ಬಸವ ಸಂಘಟನೆಗಳ ಆಕ್ರೋಶ: ರವಿ ಹಂಜ್ ಪ್ರತಿಕೃತಿ ದಹನ, ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್

ವಿಶ್ವವಾಣಿ ಅಂಕಣಕಾರ ರವಿ ಹಂಜ್ ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ವಿವಿಧ ಬಸವಪರ ಸಂಘಟನೆಗಳ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರವಿ ಹಂಜ್ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಬಳಿಕ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಅವರ ಪ್ರತಿಕೃತಿ ದಹಿಸಿದರು.

ಇತ್ತೀಚೆಗೆ ನಡೆದ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಂಕರ್‌ ಬಿದರಿ ಅವರ ಭಾವಚಿತ್ರವೂ ದಹನ ಮಾಡಿದರು.

ಆನಂತರ ನಗರದ ನ್ಯೂ ಟೌನ್‌ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿ, ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಜಿಲ್ಲಾಧಿಕಾರಿಗೆ ಇನ್ನೊಂದು ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ವಿವಿಧ ಮಠಗಳ ಸ್ವಾಮೀಜಿಗಳು, ಮುಖಂಡರು, ಬಸವಣ್ಣನವರಿಗೆ ಅವಮಾನ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ರವಿ ಹಂಜ್ ಅವರಿಗೆ ಕರ್ನಾಟಕ ರಾಜ್ಯ ಪ್ರವೇಶ ನಿರ್ಬಂಧಿಸುವ ಕುರಿತು ಸಂಬಂಧಪಟ್ಟ ಸರ್ಕಾರ ಕಾನೂನುಬದ್ಧವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅವರ ಪಾಸ್‌ಪೋರ್ಟ್ ಜಪ್ತಿ ಹಾಗೂ ಅಮಾನತುಗೊಳಿಸುವ ಸಾಧ್ಯತೆಯನ್ನೂ ಪರಿಶೀಲಿಸಬೇಕು. ಜೊತೆಗೆ ಆಕ್ಷೇಪಾರ್ಹ ಹೇಳಿಕೆಗಳಿರುವ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಆಗ್ರಹಿಸಿದರು.

ಬಸವತತ್ವ, ಲಿಂಗಾಯತ ಧರ್ಮ, ಬಸವಾದಿ ಶರಣರು, ಮಠಾಧೀಶರು ಹಾಗೂ ಬಸವಪರ ಹೋರಾಟಗಾರರ ವಿರುದ್ಧ ರವಿ ಹಂಜ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ತಮ್ಮ ಲೇಖನಗಳನ್ನು ಸಂಗ್ರಹಿಸಿ ಸುಮಾರು 600 ಪುಟಗಳ ‘ಬಸವ ಮಂಟಪ’ ಕೃತಿಯನ್ನು ಹೊರ ತಂದಿದ್ದಾರೆ. ಮಾಧ್ಯಮ ಸಂದರ್ಶನದಲ್ಲಿ ಬಸವಣ್ಣನವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯ ಬಳಿಕ ನ್ಯೂ ಟೌನ್ ಪೊಲೀಸ್ ಠಾಣೆಗೆ ತೆರಳಿದ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ರವಿ ಹಂಜ್ ವಿರುದ್ಧ ಸಾಮೂಹಿಕವಾಗಿ ದೂರು ಸಲ್ಲಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆ ರಾಜ್ಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಚನ್ನಬಸವಾನಂದ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಪ್ರಮುಖರಾದ ಅಲ್ಲಮಪ್ರಭು ನಾವದಗೇರೆ, ರಾಜೇಂದ್ರ ಜೊನ್ನಿಕೇರಿ, ಯೋಗೇಶ ಸಿರಿಗೆರೆ, ಕುಶಾಲರಾವ ಪಾಟೀಲ ಖಾಜಾಪುರ, ಹಾವಶೆಟ್ಟಿ ಪಾಟೀಲ, ಯೋಗೇಂದ್ರ ಯದಲಾಪುರೆ, ರವಿ ಪಾಪಡೆ, ಪ್ರವೀಣ್ ಎಕಲಾರೆ, ಸಿದ್ದು ಶೆಟಕಾರ್‌, ವಿವೇಕಾನಂದ ಪಟ್ನೆ, ರಾಜಕುಮಾರ ಕಮಠಾಣೆ, ರಾಷ್ಟ್ರೀಯ ಬಸವ ದಳ, ಬಸವ ಬಳಗ, ಬಸವ ಕೇಂದ್ರ, ಬಸವ ಸಮಿತಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *