ಲಿಂಗಾಯತ ಮಹಾಮಠದಲ್ಲಿ ಸಾಮೂಹಿಕ ಶಿವಯೋಗ: ಪರಮಾನಂದ ಸಾಧಿಸುವ ಸಾಧನ ಇಷ್ಟಲಿಂಗ, ಪ್ರಭುದೇವ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಬಹಿರ್ಮುಖವಾಗಿ ಹರಿಯುವ ಮನಸ್ಸನ್ನು ಅಂತರ್ಮುಖದತ್ತ ತಿರುಗಿಸಿ ಪರಮಾನಂದ ಸಾಧಿಸುವ ಸಾಧನವೇ ಇಷ್ಟಲಿಂಗ ಎಂದು ಪ್ರಭುದೇವ ಸ್ವಾಮೀಜಿ ಹೇಳಿದರು.

ನಗರದ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಶಿವಯೋಗ ಸಾಧಕರ ಕೂಟದ ಸಾಧಕರಿಂದ ಗುರುವಾರ ನಡೆದ ಸಾಮೂಹಿಕ ಶಿವಯೋಗ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಇಷ್ಟಲಿಂಗ ಬಸವಣ್ಣನವರು ನೀಡಿದ ವಿಶೇಷ ಕೊಡುಗೆಯಾಗಿದೆ. ಆತ್ಮ ಪರಮಾತ್ಮನನ್ನು ಒಂದುಗೂಡಿಸುವುದೇ ಶಿವಯೋಗ ಎಂದು ತಿಳಿಸಿದರು. ಸಮುದ್ರದ ನೀರು ಆವಿಯಾಗಿ, ಮೋಡವಾಗಿ, ಭೂಮಿಗೆ ಮಳೆಯಾಗಿ ಸುರಿದ ನಂತರ ಮತ್ತೆ ಸಮುದ್ರ ಸೇರಲು ನಿರಂತರವಾಗಿ ಹರಿಯುತ್ತದೆ.

ಪರಮಾತ್ಮನ ಅಂಶವಾದ ಆತ್ಮವು ಪರಮಾತ್ಮನೊಡನೆ ಒಡವೆರೆಯದ ಹೊರತು ಶಾಂತಿ, ನೆಮ್ಮದಿಗಳಿಲ್ಲ. ಇದುವೇ ಜೀವಾತ್ಮನ ಪರಮ ಗುರಿ ಎಂದು ಹೇಳಿದರು.

ಅಷ್ಟವಿಧಾರ್ಚನೆಯು ಮೊದಲಿಗೆ ಮನವನ್ನು ಹದಗೊಳಿಸಿದರೆ, ಪ್ರಾಣಲಿಂಗಾರ್ಚನೆಯು ಅಂತರಂಗದಲ್ಲಿ ಮನವನ್ನು ಲೀಯಗೊಳಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಪ್ರಾಣಲಿಂಗಾರ್ಚನೆಯ ಕ್ರಮವನ್ನು ಹೇಳಿಕೊಟ್ಟ ಸಾಹಿತಿ ರಮೇಶ ಮಠಪತಿ ಅವರು, ಮನುಷ್ಯನ ಆಂತರಂಗಿಕ ವಿಕಾಸದ ಮಹತ್ವವನ್ನು ಅರಿತ ಅಕ್ಕ ಅನ್ನಪೂರ್ಣತಾಯಿ ಅವರು ಶಿವಯೋಗ ಸಾಧಕರ ಕೂಟ ಸ್ಥಾಪಿಸಿ, ಶರಣ ಸಂಕುಲ ಶಿವಯೋಗ ಸಾಧನೆಯಲ್ಲಿ ತೊಡಗುವಂತೆ ಮಾಡಿದ್ದರು ಎಂದು ಕೃತಜ್ಞತೆಯಿಂದ ನೆನೆದರು. ಶ್ರಾವಣದಲ್ಲಿ ನಸುಕಿನಲ್ಲಿಯೇ ಶಿವಯೋಗ ಮಾಡಿಕೊಳ್ಳಲು ಅವರು ಕರೆಯಿತ್ತರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ನೂತನ ಅಧ್ಯಕ್ಷ ಶಿವಕುಮಾರ ಪಾಖಾಲ್ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಉಮಾ ರಿಕ್ಕೆ ಗುರು ಪೂಜೆ ನೆರವೇರಿಸಿ, ಭಕ್ತಿ ದಾಸೋಹಗೈದರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ಪ್ರವೀಣ ಸ್ವಾಮಿ ವಂದಿಸಿದರು. ನಂತರ ವಚನ ಭಜನೆ ನಡೆಯಿತು.

Share This Article
Leave a comment

Leave a Reply

Your email address will not be published. Required fields are marked *