ಲಿಂಗಾಯತ ಹೋರಾಟಕ್ಕೆ ಇದರಿಂದ ಹಿನ್ನಡೆಯಾಗಿದೆ; ಪ್ರತಿಭಟನೆ ಮುಂದುವರೆಯಬೇಕು
ಆಳಂದ
ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಜೂನ್ 28 ನಡೆಯಬೇಕಿದ್ದ ಬಸವ ಅನುಯಾಯಿಗಳ ಪ್ರತಿಭಟನಾ ಹೋರಾಟವನ್ನು ರದ್ದುಪಡಿಸಿರುವುದು ಅತ್ಯಂತ ಬೇಸರದ ಸಂಗತಿ.
ಇದು ಯೋಗ್ಯ ನಿರ್ಣಯವಲ್ಲ, ನಿಜಕ್ಕೂ ಖಂಡನೀಯ ಬೆಳವಣಿಗೆ.
ನಾವು ಬಸವಭಕ್ತರು ಕೋರ್ಟಿಗೆ ಹೋಗಿರಲಿಲ್ಲ. ಬಸವಕಲ್ಯಾಣ ತಾಲೂಕಿನ ಆಡಳಿತದ ನಿರ್ಣಯದ ವಿರುದ್ಧ ಕನ್ನೇರಿ ಸ್ವಾಮಿಯ ಬೆಂಬಲಿಗರು ಕೋರ್ಟಿಗೆ ಹೋಗಿದ್ದರು. ಈ ತೀರ್ಪು ಆ ಅರ್ಜಿಯ ವಾದಿ ಪ್ರತಿವಾದಿಗಳಿಗೆ ಅನ್ವಯಿಸುತ್ತದೆ.
ಪ್ರತಿಭಟನೆ ಮಾಡಬೇಡಿ ಎಂದು ಮಾನ್ಯ ನ್ಯಾಯಮೂರ್ತಿಗಳು ಎಲ್ಲಿ ಹೇಳಿದ್ದಾರೆ? ಈ ವಿಷಯದಲ್ಲಿ ನಮ್ಮ ಹೋರಾಟ ಮುಂದುವರೆಯಬೇಕು.
ನಮ್ಮ ಸೈದ್ಧಾಂತಿಕ ವಿರೋಧ ಮತ್ತು ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಲು ದೊರೆತಿದ್ದ ಒಳ್ಳೆ ಅವಕಾಶವನ್ನು ಹೋರಾಟದ ಮುಂಚೂಣಿಯಲ್ಲಿದ್ದವರು ಕೈಚೆಲ್ಲಿರುವುದು ವಿಷಾದನೀಯ.
ಬಬಲೇಶ್ವರ, ಬಾಗಲಕೋಟೆ, ಶಹಾಪುರ, ಗದಗ ಮುಂತಾದ ಕಡೆಗಳಲ್ಲೆಲ್ಲಾ ಬಸವಾದಿ ಶರಣರ ಹೆಸರಿನ ದುರ್ಬಳಕೆ ಮಾಡುತ್ತಿರುವ ಈ ಸಮಾವೇಶಗಳ ವಿರುದ್ಧ ಪ್ರತಿಭಟನೆ ಶುರುವಾಗಿತ್ತು.
ಆದರೆ ಈ ಸಮಾವೇಶ ಬಸವಕಲ್ಯಾಣದಲ್ಲಿ ಆಯೋಜಿತವಾದ ಮೇಲೆ ಬಸವ ಅನುಯಾಯಿಗಳ ಆಕ್ರೋಶ ಮತ್ತಷ್ಟು ತೀವ್ರವಾಗಿತ್ತು. ಅವರ ನೋವು, ಸಿಟ್ಟಿಗೆ ಸ್ಪಂದಿಸುವ ಪ್ರತಿಭಟನೆಯನ್ನು ರೂಪಿಸುವಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದವರು ವಿಫಲವಾಗಿರುವುದು ದುರಂತ.
ದೃಢವಾದ ಹೋರಾಟದ ಹಾದಿಯಲ್ಲಿ ಸಾಗುತ್ತಿರುವ ಸಮುದಾಯಕ್ಕೆ ಇದರಿಂದ ಹಿನ್ನಡೆಯಾಗಿದೆ.
ನ್ಯಾಯಾಲಯವು ಈಗಾಗಲೇ ಕನ್ನೇರಿ ಸ್ವಾಮಿಯ ಮೇಲೆ ನಿರ್ಬಂಧ ಹೇರಿದ್ದರೂ, ಆತ ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ. ಕಾನೂನಿನ ಕಟ್ಟುಪಾಡುಗಳನ್ನು ಮೀರಿ ಮತ್ತೆ ತನ್ನ ತುಚ್ಛ ಹೇಳಿಕೆಗಳ ಮೂಲಕ ಸಮಾಜದ ಶಾಂತಿ ಕದಡುವ ಕೆಲಸ ಮುಂದುವರೆಸುತ್ತಿದ್ದಾನೆ.
ಒಂದು ಭವ್ಯ ಪರಂಪರೆಯ ಮಠದ ಪೀಠಾಧ್ಯಕ್ಷರಿಗೆ ಯೋಗ್ಯವಾದ ರೀತಿಯಲ್ಲಿ ಮಾತನಾಡುವುದನ್ನು ಬಿಟ್ಟು, ನಿರಂತರವಾಗಿ ಕೀಳುಮಟ್ಟದ ಮಾತುಗಳನ್ನು ಆಡುವುದೇ ಆತನಿಗೆ ಚಟವಾಗಿದೆ.
ಆತನ ಅಸಭ್ಯ ಮತ್ತು ಅಪ್ರಸ್ತುತ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡಲು ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ನಾವೆಲ್ಲರೂ ಮತ್ತೊಮ್ಮೆ ಒಗ್ಗೂಡಬೇಕಿದೆ.
ಕೋರ್ಟು ಹಾಕಿರುವ ಕಡಿವಾಣವನ್ನು ಮೀರಿ ಕನ್ನೇರಿ ಸ್ವಾಮಿ ಮತ್ತೆ ಬೊಗಳುವ ಸಾಧ್ಯತೆಯಿದೆ.
ಎಂತಹ ಸವಾಲುಗಳು ಬಂದರೂ, ಆತನ ಹಾದಿತಪ್ಪಿಸುವ ಮಾತುಗಳನ್ನು ಎದುರಿಸಲು ನಾವೆಲ್ಲರೂ ಸನ್ನದ್ಧರಾಗಿರಬೇಕು. ಬಸವ ತತ್ವದ ಹಾದಿಯಲ್ಲಿ ಸಾಗುವ ನಾವು, ಯಾವುದೇ ಅಡೆತಡೆಗಳಿಗೂ ಬಗ್ಗದೆ ನಮ್ಮ ಹೋರಾಟವನ್ನು ಮುಂದುವರಿಸಬೇಕಿದೆ.

ಪೂಜ್ಯರ ಅಳಲಿನಲ್ಲಿ ಅರ್ಥವಿದೆ. ಬಸವಾದಿ ಶರಣರ ಹಿಂದು ಸಮಾವೇಶ ಅನ್ನವುದೇ ಒಂದು ಕುಚೋದ್ಯವಾಗಿದೆ. ಅದನ್ನು ಬಸವಾದಿ ಶರಣರ ಅನುಯಾಯಿಗಳು ಉಗ್ರವಾಗಿ ಪ್ರತಿಭಟಿಸಲೇಬೇಕು.
ಹೌದು ಪ್ರತಿಭಟನೆಯನ್ನು ಹಿಂದೆ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ನಮ್ಮ ಹೋರಾಟ ಕನ್ನೇರಿ ಸ್ವಾಮೀಯವರ ಮಾತುಗಳ ಆಚೆಗೂ ಇದೆ. ಅವರು ಲಿಂಗಾಯತರನ್ನು ತಲೆಹಿಡಿದು ಹಿಂದೂ ಧರ್ಮಕ್ಕೆ ತುರುಕಲು ಪ್ರಯತ್ನಿಸುತ್ತಿದ್ದಾರೆ. ಇಂತಹವರನ್ನು ಬಸವಣ್ಣನ ನಾಡಿಗೆ ಬಿಟ್ಟುಕೊಳ್ಳುವುದಿಲ್ಲ ಅನ್ನುವ ಸಂದೇಶ ಕೊಡುವ ಅವಶ್ಯಕತೆ ಇತ್ತು.