ಹಾನಗಲ್ ಕುಮಾರಸ್ವಾಮಿ ಪ್ರಸಾದ ವಸತಿ ನಿಲಯದ ಕಟ್ಟಡ ಭೂಮಿ ಪೂಜೆ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ ಮಠದ ಸಮಾಜಪರ ಸೇವೆ ರಾಜ್ಯಕ್ಕೆ ಮಾದರಿ : ಡಿ.ಕೆ. ಸಿದ್ರಾಮ

ಭಾಲ್ಕಿ:

ಇಲ್ಲಿಯ ಹಿರೇಮಠ ಸಂಸ್ಥಾನದ ಮೂಲಕ ಡಾ. ಬಸವಲಿಂಗ ಪಟ್ಟದ್ದೇವರು ಸಲ್ಲಿಸುತ್ತಿರುವ‌‌ ಸಮಾಜಪರ ಮತ್ತು ಜೀವಪರ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಡಾ. ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಕೆ. ಸಿದ್ರಾಮ ಹೇಳಿದರು.

ನಗರದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಡಾ. ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘ ನಿಯಮಿತ ಭಾಲ್ಕಿ ವತಿಯಿಂದ ಶನಿವಾರ ಆಯೋಜಿಸಿದ್ದ ಹಾನಗಲ್ ಕುಮಾರೇಶ್ವರ ಪ್ರಸಾದ ವಸತಿ ನಿಲಯದ ಕಟ್ಟಡದ ಭೂಮಿ ಪೂಜೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗಡಿಭಾಗದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು ಅದ್ಭುತ ಸೇವೆಗೈಯುತ್ತಿದ್ದಾರೆ. ಧರ್ಮ ಪ್ರಚಾರ ಪ್ರಸಾರದ ಜತೆಗೆ ದೀನ ದುರ್ಬಲ ವರ್ಗದ ಜನರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಗ್ರಾಮೀಣ‌ ಭಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಸುಮಾರು 20 ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ನಾಡಿಗೆ ಕೊಡುಗೆ ನೀಡುತ್ತಿದ್ದಾರೆ.

ಡಾ. ಚನ್ನಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನದಲ್ಲಿ ಸ್ಥಾಪಿಸಿದ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ಮೂಲಕ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಪ್ರತಿವರ್ಷ ನಾಲ್ಕೈದು-ನೂರು ಬಡಮಕ್ಕಳಿಗೆ ಉಚಿತ ಊಟ, ವಸತಿ ಸಹಿತ ಶಿಕ್ಷಣ ನೀಡುತ್ತಿದ್ದಾರೆ.

ಪೂಜ್ಯರ ಅಮೃತ ಮಹೋತ್ಸವ ಸವಿನೆನಪಿಗಾಗಿ ಡಾ. ಚನ್ನಬಸವ ಪಟ್ಟದ್ದೇವರು ಬ್ಯಾಂಕ್ ಮೂಲಕ ಸುಸಜ್ಜಿತ ಹಾನಗಲ್ ಕುಮಾರಸ್ವಾಮಿ ಪ್ರಸಾದ ವಸತಿ ನಿಲಯದ ಕಟ್ಟಡ ಕಟ್ಟಿಸಿ ಕೊಡಲಾಗುತ್ತಿದೆ ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಸ್ವತಂತ್ರ ಪೂರ್ವ 1936ರಲ್ಲಿ ಡಾ. ಚನ್ನಬಸವ ಪಟ್ಟದ್ದೇವರು ಅವರು ಪ್ರಾರಂಭಿಸಿದ ಹಾನಗಲ್ ಕುಮಾರೇಶ್ವರ ಪ್ರಸಾದ ವಸತಿ ನಿಲಯ ಸಾವಿರ ಜನರ ಬಾಳು ಬೆಳಗಿಸಿದೆ.

ಇಲ್ಲಿ ಆಶ್ರಯ ಮತ್ತು ಶಿಕ್ಷಣ ಪಡೆದ ವ್ಯಕ್ತಿಗಳು ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಸಾಹಿತಿಗಳು, ಶಿಕ್ಷಕರು, ಮಠಾಧೀಶರು, ಸೈನಿಕರು, ರೈತರು, ಎಂಜಿನಿಯರ್, ಡಾಕ್ಟರ್‌ಗಳಾಗಿ ದೇಶಕ್ಕೆ ಅದ್ಭುತ ಕೊಡುಗೆ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.

ಪೂಜ್ಯರು ತೆರೆದ ಹಾನಗಲ್ ಕುಮಾರೇಶ್ವರ ಪ್ರಸಾದ ವಸತಿ ನಿಲಯದಲ್ಲಿ ವ್ಯಾಸಂಗಕ್ಕೆ ಪ್ರವೇಶ ಪಡೆದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಇದೇ ಮಠಕ್ಕೆ ಮಠಾಧೀಶರಾಗಿ ಈ ಪ್ರಸಾದ ನಿಲಯವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಬಡಮಕ್ಕಳು ಆಶ್ರಯ, ಶಿಕ್ಷಣ ಪಡೆಯುವ ಈ  ಪ್ರಸಾದ ನಿಲಯಕ್ಕೆ ಸುಸಜ್ಜಿತ ಕಟ್ಟಡ ಹೊಂದಬೇಕು ಎನ್ನುವುದು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಕನಸಾಗಿತ್ತು. ಅವರ ಅಮೃತ ಮಹೋತ್ಸವ ಸವಿನೆನಪಿಗಾಗಿ ಡಾ. ಚನ್ನಬಸವ ಪಟ್ಟದ್ದೇವರು ಬ್ಯಾಂಕ್ ನ ಆಡಳಿತ ಮಂಡಳಿ ನಿರ್ಧರಿಸಿ ಬ್ಯಾಂಕ್‌ನ ವತಿಯಿಂದ ಪ್ರಸಾದ ನಿಲಯಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಡುತ್ತಿರುವುದು ಅತ್ಯಂತ ಖುಷಿ ತಂದುಕೊಟ್ಟಿದೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶಿಕ್ಷಣಕ್ಕಾಗಿ 1969ರಲ್ಲಿ ಹಾನಗಲ್ ಕುಮಾರಸ್ವಾಮಿ ಪ್ರಸಾದ ನಿಲಯದಲ್ಲಿ ಆಶ್ರಯ ಪಡೆದ ಸಂದರ್ಭದಲ್ಲಿ ಸಾಕಷ್ಟು ಕಷ್ಟದ ದಿನಗಳು ಎದುರಿಸಬೇಕಾಯಿತು.

ಆದರೆ ಈಗ ಪ್ರವೇಶ ಪಡೆಯುವ‌ ಮಕ್ಕಳಿಗೆ ಅಂತಹ ಯಾವ ಸಮಸ್ಯೆಗಳು ಎದುರಾಗಬಾರದು ಎನ್ನುವ ಆಶಯ ನನ್ನದಾಗಿತ್ತು.

ಪ್ರಸಾದ ನಿಲಯಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವುದು ಬಹುದಿನಗಳ‌ ಕನಸಾಗಿತ್ತು. ಡಾ.ಚನ್ನಬಸವ ಪಟ್ಟದ್ದೇವರು ಬ್ಯಾಂಕ್‌ನ ವತಿಯಿಂದ ಪ್ರಸಾದ ನಿಲಯ ಕಟ್ಟಡ ನಿರ್ಮಾಣ‌ ಮಾಡಿಕೊಡುತ್ತಿರುವುದು ಸಂತಸ ತರಿಸಿದೆ. ಇದು ಮುಂದಿನ ದಿನಗಳಲ್ಲಿ ಬಡ ಮಕ್ಕಳಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಆಶಯ ವ್ಯಕ್ತ ಪಡಿಸಿದರು.

ಯುವ ಮುಖಂಡ ಚೆನ್ನಬಸವಣ್ಣ ಬಳತೆ ಮಾತನಾಡಿದರು. ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯರಾದ ರಾಜಶೇಖರ ಅಷ್ಟೂರೆ, ಸೋಮನಾಥಪ್ಪ ಅಷ್ಟೂರೆ, ಬಂಡೆಪ್ಪ ಶರಣರು, ಶಿವು ಲೋಖಂಡೆ, ಜೈರಾಜ ಪಾತ್ರೆ, ಚಂದ್ರಕಾಂತ ಪಾಟೀಲ್, ಸುಭಾಷ ಕಾರಾಮುಂಗೆ, ಜೈರಾಜ ಖಂಡ್ರೆ, ಶರಣಪ್ಪ ಬಿರಾದಾರ್, ಬಾಬುರಾವ‌ ಜಲ್ದೆ, ಶರದ ಸಿರ್ಸೆ, ರೇಖಾ ಮಹಾಜನ, ಅನಿಲ ಹಾಲಕುಡೆ, ವಿಶ್ವನಾಥಪ್ಪ ಬಿರಾದಾರ, ಸಿದ್ಧಯ್ಯ ಕಾವಡಿಮಠ, ಅಶೋಕ ಬಾವುಗೆ, ಮೋಹನ ರೆಡ್ಡಿ, ಗಣಪತಿ ಬಾವುಗೆ, ಸಂಗಮೇಶ ವಾಲೆ ಸೇರಿದಂತೆ ಹಲವರು ಇದ್ದರು. ಬಾಬು ಬೆಲ್ದಾಳ ನಿರೂಪಿಸಿದರು. ದೀಪಕ ಠಮಕೆ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *