ಭಾಲ್ಕಿ:
ಪಟ್ಟಣದ ಶ್ರೀ ಚನ್ನಬಸವಾಶ್ರಮದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.
ಸಮಾರಂಭದ ಸಾನಿಧ್ಯ ವಹಿಸಿ, ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡುತ್ತ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ಆದರ್ಶ ಎಲ್ಲರಿಗೂ ಮಾದರಿಯಾದದ್ದು. ಅವರು ಜೀವನದ್ದುದಗಲ್ಲಕ್ಕೂ ನೋವುಗಳನ್ನು ಅನುಭವಿಸಿ ಸಮಾಜಕ್ಕೆ ಬೆಳಕು ನೀಡಿದ ಮಹಾಪುರುಷರು. ಅವರ ಸಾಮಾಜಿಕ ಕಳಕಳಿ, ಗ್ರಂಥಪ್ರೇಮ, ಅರ್ಥಶಾಸ್ತ್ರದಲ್ಲಿದ್ದ ಪ್ರಾವಿಣ್ಯತೆ ಆದರ್ಶಪ್ರಾಯವಾದದ್ದು.

ಅವರು ರಚಿಸಿರುವ ಸಂವಿಧಾನದಿಂದಲೇ ನಮ್ಮ ದೇಶ ಇಷ್ಟೊಂದು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಬಸವಾದಿ ಶರಣರ ಚಿಂತನೆಗಳು ಭಾರತದ ಸಂವಿಧಾನದಲ್ಲಿ ಅಳವಟ್ಟಿವೆ. ಸಂವಿಧಾನದ ಆಚರಣೆ ಮಾಡುವುದೆಂದರೆ, ವಚನಗಳು ಆಚರಿಸಿದಂತಾಗುತ್ತದೆ. ಶರಣರು ಹೇಳಿರುವ ಸಮಾನತೆ, ಸ್ವಾತಂತ್ರ್ಯ, ಕಾಯಕನಿಷ್ಠೆ, ಮಾನವೀಯತೆ, ಕರುಣೆ ಈ ಮೌಲ್ಯಗಳು ಸಂವಿಧಾನದಲ್ಲಿಯೂ ಕಂಡುಬರುತ್ತವೆ. ಅದಕ್ಕಾಗಿ ಬಸವಣ್ಣನವರ ಸಂದೇಶವೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಭಾರತೀಯ ಸಮಾಜದಲ್ಲಿ ಜಾರಿಗೊಳಿಸುವ ಕಾರ್ಯ ಮಾಡಿದ್ದಾರೆಂದರು.
ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ನಿರಂಜನ ಮಹಾಸ್ವಾಮಿಗಳು, ಪೂಜ್ಯ ಮಹಾಲಿಂಗ ಸ್ವಾಮಿಗಳು, ಪೂಜ್ಯ ಬಸವಲಿಂಗ ಸ್ವಾಮಿಗಳು, ಸಮ್ಮುಖ ವಹಿಸಿದ್ದರು.
ಭಾರತೀಯ ಬಸವಬಳಗದ ರಾಜ್ಯಾಧ್ಯಕ್ಷರಾದ ಬಾಬು ವಾಲಿ ಅವರು ಅಧ್ಯಕ್ಷತೆ ವಹಿಸಿ, ಪುಷ್ಪನಮನ ಸಲ್ಲಿಸಿದರು. ಬಾಬು ಬೆಲ್ದಾಳ ಅವರು ನಿರೂಪಿಸಿದರು. ಶ್ರೀಮಠದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
