ಬಸವಪರ ಸಂಘಟನೆಗಳ ತೀವ್ರ ಪ್ರತಿಭಟನೆ
ಕೊಪ್ಪಳ :
ಸಾಂಸ್ಕೃತಿಕ ನಾಯಕ ಮಹಾತ್ಮ ಬಸವಣ್ಣನವರ ಬಗ್ಗೆ ಅತ್ಯಂತ ನೀಚತನದಿಂದ ಅವರನ್ನು “ಕಳ್ಳ, ಸುಳ್ಳ, ಕೊಲೆಗಾರ” ಎಂದು ಕೀಳುಭಾಷೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ರವಿ ಹಂಜ್ ಮತ್ತು ಅವರಿಗೆ ವೇದಿಕೆ ಕಲ್ಪಿಸಿದ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ಟ ಅವರ ಪ್ರತಿಕೃತಿಗಳಿಗೆ ಚಪ್ಪಲಿ ಏಟುಗಳನ್ನು ಹಾಕಿ ನಂತರ ಸುಟ್ಟು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಲಾಯಿತು.
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಬಸವಪರ ಸಂಘಟನೆಗಳು ಸೇರಿ ನಗರದ ಅಶೋಕ ವೃತ್ತದಲ್ಲಿ ಅವರಿಬ್ಬರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಲಾಯಿತು.
ಇಬ್ಬರೂ ಕ್ಷಮೆ ಕೇಳಿರಬಹುದು. ಅವರು ಮಾಡಿದ ಅಕ್ಷಮ್ಯ ಅಪರಾಧಕ್ಕೆ ಕಾನೂನಿನ ಪ್ರಕಾರ ವಿದೇಶಕ್ಕೆ ಪಲಾಯನ ಮಾಡಿರುವ ಇಬ್ಬರನ್ನೂ ಹಿಡಿದು ತಂದು ಉಗ್ರ ಶಿಕ್ಷೆ ನೀಡಬೇಕೆಂದು ಈ ಸಂದರ್ಭದಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ ಸರ್ಕಾರಕ್ಕೆ ಒತ್ತಾಯಿಸಿದರು.

ಈಗಾಗಲೇ ಸರ್ಕಾರ ರವಿ ಹಂಜನ “ಬಸವ ಮಂಟಪ” ಕೃತಿಯನ್ನು ಮುಟ್ಟುಗೋಲು ಹಾಕಲು ಆದೇಶಿಸಿದ್ದಕ್ಕೆ ಸರ್ಕಾರಕ್ಕೆ ಅಭಿನಂದಿಸಿ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿದರು.
ಪ್ರಗತಿಪರ ಹೋರಾಟಗಾರರು, ಹಿರಿಯರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡುತ್ತ ; ಕೇವಲ ಕರ್ನಾಟಕವಲ್ಲದೇ ಭಾರತ ದೇಶ ಮತ್ತು ಇಡೀ ಜಗತ್ತು ಬಸವಣ್ಣನವರನ್ನು ಮತ್ತು ಅವರ ಸರ್ವ ಸಮಾನತೆ ತತ್ವಗಳನ್ನು ಗೌರವಿಸುತ್ತಿದೆ. ಕೇವಲ ಲಿಂಗಾಯತರಷ್ಟೇ ಅಲ್ಲಾ ಎಲ್ಲ ದುಡಿಮೆಯ ವರ್ಗ, ಕಾರ್ಮಿಕ ವರ್ಗ, ಹಿಂದುಳಿದ ಶೋಷಿತ ವರ್ಗ, ಪರಿಶಿಷ್ಟ ದಲಿತ ವರ್ಗದ ಜನರಿಗೆ ಇದರಿಂದ ತೀವ್ರ ನೋವಾಗಿದೆ ಎಂದರು.
ನಂತರ ಮಾತನಾಡಿದ ಜಿಲ್ಲೆಯ ಎಲ್ಲ ನಾಯಕರು ಇದುವರೆಗೆ ಇಂತಹ ಅನೇಕ ಸಂದರ್ಭಗಳು ನಡೆದಿವೆ. ಇನ್ನು ಮುಂದೆ ಇಂತಹ ಆಕ್ರಮಣವನ್ನು ಸಹಿಸುವುದಿಲ್ಲ.ಈ ಎಲ್ಲ ಷಡ್ಯಂತ್ರಗಳ ಹಿಂದಿರುವವರನ್ನು ತನಿಖೆ ಮೂಲಕ ಬಹಿರಂಗ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಅಧಿಕೃತ ಶಾಸನಬದ್ಧವಾಗಿ ಘೋಷಿಸಿದ್ದಾರೆ. ರವಿ ಹಂಜ್ ಸರ್ಕಾರಕ್ಕೆ ಮತ್ತು ಕನ್ನಡ ನಾಡಿನ ಜನತೆಗೆ ಅವಮಾನ ಮಾಡಿದ್ದಾರೆಂದು ರೋಷದಿಂದ ಅತೀವ ನೋವನ್ನು ವ್ಯಕ್ತ ಮಾಡಿದರು.
ಪ್ರತಿಭಟನೆ ಮೆರವಣಿಗೆಯು ಅಶೋಕ ವೃತ್ತದಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತದವರೆಗೂ ಜರುಗಿತು. ಬಸವೇಶ್ವರ ವೃತ್ತಕ್ಕೆ ಬಂದು ಜಿಲ್ಲಾಧಿಕಾರಿಗಳ ಪರವಾಗಿ ತಹಸೀಲ್ದಾರ ಮನವಿ ಸ್ವೀಕರಿಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಪರವಾಗಿ ಸರ್ಕಲ್ ಇನ್ಸ್ಪೆಕ್ಟರ್ ಮನವಿ ಸ್ವೀಕರಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವಕೇಂದ್ರ, ವಿಶ್ವಗುರು ಬಸವೇಶ್ವರ ಟ್ರಸ್ಟ್, ಶರಣ ಸಾಹಿತ್ಯ ಪರಿಷತ್ತು, ಪ್ರಗತಿಪರ ಹೋರಾಟಗಾರರ ಸಮಿತಿ, ಕಾರ್ಮಿಕ ಸಂಘಟನೆ, ಗಾಣದ ಕಣ್ಣಪ್ಪ ಶಿವಾನುಭವ ಸಮಿತಿ ಮತ್ತಿತರ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಂಘಟನೆಗಳ ಮುಖಂಡರಾದ ರಾಜೇಶ ಸಸಿಮಠ, ಡಾ ಸಂಗಮೇಶ ಕಲಹಾಳ, ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಅರ್ಚನಾ ಸಸಿಮಠ, ಶೇಖರ ಇಂಗಳದಾಳ, ವೀರಭದ್ರಪ್ಪ ನಂದ್ಯಾಲ, ಬಾಪುಗೌಡ ಪಾಟೀಲ, ಶಿವಸಂಗಪ್ಪ ವಣಿಗೇರಿ, ಶಿವಬಸಯ್ಯ ವೀರಾಪುರ, ಶಿವಕುಮಾರ ಕುಕನೂರ, ಅಮರೇಶಪ್ಪ ಬಳ್ಳಾರಿ, ಬಸವರಾಜ ಇಂಗಳದಾಳ, ಟಿ. ಬಸವರಾಜ, ಶಿವಸಂಗಪ್ಪ ಬಿಜಕಲ್ಲ, ಸಿದ್ದಣ್ಣ ಜಕ್ಕಲಿ, ದಿಲೀಪಕುಮಾರ ವಂದಾಲ, ವೀರೇಶ ಅಸರಡ್ಡಿ, ಮಹೇಶಕುಮಾರ, ರೇಣುಕಪ್ಪ ಮಂತ್ರಿ, ಬಸವರಾಜ ಹೂಗಾರ ಹೋರಾಟದ ನೇತೃತ್ವ ವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
