ಬಸವಣ್ಣ ವ್ಯಕ್ತಿಯಲ್ಲ ತತ್ವ, ಚೈತನ್ಯಮೂರ್ತಿ : ಗಿರಿಜಕ್ಕ ಧರ್ಮರಡ್ಡಿ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ:

ಬಸವಣ್ಣನವರೆಂದರೆ ಇಡೀ ೧೨ನೇ ಶತಮಾನದ ಶರಣ ಸಮೂಹವೇ ಕಾಣಿಸುತ್ತದೆ. ಈ ಕಾರಣದಿಂದಾಗಿಯೇ ಅಂದಿನ ಶರಣರ ವಚನಗಳಲ್ಲಿ ಗುರು, ದೇವರು, ದೇವರಿಗೆ ಹೆಸರಿಟ್ಟಾತ ಎಂದು ಬಸವಣ್ಣನವರನ್ನು ವಚನಗಳಲ್ಲಿ ಬಿಂಬಿಸಿದ್ದಾರೆ ಎಂದು ಶರಣತತ್ವ ಚಿಂತಕಿ ಗಿರಿಜಕ್ಕ ಧರ್ಮರೆಡ್ಡಿ ಅವರು ಹೇಳಿದರು.

ಬಸವದಳದ ೧೬೯೫ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ನಡೆದ ವಿಶ್ವಗುರು ಬಸವಣ್ಣನವರ ೯೨೧ನೇ ಜಯಂತಿ ಅಂಗವಾಗಿ ‘ಬಸವಾದಿ ಶರಣರು ಕಂಡ ಬಸವಣ್ಣ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಮಾತನಾಡಿದರು.

ಬಸವ ಸ್ಮರಣೆಯ ವಚನಗಳಲ್ಲಿ ಮೇಲುನೋಟಕ್ಕೆ ಬಸವಣ್ಣನನ್ನು ಹೊಗಳಿದಂತೆನ್ನಿಸಿದರೂ ಆ ವಚನಗಳ ಆಂತರ್ಯದಲ್ಲಿ ತತ್ವದರ್ಶನವಿರುತ್ತದೆ ಎಂದರು.

೧೨ನೇ ಶತಮಾನದಲ್ಲಿ ಬಸವಣ್ಣ ನುಡಿದಂತೆ ನಡೆದದ್ದು ಸರ್ವ ಶರಣ ಸಮೂಹಕ್ಕೆ ಪ್ರಭಾವಿತಗೊಳಿಸಿತ್ತು. ಆ ಕಾರಣದಿಂದಲೇ ಶರಣರು ತಮ್ಮ ಬಹಳಷ್ಟು ವಚನಗಳಲ್ಲಿ ಬಸವಣ್ಣನವರನ್ನು ಸ್ಮರಿಸಿಕೊಂಡಿದ್ದಾರೆ.

ಅಲ್ಲಮಪ್ರಭುಗಳು ಬಸವಾಕ್ಷರದ ಬಗ್ಗೆ ‘ಬ’ ಎಂಬಲ್ಲಿ ಭವ ಹರಿಯಿತ್ತು, ‘ಸ’ ಎಂಬಲ್ಲಿ ಸರ್ವಜ್ಞಾನಿಯಾದೆನು, ‘ವ’ ಎಂಬಲ್ಲಿ ವಸ್ತು ಚೈತನ್ಯಾತ್ಮಕನಾದೆನಯ್ಯಾ … ಎಂದು ವಚನದ ಮೂಲಕ ತಿಳಿಸಿದ್ದಾರೆ. ಹೀಗೆ ವಚನದ ಮೂಲಕ ಬಸವಣ್ಣ ಅವರು ವ್ಯಕ್ತಿಯಲ್ಲ ಒಂದು ಮಹಾನ್ ಶಕ್ತಿ ಎಂಬುದನ್ನು ಸಾರಿದ್ದಾರೆ ಎಂದರು. ಅಕ್ಕಮಹಾದೇವಿ ಅವರು ಬಹಳಷ್ಟು ವಚನಗಳಲ್ಲಿ ಅರಿವು ನೀಡಿದಾತನನ್ನು ಹಡೆದ ತಂದೆ ಎಂದೇ ಬಸವಣ್ಣನವರನ್ನು ಹೇಳಿದ್ದಾರೆ.

ಅದೇ ರೀತಿ ಮಡಿವಾಳ ಮಾಚಿದೇವರು ಬಸವಣ್ಣನವರ ಮೇಲೆ ಅಪಾರ ಭಕ್ತಿಯನ್ನು ವಚನದಲ್ಲಿ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಹಾಗೂ ದೇವರನ್ನು ಧ್ಯಾನದಲ್ಲಿರಿಸು ಅಂದರೆ ಇಲ್ಲಿ ದೇವರೆಂದರೆ ಬಸವಣ್ಣನವರು ದೇವರಿಗಿಂತಲೂ ಹೆಚ್ಚು ಎಂದು ಅವರ ವಚನಗಳ ಮೂಲಕ ತಿಳಿಸಿದ್ದಾರೆ ಎಂದರು.

ವೈರಾಗ್ಯಮೂರ್ತಿ ಸಿದ್ಧರಾಮೇಶ್ವರರು, ಚೆನ್ನಬಸವಣ್ಣ, ಅಕ್ಕನಾಗಮ್ಮ, ನೀಲಾಂಬಿಕೆ, ಗಂಗಾಂಭಿಕೆ ಸೇರಿದಂತೆ ಬಹಳಷ್ಟು ಶರಣರು ಬಸವಣ್ಣನವರ ಕುರಿತು ಮನೋಜ್ಞವಾಗಿ ಬಸವಣ್ಣನೇ ತತ್ವ, ಆಚಾರ, ವಿಚಾರ, ನಡೆ, ನುಡಿಯಾಗಿದ್ದಾರೆಂದು ತಿಳಿಸಿದ್ದಾರೆ.

ಹಾಗೆಯೇ ಸರ್ವಜ್ಞ, ಎಡೆಯೂರು ಸಿದ್ಧಲಿಂಗೇಶ್ವರರು, ಷಣ್ಮುಖ ಶಿವಯೋಗಿಗಳು ಸೇರಿದಂತೆ ಬಹಳಷ್ಟು ಮಹಾತ್ಮರು ಬಸವಣ್ಣನವರನ್ನು ಹಾಡಿ ಕೊಂಡಾಡಿದ್ದಾರೆಂದು ಬಹಳಷ್ಟು ವಚನಗಳನ್ನು ಉದಾಹರಿಸಿ ಗಿರಿಜಕ್ಕ ಉಪನ್ಯಾಸ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಮಾತನಾಡುತ್ತ, ಬಸವಣ್ಣನವರ ತತ್ವಗಳನ್ನು ಅರಿತುಕೊಂಡಾತ ನಿರ್ಭಯ ವ್ಯಕ್ತಿಯಾಗುತ್ತಾನೆ. ಶರಣ ತತ್ವದಲ್ಲಿ ವ್ಯಕ್ತಿ ಮುಖ್ಯವಾಗಿ ಮೂಢ ನಂಬಿಕೆಗಳನ್ನು ತ್ಯಜಿಸುವುದು, ಅನ್ಯ ದೈವ ಪೂಜೆ ತೊರೆಯುವುದು ಏಕೆಂದು ಅರ್ಥವಾಗುತ್ತದೆ ಎಂದರು.

ಬಸವದಳ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಅಧ್ಯಕ್ಷತೆ ವಹಿಸಿ, ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಲಿಂಗಾಯತರಿಗೆ ಗುರು, ಲಿಂಗ, ಜಂಗಮ ಸರ್ವವೂ ಬಸವಣ್ಣನೇ ಆಗಿದ್ದಾನೆಂದು ಫಾಲ್ಕುರಿಕೆ ಸೋಮನಾಥ ಕವಿಯ ಪದ್ಯ ಉದಾಹರಿಸುತ್ತಾ ಹೇಳಿದರು.

ಕಾರ್ಯಕ್ರಮದಲ್ಲಿ ವಿ.ಎ. ನರಗುಂದಮಠ ಅವರ ಸುಶ್ರಾವ್ಯವಾದ ವಚನ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶರಣೆ ನಾಗರತ್ನಾ ಅಸುಂಡಿ ಪ್ರಾರ್ಥಿಸಿದರು. ಶರಣು ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತವನ್ನು ಎಸ್. ಎ. ಮುಗದರವರು ಮಾಡಿದರು. ಶರಣು ಸಮರ್ಪಣೆಯನ್ನು ಪ್ರಕಾಶ ಅಸುಂಡಿ ನೆರವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *