ಬಸವಕಲ್ಯಾಣ
ಷರತ್ತುಗಳೊಂದಿಗೆ ಕನ್ನೇರಿ ಸ್ವಾಮಿಯ ಉಪಸ್ಥಿತಿಯಲ್ಲಿಯೇ ಹಿಂದೂ ಸಮಾವೇಶ ನಡೆಯಲು ಆದೇಶ ನೀಡಿರುವ ಕೋರ್ಟಿನ ತೀರ್ಪನ್ನು ಬಸವ ಪರ ಸಂಘಟನೆಗಳ ಮುಖಂಡರು ಸ್ವಾಗತಿಸಿದ್ದಾರೆ.
ನಗರದ ಅನುಭವ ಮಂಟಪದಲ್ಲಿ ಬುಧವಾರ ನಡೆದ ಬಸವ ಪರ ಸಂಘಟನೆಗಳ ಸಭೆಯ ಬಳಿಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
“ಕೋರ್ಟ್ ತೀರ್ಪಿಗೆ ಸ್ವಾಗತಿಸಿ ಗೌರವ ನೀಡುತ್ತೇವೆ. ಬಸವರಾಜ ಧನ್ನೂರರ ಅಧ್ಯಕ್ಷತೆಯಲ್ಲಿ ನಡೆದ ಹೋರಾಟಕ್ಕೆ ಜಯವಾಗಿದೆ.
ಜೂನ್ 28ರ ಸಮಾವೇಶದಲ್ಲಿ ಮಾತನಾಡಲು ನಿರ್ಬಂಧಿಸಿ ಹೈಕೋರ್ಟ್ ತೀರ್ಪು ನೀಡಿದ್ದರಿಂದ ಕನ್ನೇರಿ ಸ್ವಾಮಿಗೆ ಬಸವಭೂಮಿಯಲ್ಲಿ ಸೋಲು ಆಗಿದೆ,” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕನ್ನೇರಿ ಸ್ವಾಮಿ ಬೆಂಬಲಿಗರೂ ಕೋರ್ಟಿನ ತೀರ್ಪನ್ನು ತಮ್ಮ ಜಯವೆಂದು ಸಂಭ್ರಮಿಸುತ್ತಿದ್ದಾರೆ, ಜೂನ್ 28 ಕರೆದಿದ್ದ ಪ್ರತಿಭಟನೆಗೆ ಏನಾಗುತ್ತದೆ ಎಂದು ಪ್ರಶ್ನೆ ಕೇಳಿದರು.
ಅದಕ್ಕೆ ಉತ್ತರ ನೀಡಿದ ಧನ್ನೂರ ತೀರ್ಪಿನ ನಂತರ ಪ್ರತಿಭಟನೆ ಅಗತ್ಯವಿಲ್ಲವೆಂದು ಸೂಚಿಸಿದರು.
“ನಾವು ಯಾವುದೇ ಕಾರ್ಯಕ್ರಮ ವಿರೋಧಿಸಿರಲಿಲ್ಲ, ಕನ್ನೇರಿ ಸ್ವಾಮಿ ಬಸವ ಕಲ್ಯಾಣದ ಪ್ರವೇಶಕ್ಕೆ ಮಾತ್ರ ನಮ್ಮ ವಿರೋಧವಿತ್ತು.
ಕೋರ್ಟ್ ಮಾತಾಡೋ ಹಾಗಿಲ್ಲ, ಭಾಷಣ ಮಾಡೋ ಹಾಗಿಲ್ಲ, ಮಾಧ್ಯಮ ಉದ್ದೇಶಿಸಿ ಮಾತಾಡೋಗಿಲ್ಲ ಎಂದೆಲ್ಲಾ ನಿರ್ಬಂಧ ಹಾಕಿದೆ. ಅವರು ಸುಮ್ಮನೆ ಬಂದು ಕೂತು ಹೋಗಬೇಕು, ಕಾರ್ಯಕ್ರಮದಲ್ಲಿ ಕಳೆ ಉಳಿದಿಲ್ಲ,” ಎಂದು ಹೇಳಿದರು.
“ಈ ತೀರ್ಪು ನಮ್ಮ ಪರವಾಗಿದೆ. ನಮಗೆ ವಿಜಯವಾಗಿದೆ. ಭೌಗೋಳಿಕವಾಗಿ ಹಾಗೂ ರಾಷ್ಟ್ರೀಯತೆಯ ವಿಷಯದಲ್ಲಿ ನಾವೂ ಹಿಂದೂಗಳೇ, ಆದರೆ ಸಿಖ್, ಜೈನ್ ಧರ್ಮದವರಂತೆ ನಾವು ಲಿಂಗಾಯತ ಧರ್ಮೀಯರು ಆಗಿದ್ದೇವೆ,” ಎಂದರು.
ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, “ಕ್ಷಮೆ ಕೇಳುವವರಿಗೆ ಹೋರಾಟ ನಿರಂತರವಾಗಿ ನಡೆಯಲಿದೆ. ಕೋರ್ಟ್ ಕನ್ನೇರಿ ಸ್ವಾಮಿಯ ಬಾಯಿ ಮುಚ್ಚಿಸಿದೆ, ಇದು ಬಸವತತ್ವದ ಗೆಲುವು,” ಎಂದು ಹೇಳಿದರು.
`ಬಸವಾದಿ ಶರಣರ ಹಾಗೂ ಬಸವಾನುಯಾಯಿಗಳ ಕುರಿತು ಹೀಯಾಳಿಸಿ ಮಾತನಾಡುವ ಕನ್ನೇರಿ ಸ್ವಾಮಿ ಬಸವಭೂಮಿಯಲ್ಲಿ ಕಾಲಿಡಬಾರದು ಎಂದು ನಾವು ಒತ್ತಾಯಿಸಿದ್ದೇವು. ಕೋರ್ಟ್ ತೀರ್ಪಿನಂತೆ ಅವರು ಇಲ್ಲಿ ಮಾತೇ ಆಡಲಿಲ್ಲವೆಂದರೆ ಅವರು ಇಲ್ಲಿಗೆ ಬಂದಾದರೂ ಏನುಪಯೋಗ, ಜೀವವೇ ಇಲ್ಲದಂತೆ,’ ಎಂದು ಪಟ್ಟದ್ದೇವರು ಹೇಳಿದರು.
ಹುಲಸೂರು ಶಿವಾನಂದ ಸ್ವಾಮೀಜಿ, ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ, ಗೋರಟಾ ಪ್ರಭುದೇವರು, ಭಾಲ್ಕಿ ಗುರುಬಸವ ಪಟ್ಟದ್ದೇವರು, ರಾಷ್ಟ್ರೀಯ ಬಸವದಳದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ಬಸವಕೇಂದ್ರದ ಬಸವಕಲ್ಯಾಣ ಅಧ್ಯಕ್ಷ ರವೀಂದ್ರ ಕೊಳಕೂರ್, ಹುಲಸೂರ ಅಧ್ಯಕ್ಷ ಆಕಾಶ ಖಂಡಾಳೆ ಮತ್ತಿತರರು ಉಪಸ್ಥಿತರಿದ್ದರು.
