ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಂದಿರುವವರಿಗೆ ಕೆಲವು ಪ್ರಶ್ನೆಗಳು

ಡಿ.ಪಿ. ನಿವೇದಿತಾ
ಡಿ.ಪಿ. ನಿವೇದಿತಾ

ರಾಮದುರ್ಗ

ಬಸವನ ಹೆಸರ ಬಲ್ಲಾತರಾರಿಲ್ಲ
ಹುಸಿ ಮಾತನಾಡಿ‌ ಕೆಡದಿರಿ! ಲಿಂಗಾಯತಕೆ
ಬಸವಣ್ಣನೇ ಕರ್ತೃ ಸರ್ವಜ್ಞ.

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಆ ಕಾಲದಿಂದಲೂ ಜಾರಿಯಲ್ಲಿರುವ ಕುಕೃತ್ಯ. ಅದರ ಮುಂದುವರೆದ ಭಾಗವೇ ಈ ರವಿ ಹಂಜನಂತಹ ಅನೇಕರು. ‘ಬಸವ ಮಂಟಪ’ ಎಂಬ ದುಷ್ಕೃತಿಯನ್ನು ಬಿಡುಗಡೆ ಮಾಡಿ, ಅದನ್ನು ಯಾವುದೇ ಭಯವಿಲ್ಲದೆ ಲೋಕಾರ್ಪಣೆ ಮಾಡಿದ್ದಲ್ಲದೇ ಮತ್ತೆ ಸಮರ್ಥನೆಯ ಲೇಪನವನ್ನು ನೀಡುವ ನಿಮ್ಮಗಳಿಗೆ ಕೆಲವು ಪ್ರಶ್ನೆ.

೧. ಲಿಂಗಾಹತರು ಎಂಬ ಪದಬಳಸುವ ನೀವುಗಳು ಯಾರು? ವಿಶ್ವೇಶ್ವರ ಭಟ್ ಅಂತಹವರು ಇದರಿಂದ ದೂರ, ಅಷ್ಟೇ ಅಲ್ಲದೇ ಉದ್ದೇಶಪೂರ್ವಕವಾಗಿ ಇದನ್ನೆಲ್ಲ ಮಾಡುತ್ತಿರುವ ಅವರು ಲಿಂಗಾಯತರನ್ನು ಅಪಮಾನಿಸಿದರೆ ಅದು ಅವರ ಜನ್ಮದ ಮುಖ್ಯ ಧ್ಯೇಯ ಎಂದು ಬಹುಶಃ ಸುಮ್ಮನಾಗಬಹುದು. ಆದರೆ ‘ನಾನು ಲಿಂಗಾಯತರ ಡಿ. ಎನ್. ಎ. ಹೊಂದಿರುವವನು’ ಎಂದು ಹೇಳಿಕೊಳ್ಳುವ ನೀವು ಧರ್ಮಗುರುವಿನ ಬಗ್ಗೆ ಉದ್ದೇಶಪೂರ್ವಕವಾಗಿ ಯಾರದೋ ಷಡ್ಯಂತ್ರದ ಮುಖವಾಗಿ ಕೆಲಸ ಮಾಡುತ್ತಿರುವ ವರಸೆ ನೋಡಿದರೆ ಗೊತ್ತಾಗುತ್ತದೆ ಇಲ್ಲಿ ನಿಜವಾದ ಲಿಂಗಾಹತ ಯಾರು ಎಂದು.

೨. ಇನ್ನು ‘ನುಡಿದಂತೆ ನಡೆ, ಇದೇ ಜನ್ಮ ಕಡೆ’ ಎಂದು ಬದುಕಿದ ಶರಣರ ವಚನಗಳಿಗೂ ನಡತೆಗೂ ವ್ಯತ್ಯಾಸವಿದೆ ಎಂದು ಹೇಳಲು ಆಧಾರವೇನಿದೆ? ‘ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ ಕೂಡಲಸಂಗಮದೇವನಲ್ಲದೆ ಆರೂ ಇಲ್ಲ’ ಎಂದು ನುಡಿದು ತಮ್ಮ ಮಡದಿಯ ಆಭರಣಗಳನ್ನು ಕಳ್ಳನಿಗೆ ಕೊಡುವ ಸಂದರ್ಭಕ್ಕೆ ಅವರ ವಚನವೇ ಸಾಕ್ಷಿ. ಮಂತ್ರಿಯ ಮಗಳನ್ನು ಮದುವೆಯಾದ ನಂತರವೂ ಭಂಡಾರಿಯಾಗಿ ಕಾಯಕ ನಿರ್ವಹಿಸಿದ್ದಕ್ಕೆ ನಿಮ್ಮ ಉತ್ತರವೇನು? ‘ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ’ ಎಂಬಂತೆ ಅಕ್ಕಮಹಾದೇವಿಯನ್ನು ಹಿಡಿದು ಸತ್ಯಕ್ಕನವರೆಗೂ ಹಲವಾರು ವಚನಕಾರ್ತಿಯರು ನಮಗೆ ಸಿಗುತ್ತಾರೆ. ಅಂದರೆ ಯಾವ ರೀತಿಯನ್ನು ವ್ಯತ್ಯಾಸವನ್ನು ನಡೆ-ನುಡಿಯಲ್ಲಿ ಕಂಡಿದ್ದೀರಿ? ‘ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ’ ಎಂದು ಹೇಳಿದ್ದಷ್ಟೇ ಅಲ್ಲದೇ ಅಲ್ಲಮಪ್ರಭುಗಳನ್ನು ಪ್ರಥಮ ಶೂನ್ಯಪೀಠಾಧ್ಯಕ್ಷರನ್ನಾಗಿ ನೇಮಿಸಿದರು. ಇದಕ್ಕೆ ನಿಮ್ಮ ಸಮರ್ಥನೆ?

೩. ಕೊಲೆ ಮಾಡಿಸಿದರು, ಕಳ್ಳತನ ಮಾಡಿದರು, ಸುಳ್ಳು ಹೇಳಿದರು… ಕಳ್ಳತನದ ಆರೋಪವು ಅವರ ಮೇಲೆ ಬಂದಾಗ ಅದನ್ನು ಸುಳ್ಳೆಂದು ಸಾಬೀತು ಪಡಿಸಿದ್ದೇ ಅವರ ಖಜಾನೆಯ ದ್ವಿಗುಣತೆ. ಕಾಯಕ-ದಾಸೋಹ ಪರಿಕಲ್ಪನೆಯನ್ನು ಕೊಟ್ಟ ಅವರು ತಾವು ಮಾತ್ರವಲ್ಲದೇ ತಮ್ಮೆಲ್ಲ ಶರಣರೂ ಕಾಯಕದಿಂದಲೇ ಬದುಕಬೇಕು ಎಂದು ಹೇಳಿದರು. ‘ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕು’ ಎಂದು ಹೇಳಿದ್ದಷ್ಟೇ ಅಲ್ಲದೇ ಅದರಂತೆ ನಡೆದು ಹಿಂದೆಂದಿಗಿಂತಲೂ ಇಲ್ಲದ ಲಾಭವನ್ನು ಭಂಡಾರಿಗಳಾಗಿ ತಂದುಕೊಟ್ಟರು. ಅದನ್ನು ಕಂಡ ಬಿಜ್ಜಳ ಬೆಕ್ಕಸ ಬೆರಗಾದನು. ಆದ್ದರಿಂದಲೇ ಅವರನ್ನು ಉನ್ನತ ಅರ್ಥಶಾಸ್ತ್ರಜ್ಞ ಎಂದು ಕರೆದಿದ್ದಾರೆ. ಕೊಲಬೇಡ ಎಂದು ಹೇಳಿದ ಅವರೇ ಕೊಲೆ ಮಾಡಿಸಿದ್ದರೆ, ಗಡಿಪಾರು ಶಿಕ್ಷೆ ಅನುಭವಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಕೇವಲ ಬಿಜ್ಜಳನನ್ನಷ್ಟೇ ಏಕೆ, ಕೊಂಡಿ‌ ಮಂಚಣ್ಣ, ನಾರಾಯಣಕ್ರಮಿತ ಮತ್ತಿತರರನ್ನೂ ಕೊಲ್ಲಿಸಬಹುದಿತ್ತಲ್ಲವೇ? ಕೇವಲ ಬಿಜ್ಜಳನೇ ಏಕೆ?

೪. ಇನ್ನು‌ ನೀವಷ್ಟೇ ಅಲ್ಲ ಬಿಡಿ. ಸಾಕಷ್ಟು ಜನರು ಲಿಂಗವು ಬಸವಣ್ಣನಿಗಿಂತಲೂ ಮೊದಲೇ ಇತ್ತು ಎಂದು ಮೊಂಡು ವಾದ ಮಾಡುತ್ತಲೇ ಬಂದಿದ್ದಾರೆ. ಆದ್ದರಿಂದಲೇ ಚನ್ನಬಸವಣ್ಣನವರು ಮುಂದಾಲೋಚನೆಯಿಂದ ‘ಆದಿ ಬಸವಣ್ಣ ಅನಾದಿ ಲಿಂಗವೆಂದೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು. ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು’ ಎಂದು ಹೇಳಿದ್ದಾರೆ. ಅಂತೆಯೇ ಅಲ್ಲಮಪ್ರಭುಗಳು ‘ಆಯಿತ್ತು ಬಸವಾ ನಿನ್ನಿಂದ ಲಿಂಗ ಸ್ವಾಯತವೆನಗೆ’ ಎಂದಿದ್ದಾರೆ. ‘ಅಂಗದಲ್ಲಿ ಆಚಾರವ ತೋರಿದ ಆ ಆಚಾರವೇ ಲಿಂಗವೆಂದರುಹಿದ’ ಎಂಬ ಅಕ್ಕಮಹಾದೇವಿಯ ವಚನ, ‘ಲಿಂಗಕ್ಕಾದಡೆಯೂ ಬಸವಣ್ಣನೇ ಬೇಕು’ ಎಂಬ ಸಿದ್ದರಾಮ ಶಿವಯೋಗಿಗಳು ಹೀಗೆ ಸಾವಿರಾರು ವಚನಗಳು ನಿಮಗೆ ಸಾಕ್ಷಿಯನ್ನಾಗಿ ನೀಡುತ್ತೇವೆ ಬಸವಣ್ಣನೇ ಇಷ್ಟಲಿಂಗ ಜನಕ ಎನ್ನಲು. ಇದು ಯಾವುದೇ ಒಂದು ಪುರಾಣದಿಂದ ತಂದ ಮಾತಿನ ಸಮರ್ಥನೆ ಅಲ್ಲ.

೫. ಅಂತರ್ಜಾತಿ ವಿವಾಹಗಳು ಮೊದಲಿನಿಂದಲೂ ಜಾರಿಯಲ್ಲಿದ್ದಿದ್ದರೆ ಹರಳಯ್ಯ-ಮಧುವಯ್ಯಗಳಿಗೆ ಎಳೆಹೂಟೆಯಂತಹ ಭೀಕರ ಶಿಕ್ಷೆಯ ಅಗತ್ಯವೇನಿತ್ತು? ವಿವಾಹವನ್ನು ರದ್ದುಗೊಳಿಸುವ ಪ್ರಸ್ತಾವನೆ ಶರಣರಿಗೆ ನೀಡುವ ಕಾರಣವೇನಿತ್ತು? ಇದು ಇತಿಹಾಸ ಕಂಡ ಘನಘೋರ ಶಿಕ್ಷೆ. ಇಲ್ಲಿಯೂ ನಿಮ್ಮ ತುಚ್ಛಬುದ್ಧಿಯನ್ನು ತೋರಿಸಿದ್ದು ನಿಜವಾಗಿಯೂ ಅನರ್ಹ.

೬. ನಿಮ್ಮ ಪ್ರಕಾರ ಬಸವಣ್ಣ ಹೊಸಧರ್ಮದ ಪ್ರವರ್ತಕರಾಗದಿದ್ದರೆ ಬಸವಾದಿ ಪ್ರಮಥರಿಂದ ರಚಿಸಲ್ಪಟ್ಟ ವಚನಗಳನ್ನು ಸುಡುವ ಯೋಚನೆ ವಿಪ್ರರ ತಲೆಯಲ್ಲಿ ಬರಲು ಕಾರಣ? ಸನಾತನ ಧರ್ಮವನ್ನು ಸುಧಾರಿಸಿದ್ದರೆ ಜನಿವಾರ ತೊರೆದು ಮನೆ ಬಿಟ್ಟು ಬಂದು, ಸ್ತ್ರೀಯರ ಸ್ವಾತಂತ್ರ್ಯಕ್ಕಾಗಿ ದನಿಯೆತ್ತುವ ಉದ್ದೇಶವೇನಿತ್ತು? ಶರಣರ ಕಗ್ಗೊಲೆ, ವಚನಗಳ ನಾಶ, ಧರ್ಮಗುರುವಿನ ಗಡಿಪಾರು ಇವೆಲ್ಲಕ್ಕಿಂತ ಬೇರೆ ಸಾಕ್ಷಿ ಅಗತ್ಯವಿಲ್ಲ

‘ಕೈಲಾಗದ ಶತ್ರುವಿನ ಕೊನೆಯ ಅಸ್ತ್ರವೇ ಅಪಪ್ರಚಾರ’ ಎಂಬುದರ ಬೆನ್ನು ಹತ್ತಿರುವ ತಾವುಗಳು ವೈಚಾರಿಕ ಮಲಬದ್ಧತೆಯ ದಾಸರಾಗಿದ್ದೀರಿ. ಒಂದು ಶ್ರೇಷ್ಠ ಶಕ್ತಿ, ಜಗತ್ತು ಕಂಡು ಕೇಳರಿಯದ ಸಮಾಜ ಸುಧಾರಕನ ಪಾದದ ಧೋಳಿನ ಕಣಕ್ಕೂ ಸಮನಿರದ ನೀವುಗಳು ಆ ಶಕ್ತಿಯ ಮುಖಕ್ಕೆ ಮಸಿ ಬಳಿಯುವ ದುಷ್ಪ್ರಯತ್ನ ಮಾಡುತ್ತಿರುವುದು ಅಪಹಾಸ್ಯವೇ ಸರಿ. ಯಾವುದೋ ದುರುದ್ದೇಶದ ಸಾಕಾರಕ್ಕಾಗಿ ಲಿಂಗಾಯತ ಧರ್ಮಗುರುವಿನ ಅವಹೇಳನ ಸಲ್ಲ. ಅಬ್ಬಬ್ಬಾ ಎಂದರೆ ನಿಮಗೀಗ ಅಂದಾಜು ೬೦-೭೦ ವರ್ಷ ವಯಸ್ಸು. ಆದರೆ ಧರ್ಮಗುರು ಬಸವಣ್ಣನವರಿಗಾಗಿರುವುದು ಸುಮಾರು ೯೦೦ ವರ್ಷಗಳು. ಬಸವ ಮಾಮರದ ರೆಂಬೆ- ಕೊಂಬೆಗಳನ್ನು ಮುಟ್ಟಲಾಗದ ನೀವುಗಳು ಬೇರನ್ನೇ ಕೀಳುತ್ತೇವೆಂಬ ಹಮ್ಮಿನಲ್ಲಿ ಮೆರೆಯುವುದು ತರವಲ್ಲ. ರೆಂಬೆಯನ್ನು ಕತ್ತರಿಸುವಾಗ ಕೈ ತಪ್ಪಿದ ಕೊಡಲಿ ತಲೆಯ ಮೇಲೆಯೇ ಬೀಳುವುದು. ಆಗ ನೀವು ನಿಮ್ಮ ದುರುದ್ದೇಶ ಸರ್ವಾನಶವಾಗುವುದು ಖಂಡಿತ.

ನಾವು ಬಸವಾನುಯಾಯಿಗಳು. ರಾಗ ದ್ವೇಷಗಳಿಂದ ದೂರ ಉಳಿದವರು. ಇದನ್ನು ನಮ್ಮ ಅಸಹಾಯಕತೆಯೆಂದು ಭಾವಿಸಿ ನಮ್ಮ ಮೇಲೆ ಪ್ರಹಾರ ನಡೆಸುವ ತಿರುಕನ ಕನಸು ಕಾಣಬೇಡಿ. ನಮಗೆ ಕೇವಲ ಅಪ್ಪ ಬಸವಣ್ಣ ಮಾತ್ರ ಮಾದರಿಯಲ್ಲ, ಅವರೊಟ್ಟಿಗೆ ವೀರ ಗಣಾಚಾರಿ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ವೀರ ಶರಣೆ ಅಕ್ಕನಾಗಲಾಂಬಿಕೆ ತಾಯಿಯಾದಿಯಾಗಿ ಇನ್ನೂ ಹಲವು ಶರಣ-ಶಣೆಯರೂ ಮಾದರಿಯಾಗಿದ್ದಾರೆ. ನಾವು ಅವರ ಹಾದಿ ಹಿಡಿದರೆ ನಿಮ್ಮಂತಹ ಒಂದು ಹಂಜನನ್ನೂ ಕೂಡ ಮೊಳಕೆಯೊಡೆಯಲು ಬಿಡುವುದಿಲ್ಲ. ನಿಮ್ಮಂತಹ ನೂರು ಹಂಜರು, ಸಾವಿರ ಭಟ್ಟರು, ಲಕ್ಷ ಸಂಘಗಳು ಬಂದರೂ ಪೃಥ್ವಿ ಇರುವವರೆಗೂ ಅಸ್ತಿತ್ವದಲ್ಲಿ ಉಳಿಯುವ ಸತ್ಯ ಒಂದೇ. ಅದು ಬಸವಣ್ಣನೇ ಲಿಂಗಾಯತ ಧರ್ಮ ಸ್ಥಾಪಕ, ಅವರೇ ಇಷ್ಠಲಿಂಗ ಜನಕ, ವಚನಗಳ ನಿರ್ಮಾಪಕ, ಹಾಗೂ ಕಲ್ಯಾಣ ಕ್ರಾಂತಿಯ ಕಾರಕ ಇದೇ ಸತ್ಯ ಇದೇ ನಿತ್ಯ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಪ್ರಚಾರಕರು, ಗುರು ಬಸವ ಮಠ, ನಾಗನೂರು