ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡಿ : ಶಂಕರಗೌಡ ಬಿರಾದಾರ

ಬಸವರಾಜ ನಂದಿಹಾಳ
ಬಸವರಾಜ ನಂದಿಹಾಳ

ಬಸವನಬಾಗೇವಾಡಿ :

ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿ ಸಮಗ್ರ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಎಸ್. ಬಿರಾದಾರ ಒತ್ತಾಯಿಸಿದ್ದಾರೆ.

2025ರಲ್ಲಿ ಬಸವನಬಾಗೇವಾಡಿಯನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಪ್ರತ್ಯೇಕಿಸಿ ಸ್ವತಂತ್ರ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಪ್ರಾಧಿಕಾರ ಸ್ಥಾಪನೆಯಾಗಿ ವರ್ಷ ಕಳೆದರೂ ಈವರೆಗೆ ನಯಾಪೈಸೆ ಅನುದಾನ ನೀಡಿಲ್ಲ. ಇದು ಬಸವಣ್ಣನವರ ಜನ್ಮಭೂಮಿಯ ಅಭಿವೃದ್ಧಿ ಕುರಿತು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸವನಬಾಗೇವಾಡಿ, ಬಸವಣ್ಣನವರ ತಾಯಿಯ ತವರೂರು ಇಂಗಳೇಶ್ವರ, ಹಡಪದ ಅಪ್ಪಣ್ಣನವರ ಜನ್ಮಸ್ಥಳ ಮಸಬಿನಾಳ, ಮಡಿವಾಳ ಮಾಚಿದೇವರ ಕ್ಷೇತ್ರ ದೇವರಹಿಪ್ಪರಗಿ, ನೀಲಾಂಬಿಕೆಯ ಐಕ್ಯಸ್ಥಳ ಹಾಗೂ ನುಲಿಯ ಚಂದಯ್ಯನವರ ಜನ್ಮಸ್ಥಳ ಶಿವಣಗಿ ಸೇರಿದಂತೆ ಶರಣರ ಐತಿಹಾಸಿಕ ಕ್ಷೇತ್ರಗಳನ್ನು ಒಳಗೊಂಡಿರುವ ಪ್ರಾಧಿಕಾರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಸವ ಜನ್ಮಸ್ಮಾರಕದ ಸುತ್ತಲಿನ ಪ್ರದೇಶವನ್ನು ಸೌಂದರ್ಯೀಕರಣಗೊಳಿಸಿ, 180 ಅಡಿಗೂ ಎತ್ತರದ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಬೇಕು. ಬಸವ ಅಧ್ಯಯನ ಕೇಂದ್ರ, ಆಧುನಿಕ ದಾಸೋಹ ಭವನ, ಯಾತ್ರಿ ನಿವಾಸ, ಬಸವಾದಿ ಪ್ರಮಥರ ಪ್ರತಿಮೆಗಳು, ಉದ್ಯಾನವನ, ಶರಣ ಗ್ರಂಥಾಲಯ ಹಾಗೂ ಬಸವ ಧ್ಯಾನಮಂದಿರ ನಿರ್ಮಿಸಬೇಕು. ಜನ್ಮಸ್ಮಾರಕದ ಸುತ್ತಲಿನ ಮನೆಗಳಿಗೆ ಸೂಕ್ತ ಪರ್ಯಾಯ ನಿವೇಶನ ಮತ್ತು ಪರಿಹಾರ ನೀಡಿ ಅಗತ್ಯ ಜಮೀನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮಸಬಿನಾಳದಲ್ಲಿ ಹಡಪದ ಅಪ್ಪಣ್ಣನವರ ಜನ್ಮಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಅಗತ್ಯವಿರುವ ಮನೆಗಳನ್ನು ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ನೀಡಬೇಕು. ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ವಿಶಾಲ ಸ್ಥಳ ಖರೀದಿಸಲು ಅನುದಾನ ನೀಡಬೇಕು. ಪ್ರಾಧಿಕಾರಕ್ಕೆ ಖಾಯಂ ಆಯುಕ್ತರನ್ನು ಹಾಗೂ ದೇವಸ್ಥಾನಕ್ಕೆ ಅಗತ್ಯ ಖಾಯಂ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿವರ್ಷ ಬಸವನಬಾಗೇವಾಡಿಯಲ್ಲಿ ರಾಜ್ಯಮಟ್ಟದ ಬಸವ ಉತ್ಸವ ಆಯೋಜಿಸಬೇಕು. ಬಸವ ಜಯಂತಿಯಂದು ಬಸವ ಜನ್ಮಸ್ಮಾರಕದಲ್ಲಿ ನಡೆಯುವ ಬಾಲ ಬಸವಣ್ಣನವರ ತೊಟ್ಟಿಲೋತ್ಸವಕ್ಕೆ ಮುಖ್ಯಮಂತ್ರಿ ಕಡ್ಡಾಯವಾಗಿ ಆಗಮಿಸಿ ಚಾಲನೆ ನೀಡುವ ಸಂಪ್ರದಾಯ ಆರಂಭಿಸಬೇಕು.

ಬಸವನಬಾಗೇವಾಡಿಯಿಂದ ಬೆಂಗಳೂರಿಗೆ ಕೆಕೆಆರ್‌ಟಿಸಿ ವತಿಯಿಂದ ಕಲ್ಯಾಣ ರಥ ಬಸ್ ಸೇವೆ ಪ್ರಾರಂಭಿಸಬೇಕು ಎಂಬುದು ಸೇರಿದಂತೆ 14 ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಸರ್ಕಾರ, ಆ ಘೋಷಣೆಯನ್ನು ದಾಖಲೆಗಳಿಗೆ ಸೀಮಿತಗೊಳಿಸದೆ ಅವರ ಜನ್ಮಭೂಮಿಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಬೆಳಗಾವಿ ಅಧಿವೇಶನದಲ್ಲಿ ವಿಶೇಷ ಅನುದಾನ ಘೋಷಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕು. ಬಸವಣ್ಣನವರ ಜನ್ಮಭೂಮಿಯ ಅಭಿವೃದ್ಧಿ ನಾಡಿನ ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದು ಶಂಕರಗೌಡ ಬಿರಾದಾರ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *