ರಾಯಚೂರು:
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರ ಜಯಂತಿ ಹಾಗೂ ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದ ಸ್ವಾಮಿಗಳ ಸ್ಮರಣೋತ್ಸವ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಬಸವ ಕೇಂದ್ರದಲ್ಲಿ ನಡೆಯಿತು.
ಅಮರಗುಂಡಪ್ಪ ಹೂಗಾರ ಡಾ. ಹಳಕಟ್ಟಿಯವರ ಕುರಿತು ಮಾತನಾಡುತ್ತಾ, ಸರಳ ಸಜ್ಜನಿಕೆಯಿಂದ, ಸಾಮಾಜಿಕ ಕಳಕಳಿಯಿಂದ, ಶೈಕ್ಷಣಿಕ ಸೇವೆಯಿಂದ, ಸಹಕಾರ ಯೋಜನೆಯ ಕ್ರಾಂತಿಕಾರಕ ಕಾರ್ಯನಿರ್ವಹಣೆಯಿಂದ, ಎಲ್ಲದಕ್ಕೂ ಮಿಗಿಲಾಗಿ ಶುದ್ಧ ಹಸ್ತರಾಗಿ 64ನೆಯ ಪುರಾತನರಂತೆ ಶರಣ ಸಾಹಿತ್ಯವನ್ನು, ಹರಿಹರನ ರಗಳೆಗಳನ್ನು ಸಂಪಾದಿಸಿ, ತಾವೇ ಪ್ರಕಟಿಸಿ ಶರಣ ಸಾಹಿತ್ಯದ ಇತಿಹಾಸವನ್ನು ಕಟ್ಟಿಕೊಟ್ಟ ಮಹಾನುಭಾವರೆಂದರು.

ಹರವಿ ಶಂಕರಗೌಡರು ಮಾತನಾಡಿ, ವಚನಗಳ ಪ್ರಕಟಣೆಗಾಗಿ ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ ” ಹಿತಚಿಂತಕ ” ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿ, ವಚನಗಳನ್ನು, ಶರಣರ ಇತಿಹಾಸವನ್ನು ಮುದ್ರಿಸಿ ಪ್ರಕಟಿಸಿದ್ದನ್ನು ಸ್ಮರಿಸುತ್ತಾ, ಇಂದು ಲಿಂಗಾಯತ ಧರ್ಮ ಅಸ್ತಿತ್ವದಲ್ಲಿದೆ ಎಂದರೆ ಅದು ಅವರ ಅಪಾರ ಕೊಡುಗೆ, ತ್ಯಾಗದ ಪ್ರತೀಕವೆಂದರು.
ಭೀಮಲಿಂಗ, ಕೆ ಎಸ್ ಆರ್ ಟಿ ಸಿ, ಮಾನ್ವಿ ಇವರು ಮಾತನಾಡುತ್ತಾ, ಡಾ. ಹಳಕಟ್ಟಿ ಅವರು ದೂರದೃಷ್ಟಿಯ ಮಹಾನ್ ಚೇತನ. ಅವರು ಬಿಎಲ್‌ಡಿಇ ಸಂಸ್ಥೆಯನ್ನು ಸ್ಥಾಪಿಸಿದ್ದಲ್ಲದೇ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮಾಧ್ಯಮಿಕ ಶಾಲೆಯನ್ನು, ಜನರ ಆರ್ಥಿಕ ಬದ್ಧತೆಗಾಗಿ ಶ್ರೀ ಸಿದ್ದೇಶ್ವರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದ್ದನ್ನು ಎಲ್ಲಾ ಸಮಾಜ ಬಾಂಧವರು ಎಂದಿಗೂ ಮರೆಯಲಾರರೆಂದರು.
ಎ. ವೀರಭದ್ರಪ್ಪನವರು ಮಾತನಾಡಿ, ಪರಮಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಪ್ರವಚನಕ್ಕೆ ಮಾರುಹೋಗಿ ನನ್ನ ಜೀವನದಲ್ಲಿ ಬಸವ ತತ್ವವನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು. ಹಾಗೂ ಸಮಾಜದ ಏಳಿಗೆಗಾಗಿ ಬಸವಾದಿ ಶರಣರ ತತ್ವಗಳನ್ನು ಹಳ್ಳಿ ಹಳ್ಳಿಗೆ, ನಗರ ಪಟ್ಟಣಗಳಿಗೆ ಹಗಲು-ರಾತ್ರಿಯೆನ್ನದೇ ತಮ್ಮ ಶಿಷ್ಯ ವೃಂದವನ್ನು ಕರೆದುಕೊಂಡು ಬಂದು ಪ್ರವಚನ ಮಾಡಿ ಸಮಾಜದಲ್ಲಿ ಬಸವತತ್ವ ವಿಸ್ತೃತವಾಗಿ ಬೆಳೆಯಲು ಕಾರಣಿಭೂತರಾದರೆಂದರು.
ಜೆ. ಬಸವರಾಜ, ವಕೀಲರು ಮಾತನಾಡಿ, ಡಾ. ಹಳಕಟ್ಟಿಯವರು ಮುಂಬೈ ರಾಜ್ಯದ ವಿಧಾನ ಪರಿಷತ್ ಸದಸ್ಯರಾಗಿ, ಪಬ್ಲಿಕ್ ಪ್ರಾಷಿಕ್ಯೂಟರಾಗಿ, ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ವಿಜಯಪುರ ನಗರಸಭೆಯ ಅಧ್ಯಕ್ಷರಾಗಿ ಇನ್ನೂ ಅನೇಕ ಕಾರ್ಯಕ್ಷೇತ್ರಗಳ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿ ನಿಸ್ವಾರ್ಥ ಸೇವೆ ಮಾಡಿದ್ದನ್ನು ಸ್ಮರಿಸಿದರು.
ಸಿ.ಬಿ.ಪಾಟೀಲ, ವಕೀಲರು ಮಾತನಾಡಿ, ಡಾ. ಹಳಕಟ್ಟಿಯವರು ವಕೀಲ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದನ್ನು ಸ್ಮರಿಸುತ್ತಾ, ಅವರು ಈ ವೃತ್ತಿಯಲ್ಲಿ ಹಾಕಿಕೊಟ್ಟ ಮಾರ್ಗವನ್ನು ನಾವೆಲ್ಲರೂ ಅನುಸರಿಸಿದಲ್ಲಿ ಭವ್ಯ ಭಾರತ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲವೆಂದರು.
ಕೇಂದ್ರದ ಉಪಾಧ್ಯಕ್ಷರಾದ ಚನ್ನಬಸವ ಇಂಜಿನಿಯರ್ ಮಾತನಾಡಿ, ಡಾ. ಹಳಕಟ್ಟಿ ಸರ್ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ, ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಅಪಾರ ಸೇವೆಯನ್ನು ಸ್ಮರಿಸುತ್ತಾ, ಶಿವಾನುಭವ ಮಾಸಪತ್ರಿಕೆ, ನವ ಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿ, ಈ ಮೂಲಕ ವಚನ ಸಾಹಿತ್ಯ, ಶರಣರ ಚರಿತ್ರೆಗಳನ್ನು ಪ್ರಕಟಿಸಿ ಜನಸಾಮಾನ್ಯರಲ್ಲಿ ಶರಣ ತತ್ವವನ್ನು ಬಿತ್ತಿದರೆಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬಸವಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು ಹಳಕಟ್ಟಿಯವರ ಕುರಿತು ಮಾತನಾಡುತ್ತಾ, ಕಡುಬಡತನದಲ್ಲಿಯೂ ವಚನ ಸಾಹಿತ್ಯದ ಸಂಶೋಧನೆಗಾಗಿ, ಪ್ರಕಟಣೆಗಾಗಿ, ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರ ತ್ಯಾಗವನ್ನು ನಾವೆಂದೂ ಮರೆಯಬಾರದೆಂದರು.
ವಚನ ಗಾಯನ ಮತ್ತು ಸಾಮೂಹಿಕ ಬಸವ ಪ್ರಾರ್ಥನೆಯನ್ನು ನಾಗೇಶ್ವರಪ್ಪ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಧನಂಜಯ ಹಡಪದ ಸ್ವಾಗತಿಸಿದರು, ನೀಲಕಂಠರಾಯ, ವಕೀಲರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು, ಟಿ. ಸೋಮಶೇಖರ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಕುರುಗೋಡು, ಸರೋಜಮ್ಮ ಮಾಲಿಪಾಟೀಲ, ಪ್ರತಿಭಾ ಪಾಟೀಲ, ನರಸಪ್ಪ ಮುಂತಾದವರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
