ಆದರ್ಶ ಜೀವನದ ಮಾರ್ಗ ತೋರಿಸಿದ ಬಸವಣ್ಣ: ಸಾಣೇಹಳ್ಳಿ ಸ್ವಾಮೀಜಿ

ಸಾಣೇಹಳ್ಳಿಯಲ್ಲಿ ಬಸವ ಜಯಂತಿ, ಶಿವಕುಮಾರ ಸ್ವಾಮೀಜಿ ಜಯಂತಿ, ರಥೋತ್ಸವ

ಸಾಣೇಹಳ್ಳಿ

ಇಲ್ಲಿನ ಶ್ರೀಮಠದ ಆವರಣದಲ್ಲಿ ನಡೆದ ಬಸವ ಜಯಂತಿ ಹಾಗೂ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 112ನೆಯ ಜಯಂತಿ ಕಾರ್ಯಕ್ರಮ ಹಾಗೂ ರಥೋತ್ಸವ ಪ್ರಯುಕ್ತ ಬಳಗ್ಗೆ ಶಿವಧ್ವಜಾರೋಹಣ, ಪ್ರಾರ್ಥನೆ, ಶಿವಮಂತ್ರ ಲೇಖನ ಹಾಗೂ ಚಿಂತನ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಜಗತ್ತಿಗೆ ಸಮಾನತೆ ಮತ್ತು ಕಾಯಕದ ಮಹತ್ವವನ್ನು ಸಾರಿದ 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ತತ್ವಗಳು ಮತ್ತು ಅವರ ವಚನ ಸಾಹಿತ್ಯದ ಪ್ರಸ್ತುತತೆ ಇಂದು‌ ಅಗತ್ಯವಾಗಿ ಎಲ್ಲ‌ ವರ್ಗದವರಿಗೂ ಬೇಕಾಗಿದೆ.

“ಬುದ್ಧನನ್ನು ಹೇಗೆ ಏಷ್ಯಾದ ಬೆಳಕು ಎಂದು ಕರೆಯುತ್ತೇವೆಯೋ, ಹಾಗೆಯೇ ಬಸವಣ್ಣನವರು ಈ ಜಗತ್ತಿನ ಬೆಳಕು. ಬಸವಣ್ಣನವರು ಕೇವಲ ಧಾರ್ಮಿಕ ಸುಧಾರಕರಲ್ಲ, ಬದಲಾಗಿ ಅವರು ಬದುಕು ನಡೆಸುವ ರೀತಿ, ನುಡಿ, ಆಹಾರ ಕ್ರಮ ಹಾಗೂ ಆದರ್ಶ ಜೀವನದ ಸಿದ್ಧಾಂತಗಳನ್ನು ಬೋಧಿಸಿದ ಸಾಂಸ್ಕೃತಿಕ ನಾಯಕ.

ಬಸವಣ್ಣನವರ ಬದುಕು ‘ನುಡಿದಂತೆ ನಡೆ’ ಎಂಬ ತತ್ವಕ್ಕೆ ಸಾಕ್ಷಿಯಾಗಿತ್ತು.
“ನಡೆಯಲರಿಯದೆ, ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು?” ಎಂಬ ವಚನದ ಮೂಲಕ ಅವರು ಭಕ್ತಿಗಿಂತ ಮನುಷ್ಯನ ನಡವಳಿಕೆ ಮುಖ್ಯ,
ಪರರ ಸುಖವೇ ನಮ್ಮ ಸುಖ, “ಅವರ ಸುಖವೆನ್ನ ಸುಖ, ಅವರ ದುಃಖವೆನ್ನ ದುಃಖ” ಎನ್ನುವ ಮೂಲಕ ಸಮಾಜದ ಹಿತದಲ್ಲಿಯೇ ನಮ್ಮ ಹಿತ ಅಡಗಿದೆ ಎಂಬ ಮಾನವೀಯ ಗುಣ ಬೆಳಸಿಕೊಳ್ಳಬೇಕು.

ಸಜ್ಜನರ ಮನಸ್ಸಿಗೆ ನೋವು ನೀಡಬೇಡಿ. “ಕೂಡಲಸಂಗನ ಶರಣರು ಮನನೊಂದರೆ ನಾನು ಬೆಂದೆನಯ್ಯಾ” ನಾವು ಇತರರನ್ನು ಅವಹೇಳನ ಮಾಡುವುದರಿಂದ ಅಥವಾ ಕೆಟ್ಟದಾಗಿ ನಡೆಸಿಕೊಳ್ಳುವುದರಿಂದ ಅವರ ಮನಸ್ಸಿಗೆ ನೋವಾಗುತ್ತದೆ. ಅಂತಹ ನೋವು ನಮ್ಮ ಬದುಕಿನ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಒಂದು ಚೆಂಡನ್ನು ಗೋಡೆಗೆ ಎಸೆದರೆ ಅದು ಮತ್ತೆ ನಮ್ಮ ಬಳಿಯೇ ಹೇಗೆ ಮರಳಿ ಬರುವುದೋ, ಹಾಗೆಯೇ ನಾವು ಇತರರಿಗೆ ಮಾಡುವ ಕೇಡು ನಮಗೇ ತಿರುಗುತ್ತದೆ ಎಂದು ಎಚ್ಚರಿಸಿದರು.

ಬಸವಣ್ಣನವರ ವಚನಗಳು ಮುತ್ತಿನ ಹಾರದಂತೆ ಸ್ಪಷ್ಟವಾಗಿ ಮತ್ತು ಮೌಲ್ಯಯುತವಾಗಿವೆ. ಕೇವಲ ಒಂದು ದಿನದ ಆಚರಣೆಗೆ ಬಸವ ಜಯಂತಿ ಸೀಮಿತವಾಗಬಾರದು. ವಚನಗಳನ್ನು ಓದಿ, ಅರ್ಥೈಸಿಕೊಂಡು, ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿಯ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ.

ತಮ್ಮ ಸತತ ಪ್ರಯತ್ನ, ಸಾಧನೆ ಮತ್ತು ದೃಢ ಸಂಕಲ್ಪದಿಂದ ಆಧ್ಯಾತ್ಮಿಕ ಶಿಖರಕ್ಕೇರಿದವರು ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಕಾಶಿಯಲ್ಲಿ ವೇದ, ಉಪನಿಷತ್ ಹಾಗೂ ಭಗವದ್ಗೀತೆಯ ಉನ್ನತ ವ್ಯಾಸಂಗ ಮಾಡಿ ಸಂಸ್ಕೃತ ವಿದ್ವಾಂಸರಾಗಿದ್ದರು. ನಂತರ ಭಕ್ತರ ಆಶಯದಂತೆ ಬೇಲೂರು ತಾಲ್ಲೂಕಿನ ಯಲಹಂಕ ಮಠದ ಜವಾಬ್ದಾರಿ ವಹಿಸಿಕೊಂಡರು. ಅಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಮಠವನ್ನು ಸುಧಾರಿಸಿ, ಭಕ್ತರಲ್ಲಿ ಸಾಮರಸ್ಯ ಬೆಳೆಸುವಲ್ಲಿ ಅವರು ಯಶಸ್ವಿಯಾಗಿದ್ದರು.

ಶ್ರೀಗಳ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟವೆಂದರೆ ಅವರ ಅಧಿಕಾರ ತ್ಯಾಗ. “ಯಾವುದೇ ವ್ಯಕ್ತಿ ಸಾಯುವವರೆಗೂ ಪೀಠದಲ್ಲಿ ಇರಬಾರದು, ಮತ್ತೊಬ್ಬರಿಗೆ ಅವಕಾಶ ನೀಡಬೇಕು” ಎಂಬ ಉದಾತ್ತ ಚಿಂತನೆಯೊಂದಿಗೆ ತಮ್ಮ 60ನೇ ವಯಸ್ಸಿಗೆ ಮಠದ ಜವಾಬ್ದಾರಿಯಿಂದ ನಿವೃತ್ತಿ ಘೋಷಿಸಿದರು. ತದನಂತರ 1979ರಲ್ಲಿ ಈಗಿನ ಜಗದ್ಗುರುಗಳಾದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಪಟ್ಟಾಭಿಷೇಕ ಮಾಡಿ, ಸಂತರಾಗಿ ಸಾಸಲುಹಳ್ಳದ ಶ್ರೀ ಗುರುಶಾಂತ ನಿಕೇತನ ಆಶ್ರಮದಲ್ಲಿ ಅಂತಿಮ ದಿನಗಳನ್ನು ಕಳೆದರು.

“ಶ್ರೀಗಳ ದಿನಚರಿ ಅಥವಾ ಅವರ ‘ಆತ್ಮನಿವೇದನೆ’ ಮತ್ತು ‘ದಿಟ್ಟ ಹೆಜ್ಜೆ ತೀರದ ಪಯಣ’ ಕೃತಿಗಳನ್ನು ಓದಿದರೆ ನಮ್ಮ ಬದುಕು ಸನ್ಮಾರ್ಗದತ್ತ ಸಾಗುತ್ತದೆ. ಅವರ ತ್ಯಾಗಮಯ ಜೀವನ ಇಂದಿನ ಪೀಳಿಗೆಗೆ ಪ್ರೇರಣೆ,” ಎಂದರು ಹೇಳಿದರು.

ಸಂಗೀತ ಶಿಕ್ಷಕ‌ ನಾಗರಾಜ ಹೆಚ್.ಎಸ್. ವಚನಗೀತೆಗಳನ್ನು ಹಾಡಿದರು. ಸಂಧ್ಯಾ ಪಿ.ಎಲ್. ಸ್ವಾಗತಿಸಿ ನಿರೂಪಿಸಿದರು. ಶೋಭ ಎಸ್. ಪಿ. ಧ್ವಜಾರೋಹಣ ನೆರವೇರಿಸಿದರು. ಶಿಬಿರದ ವಿದ್ಯಾರ್ಥಿಗಳು, ರಂಗಶಾಲೆಯ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕರು, ಅಧ್ಯಾಪಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *