‘ನೆಮ್ಮದಿಯ ಬದುಕು ಸಾಗಿಸಲು ಶಿವಯೋಗ ಸರಳ ಮಾರ್ಗ’

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ :

ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ. ಮಾನಸಿಕ ಅಶಾಂತಿ, ಅವ್ಯವಸ್ಥೆಯಿಂದ ಹೊರಬಂದು ನೆಮ್ಮದಿಯ ಬದುಕು ಸಾಗಿಸಲು ಶಿವಯೋಗ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅನುಭಾವಿ ಸುವರ್ಣಾ ಶರಣಪ್ಪ ಚಿಮಕೊಡೆ ನುಡಿದರು.

ಬಸವ ಜಯಂತಿ ಉತ್ಸವ ಸಮಿತಿ ಆಯೋಜಿಸಿದ ಡಾ. ಚೆನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಅನುಭಾವ ನಿವೇದಿಸಿದರು.

ಅಂದಿನ ಕಾಲದಲ್ಲಿ ದೇಹದಲ್ಲೆ ತಾರತಮ್ಯ ಮಾಡಿ ಬಲ ಶ್ರೇಷ್ಠ ಎಡ ಕನಿಷ್ಠ ಎನ್ನುವ ಮತಾಂಧರಿಗೆ ವೈಜ್ಞಾನಿಕ ಹಿನ್ನಲೆಯಲ್ಲಿ ಎಡಗೈಯಲ್ಲಿ ಇಷ್ಟಲಿಂಗ ಕೊಟ್ಟು, ಜಾತಿ, ಮತ, ಪಂಥ, ಲಿಂಗ ಭೇದ, ವರ್ಗ ಭೇದ, ವರ್ಣ ಭೇದ ಮಾಡದೇ ಮಾನವರಾದವರು ಆಧ್ಯಾತ್ಮ ಸಾಧನೆಗೆ ಲಿಂಗ ಪೂರಕ ಎಂದರು.  ಇದು ದೃಷ್ಟಿ ಯೋಗ, ಎಡಗೈಯಲ್ಲಿ ಇಷ್ಟಲಿಂಗ ಇಟ್ಟು ಕೊಂಡು ಹನ್ನೆರಡಿಂಚು ದೂರದಲ್ಲಿ ಏಕ ದೃಷ್ಟಿಯಿಂದ ವೀಕ್ಷಣೆ ಮಾಡಿದರೆ ಕಣ್ಣಿನಿಂದ ಪೀನಿಯಲ್ ಗ್ರಂಥಿಗೆ ಸಂಪರ್ಕವಾಗಿ ಮೆಲೆಟಾನ ಗ್ರಂಥಿ(ಅಮೃತ ಗ್ರಂಥಿ) ಬಿಡುಗಡೆಯಾಗಿ ಇಡೀ ದೇಹದಲ್ಲಿ ಚೈತನ್ಯ ಸಂಚಲನವಾಗುತ್ತದೆ. ಇದರಿಂದ ನಮ್ಮ ಆರೋಗ್ಯ ಜೊತೆಗೆ ಅಷ್ಟಸಂಕಲ್ಪ ಸಿದ್ಧಿಯಾಗುತ್ತದೆ.

ಅಂದು ಶರಣರು ಓದಿದವರಲ್ಲ ಆದರೂ ವಿಶ್ವವಿದ್ಯಾಲಯಗಳ ಸಂಪನ್ಮೂಲ ವ್ಯಕ್ತಿಗಳ ವಿಚಾರಗಳಿಗೆ ನಿಲುಕಲಾರದ ವಿಷಯಗಳನ್ನು ವಚನಗಳಲ್ಲಿ ಹಿಡಿದಿಟ್ಟಿರುವುದು ನ ಭೂತೋ ನ ಭವಿಷ್ಯ ಎಂಬ ರೀತಿಯಲ್ಲಿ ಇಡೀ ಜಗತ್ತಿನ ಮಾನವ ಜನಾಂಗಕ್ಕೆ ಸಾಧನೆ ಮಾಡಲು ಇದು ಸಾಧ್ಯವಾಗಿದೆ.

ವ್ಯಕ್ತಿಯ ಬದುಕಿಗೆ ಆಧಿ- ವ್ಯಾಧಿಯಿಂದ ದೂರ ಉಳಿಯಲು, ಆರೋಗ್ಯವಂತರಾಗಲು ಶಿವಯೋಗ ಸರಳ ಮಾರ್ಗ. ಮನಸ್ಸಿದ್ದವರು, ಸಮಯ ಇದ್ದವರು, ಪರೀಕ್ಷೆ ಮಾಡಿ, ಆಚರಣೆ ಅರಿತು ಮುನ್ನಡೆದರೆ ಬದುಕು ಹಸನನಾಗುತ್ತದೆ.

ಇಂದು ಯುವಕರು ಅನೇಕ ಗೊಡ್ಡು ಸಂಪ್ರದಾಯಗಳಿಗೆ ಮಾರು ಹೋಗಿ ಜೀವನ ಹಾಳು ಮಾಡಿಕೊಂಡಿರುವುದು ಗಮನಿಸಿದ್ದೇವೆ. ಏನನ್ನಾದರೂ ಸಾಧಿಸಲು ಇಷ್ಟಲಿಂಗದ ಶಿವಯೋಗಕ್ಕೆ ಮೊರೆ ಹೋಗಲು ಸುವರ್ಣ ಅತ್ಯಂತ ಮಾರ್ಮಿಕವಾಗಿ ನುಡಿದರು.

ಇಷ್ಟಲಿಂಗ ಪ್ರಾತ್ಯಕ್ಷಿಕೆಯನ್ನು ತೋರಿಸುತ್ತ ಪೂಜ್ಯ ಡಾ. ಗಂಗಾಂಬಿಕೆ ಅಕ್ಕ, ಬಸವ ಸೇವಾ ಪ್ರತಿಷ್ಠಾನ ಅವರು ಮಾರ್ಗದರ್ಶನ ನೀಡುತ್ತ, ಪ್ರತಿಯೊಬ್ಬರು ನಿಷ್ಠೆ, ಶ್ರದ್ದೆ, ಭಕ್ತಿಯಿಂದ ದಿನಾಲೂ ಮೂರು ನಿಮಿಷ ಕನಿಷ್ಠ ಇಪ್ಪತ್ತೊಂದು ನಿಮಿಷ ಗರಿಷ್ಠ ಲಿಂಗ ನಿರೀಕ್ಷಣೆ ಮಾಡಿದರೆ ಅತೀ ಶೀಘ್ರದಲ್ಲೇ ನಮ್ಮ ವ್ಯಾಧಿ ದೂರವಾಗುವುದರಲ್ಲಿ ಸಂದೇಹ ವಿಲ್ಲ. ಇಲ್ಲಿ ಖರ್ಚಿಲ್ಲ, ಪೂಜಾರಿ/ಪುರೋಹಿತರ ಅವಶ್ಯಕತೆ ಇಲ್ಲ. ನಮ್ಮ ಅರಿವು ನಾವೇ ಜಾಗೃತಿ ಮಾಡಿಕೊಳ್ಳಲು ಹಂತ ಹಂತವಾಗಿ ಶಿವಯೋಗ ಸಾಧನೆ ಮಾಡಲು ಎಲ್ಲರ ಮನ ಮುಟ್ಟುವಂತೆ ಪ್ರಾತ್ಯಕ್ಷಿಕೆ ಮುಖಾಂತರ ತಿಳಿಸಿದರು.

ಸಾಮೂಹಿಕ ಇಷ್ಟಲಿಂಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಡಾ. ದೇವಕಿ ಅಶೋಕ ನಾಗೂರೆ, ಇದು ಅತ್ಯಂತ ಪರಿಣಾಮಕಾರಿಯಾದ ಲಾಭ ನಮ್ಮ ದೇಹದ ಮೇಲೆ ಆಗುತ್ತದೆ. ಯಾವುದೇ ಬೆಲೆ ಬಾಳುವ ಪೂಜಾ ಪರಿಕರಗಳಿಲ್ಲದೆ ವಿಭೂತಿ, ನೀರಿದ್ದರೆ ಪೂಜೆ ಮಾಡಿಕೊಳ್ಳಲು ವಿಶ್ವಗುರು ಬಸವಣ್ಣ ಹಾಗೂ ಶರಣರು ವಚನಗಳ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಅದರ ಲಾಭ ನಾವಾದರು ಪಡೆಯಲು ಸನ್ನದ್ಧರಾಗಬೇಕೆಂದು ಹೇಳಿದರು.

ವೇದಿಕೆ ಮೇಲೆ ಉಷಾ ಮಿರ್ಚೆ, ರತ್ನಾ ಪಾಟೀಲ, ಸಂತೋಷಿ ಗಂದಗೆ, ಶೀಲಾವತಿ ಶೀಲವಂತ, ಶಕುಂತಲಾ ಬೆಲ್ದಾಳೆ, ನೀತು ಬೆಲ್ದಾಳೆ, ಕಲ್ಪನಾ ಸಾವಲೆ, ಲಕ್ಷ್ಮಿ ಬಿರಾದಾರ, ಶಾಂತಾ ಖಂಡ್ರೆ, ನೀಲಮ್ಮ ರೂಗನ್, ಭಾಗ್ಯವತಿ ಮುದ್ದಾ ಹಾಜರಿದ್ದರು.

ಮುಂಜಾನೆ ಮುನ್ನೂರು ಶರಣ ಶರಣೆಯರು ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸಿದ್ದರು. ಡಾ. ವಿದ್ಯಾವತಿ ಬಲ್ಲೂರ ನಿರೂಪಣೆ ಮಾಡಿದರೆ, ಜ್ಞಾನದೇವಿ ಬಬಛಡೆ ಸ್ವಾಗತಿಸಿದರು. ಕರುಣಾ ಶಟಕಾರ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *