್ದೇಶದಿಂದ ವಚನ ಶಿಲಾ ಮಂಟಪವನ್ನು ನಿರ್ಮಿಸಿದ್ದು ಶರಣ ಪರಂಪರೆಗೆ ಮಾದರಿಯಾಗಿದೆ. ಇವರು ರಾಜ್ಯ, ಹೊರ ರಾಜ್ಯಗಳಲ್ಲಿ ಅಪಾರ ಭಕ್ತ ಸಮೂಹ ಸಂಪಾದಿಸಿದ್ದಾರೆ ಎಂದರು.

ನೇತೃತ್ವ ವಹಿಸಿದ್ದ ವಿರಕ್ತಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶ್ರೀಮಠವು ಬಸವಾದಿ ಶರಣರ ತತ್ವವನ್ನು ನಿರಂತರ ಪ್ರಸಾರ ಮಾಡುತ್ತಿದೆ. ನಮ್ಮ ಹಿರಿಯ ಶ್ರೀಗಳಾಗಿದ್ದ ಲಿಂಗೈಕ್ಯ ಚನ್ನಬಸವ ಸ್ವಾಮೀಜಿಯವರ ಸದಾಯಶಯದಂತೆ ಶ್ರೀಮಠವು ಮುನ್ನಡೆಯುತ್ತಿದೆ ಎಂದರು.

ಸಾನಿಧ್ಯವನ್ನು ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಗುಳೇದಗುಡ್ಡದ ಕಾಶಿನಾಥ ಸ್ವಾಮೀಜಿ, ಚಡಚಣದ ಷಡಾಕ್ಷರಯ್ಯ ಸ್ವಾಮೀಜಿ, ಹೂವಿನಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮನವರು, ಹೊನವಾಡದ ಬಾವುರಾವ ಮಹಾರಾಜರು, ಕೊಡೇಕಲ್ಲದ ಶರಣಮ್ಮ ಅಮ್ಮನವರು, ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಸೇರಿದಂತೆ ಇತರರು ಇದ್ದರು.

ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಎಸ್.ಎಲ್. ಓಂಕಾರ, ಶಶಿಕಲಾ ನಾಯಕೋಡಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *