ಚಿತ್ರದುರ್ಗ:
ಮಠಮಾನ್ಯಗಳು ಸಾಮೂಹಿಕ ಕಲ್ಯಾಣವನ್ನು ಸುಮಾರು ೫೦ ವರ್ಷಗಳ ಹಿಂದೆಯೇ ಪ್ರಾರಂಭಿಸಿದವು. ಕಾರಣವಿಷ್ಟೆ ಮದುವೆ ಮಾಡುವುದು ಬಹಳ ಕಷ್ಟದ ಕೆಲಸ. ಬಡವರಿಗೆ ಹೊರೆಯಾಗದಂತೆ ನೋಡಿಕೊಳ್ಳುವುದು. ಸಾಲದ ಶೂಲದಿಂದ ಹೊರಬರುವಂತೆ ಹಾಗೂ ಎಲ್ಲಾ ವರ್ಗದವರು ಒಂದೆಡೆ ಸೇರಿ ವಿವಾಹವಾಗುವಂತೆ ಮಾಡುವ ಉದ್ಧೇಶವಾಗಿತ್ತು. ಇದರಂಥ ಶ್ರೇಷ್ಠ ಪ್ರವೃತ್ತಿ ಮತ್ತೊಂದಿಲ್ಲ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

ಬಸವಕೇಂದ್ರ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶನಿವಾರ ನಡೆದ ೩೬ನೇ ವರ್ಷದ ೯ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀಮಠವು ಬಸವಣ್ಣನವರ ಕಾಯಕದಿಂದ ಬದುಕುವುದನ್ನು ಕಲಿಸುತ್ತದೆ. ಇಂದು ನವಜೀವನಕ್ಕೆ ಕಾಲಿರಿಸಿರುವ ನಿಮಗೆಲ್ಲ ಶುಭವಾಗಲಿ. ನೀವೆಲ್ಲ ಬಸವತತ್ವದ ಆಧಾರದಡಿಯಲ್ಲಿ ಬೆಳಿರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಮಾತನಾಡಿ, ಶ್ರೀಮಠದಲ್ಲಿ ೩೬ ವರ್ಷಗಳಿಂದ ಸುಮಾರು ೨೫೦೦೦ಕ್ಕೂ ಹೆಚ್ಚು ವಿವಾಹಗಳಾಗುತ್ತ ಬಂದಿವೆ. ಇಲ್ಲಿ ಅಂತರ್ಜಾತಿ ಅಂತಧರ್ಮೀಯ ವಿವಾಹಗಳಾಗುತ್ತಿವೆ. ಇಲ್ಲಿ ವಿವಾಹವಾಗುತ್ತಿರುವ ತಮ್ಮಗಳ ಜೀವನ ಸರಳಭೂತವಾಗಿ ಉತ್ತಮ ಮಟ್ಟದ ಬದುಕನ್ನು ಕಾಣಿ ಎಂದು ಆಶೀರ್ವದಿಸಿದರು.
ಕೆಲವರು ಮದುವೆ ಎಂದರೆ ಅವಿನಾಭಾವ ಸಂಬಂಧ ಎಂದುಕೊಳ್ಳದೆ ಪ್ರತಿಷ್ಠೆಯಾಗಿ ತೆಗೆದುಕೊಂಡು ಸಾಲ ಮಾಡಿಯಾದರೂ ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಅಷ್ಟಾದರೂ ಕೆಲವೊಮ್ಮೆ ಮದುವೆ ಸರಿಯಾಗಿ ಆಗಲಿಲ್ಲವೆಂದು ವೈಮನಸ್ಸಿಗೆ ಕಾರಣರಾಗುತ್ತಾರೆ. ಹಾಗಾಗಿ ಜನ ಮೆಚ್ಚುವಂತೆ ಮಾಡಬಾರದು, ಮನ ಮೆಚ್ಚುವಂತೆ ಮಾಡಬೇಕು.

ಮನಮೆಚ್ಚುವ ವಿವಾಹ ಎಂದರೆ ಸಾಮೂಹಿಕ ವಿವಾಹವಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ನಾವೂ ಕೂಡ ದುಂದುವೆಚ್ಚ ಮಾಡಬಾರದೆಂದು ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತಿರುವ ನಿಮಗೆಲ್ಲ ಧನ್ಯವಾದಗಳು. ದ್ವೇಷ ಅಸೂಯೆ ಅಹಂಕಾರ ಭ್ರಮೆ ಇವುಗಳಿಂದ ದೂರವಿದ್ದರೆ ಜೀವನದಲ್ಲಿ ಸುಖ ಸಂತೋಷದಿಂದ ಇರಲು ಸಾಧ್ಯ.

ಶ್ರೀಮಠದಲ್ಲಿ ಯಾರು ವಿವಾಹವಾಗಿದ್ದಾರೋ ಅವರೆಲ್ಲರ ಜೀವನವು ಹಸನ್ಮುಖಿಯಾಗಿರುವುದನ್ನು ನಾವು ಕಾಣಬಹುದು. ಭೂಮಿ ಮೇಲೆ ಯಾರೂ ಶಾಶ್ವತವಲ್ಲ. ಎಲ್ಲರೂ ಒಂದಾಗಿ ಬಾಳಿ. ಜೀವನದಲ್ಲಿ ನೆಮ್ಮದಿಯ ಬದುಕನ್ನು ತಾವು ಕಾಣಿ ಎಂದು ವಧು-ವರರಿಗೆ ಕಿವಿಮಾತು ಹೇಳಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಮದುವೆ ಗಂಡು ಹೆಣ್ಣಿಗೂ ನಡೆಯುತ್ತದೆ. ಇಲ್ಲಿ ೨ ಜೀವ, ೨ ಕುಟುಂಬ, ೨ ಸಂಬಂಧಗಳು ಒಂದಾಗುವ ಸಮಾಗಮದ ಸಂದರ್ಭ. ಸಂಸಾರದಲ್ಲಿ ವಧು-ವರರು ಸಹನೆ ತಾಳ್ಮೆ ಕಂಡುಕೊಂಡು ಕಷ್ಟದ ಸಮಯದಲ್ಲಿ ಹೊಂದಾಣಿಕೆಯಿಂದ ಹೋಗಬೇಕು.
ಸಂಸಾರದ ಬಂಡಿ ಬೀಳದಂತೆ ಪ್ರೀತಿ ಗೌರವ ಮನಸ್ಸುಗಳ ಸಮಾಗಮವಿರಬೇಕು. ಮನಸ್ಸುಗಳು ಒಂದಾಗಿದ್ದರೆ ವಿಚ್ಛೇದನಗಳು ಕಡಿಮೆಯಾಗುತ್ತವೆ. ತಾಳ್ಮೆ ಎಂದರೆ ಸಹನೆ. ಸಹನೆ ಇಬ್ಬರಲ್ಲೂ ಇರಬೇಕು. ಅದಕ್ಕೆ ಶರಣರು ಹೇಳುತ್ತಾರೆ- ಸತಿಪತಿ ಒಂದಾದೊಡೆ ಜೀವನ ಸುಖ ನೋಡಿ ಎಂದಿದ್ದಾರೆ. ದಂಪತಿಗಳ ನಡುವೆ ಪ್ರೀತಿ ಮುಖ್ಯ.
ಸ್ವರ್ಗ ಮತ್ತು ನರಕವನ್ನು ಸೃಷ್ಟಿ ಮಾಡಿಕೊಳ್ಳುವುದು ನಿಮ್ಮಗಳ ಕೈಯಲ್ಲೇ ಇದೆ. ನೀವುಗಳು ಇಡುವ ಹೆಜ್ಜೆ, ಮಾತು, ನಡತೆ ಮುಂತಾದವುಗಳ ಆಧಾರದ ಮೇಲೆ ನಿಂತಿದೆ. ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬುದನ್ನು ಗಮನದಲ್ಲಿಟ್ಟುಕೊಂಡು ಜೀವನ ಸಾಗಿಸಿ ಎಂದು ಕಿವಿಮಾತು ಹೇಳಿದರು.

ಶರಣೆ ಜಯದೇವಿ ತಾಯಿ ಮಾತನಾಡಿ, ಜೀವನದಲ್ಲಿ ಸಹನೆ ತಾಳ್ಮೆ ಪ್ರೀತಿ ಹೊಂದಾಣಿಕೆ ಮುಖ್ಯ. ಸಂಸಾರ ಬಂಡಿಯಲ್ಲಿ ಸಹನೆ ತಾಳ್ಮೆ ಅತ್ಯವಶ್ಯಕ.
ಯಾವುದೇ ಸಮಸ್ಯೆ ಬಂದರೂ ತಾಳ್ಮೆಯಿಂದ ಕುಳಿತು ಬಗೆಹರಿಸಿಕೊಳ್ಳಿ. ಹೊಂದಾಣಿಕೆ ಪ್ರತಿಯೊಬ್ಬರಲ್ಲೂ ಅತಿಮುಖ್ಯ. ನಾವು ಜೀವನದಲ್ಲಿ ಹೇಗೆ ಬಾಳುತ್ತೇವೆ ಎಂಬುದು ಮುಖ್ಯವಾಗಿದೆ. ಎಂತಹುದೇ ಸಂದರ್ಭ ಬಂದರೂ ತಾವು ದೃತಿಗೆಡದೆ ಹೆಜ್ಜೆಯನ್ನು ಮುಂದಿಡಿ ಎಂದು ಹಾರೈಸಿದರು.
ಆಡಳಿತ ಮಂಡಳಿ ಸದಸ್ಯರಾದ ನಾಡೋಜ ಡಾ. ಪಿ.ಎಸ್. ಶಂಕರ, ಎಸ್.ಎನ್. ಚಂದ್ರಶೇಖರ, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಒಂದು ಜೋಡಿ ಅಂತರ್ಜಾತಿ ಸೇರಿದಂತೆ ೧೧ ಜೋಡಿಗಳ ವಿವಾಹವನ್ನು ನೆರವೇರಿಸಲಾಯಿತು.
ಶಿಕ್ಷಕರ ದಿನಾಚರಣೆಯ ಅಂಗವಾಗಿ ಡಾ. ರಾಧಾಕಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನದ ಮೂಲಕ ಗೌರವ ಸಮರ್ಪಿಸಲಾಯಿತು.
ಜನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಜನಪದ ಗೀತೆಗಳನ್ನು ಹಾಡಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ನಿವೃತ್ತ ಪ್ರಾಚಾರ್ಯ ಟಿ.ಪಿ. ಜ್ಞಾನಮೂರ್ತಿ ಸ್ವಾಗತಿಸಿ, ನಿರೂಪಿಸಿದರು.
