ಜಲತಜ್ಞ ರಾಜೇಂದ್ರಸಿಂಗ್ ಅವರಿಗೆ ಬಸವೇಶ್ವರ ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಪ್ರತಿಯೊಂದು ಜೀವರಾಶಿಗೂ ನೀರು ಅತ್ಯಂತ ಅವಶ್ಯಕ. ಇಂತಹ ಅಮೂಲ್ಯವಾದ ಜೀವ ಜಲವನ್ನು ರಕ್ಷಿಸಿ ಜಾಗೃತಿ ಮೂಡಿಸುತ್ತಿರುವ ಜಲತಜ್ಞ ರಾಜೇಂದ್ರಸಿಂಗ್ ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೯೯ ನೇ ಶಿವಾನುಭವದಲ್ಲಿ ಮಾಡನಾಡಿದ ಶ್ರೀಗಳು, ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ನೀರಿನ ಸದ್ಬಳಕೆಯ ಕುರಿತು ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ರಾಜೇಂದ್ರಸಿಂಗ್ ಅವರ ಪರಿಶ್ರಮ ಅಪಾರವಾದುದು. ಈ ಕಾರ್ಯಕ್ಕೆ ಅನೇಕ ಗೌರವಗಳು ಅವರನ್ನು ಹುಡುಕಿ ಬಂದಿವೆ. ಅವುಗಳಲ್ಲಿ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನ ಕೊಡಮಾಡಿದ ಮಹಾ ಮಾನವತಾವಾದಿ ಶ್ರೀ ಬಸವೇಶ್ವರ ಪ್ರಶಸ್ತಿ ಅವರಿಗೆ ಈ ರೀತಿಯ ಇನ್ನಷ್ಟು ಕೆಲಸ ಮಾಡಲು ಶಕ್ತಿಯನ್ನು ನೀಡಿದೆ ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್. ಕೆ. ಪಾಟೀಲ ಅವರು, ರಾಜೇಂದ್ರಸಿಂಗ್ ಅವರು ಮನುಕುಲಕ್ಕೆ ಅಪಾರವಾದ ಕಾರ್ಯವನ್ನು ಮಾಡಿದ್ದಾರೆ. ಗುಜರಾತಿನ ಅನೇಕ ಬತ್ತಿಹೋದ ನದಿಗಳನ್ನು ಅವರು ತರುಣ ಭಾರತ ಸಂಘದ ಮೂಲಕ ಪುನಶ್ಚೇತನಗೊಳಿಸಿದ್ದಾರೆ. ನಮ್ಮ ಗದಗ ಪರಿಸರದ ಈಚಲಹಳ್ಳವನ್ನು ಪುನಶ್ಚೇತನಗೊಳಿಸಿದ್ದು ಅವರ ಕಾರ್ಯಕ್ಕೆ ಹಿಡಿದ ಕನ್ನಡಿ ಅಂದರು.

ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ಮಾತನಾಡಿ, ರಾಜೇಂದ್ರಸಿಂಗ್ ಅವರು ಅನೇಕ ಸವಾಲುಗಳನ್ನು ಎದುರಿಸಿ, ಕುಟುಂಬವನ್ನು ಮರೆತು ಸಮಾಜವೇ ತಮ್ಮ ಕುಟುಂಬವೆಂದು ಬಗೆದು ಸಮಾಜಪರ ಕಾರ್ಯಕ್ಕೆ ತಮ್ಮ ಬದುಕನ್ನು ಸಮರ್ಪಿಸಿದ್ದಾರೆ. ಇಂಥವರೇ ಸಮಾಜದ ನಿಜವಾದ ಆಸ್ತಿ ಎಂದು ಮಾತನಾಡಿದರು.

ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ‘ಮಾನವತಾವಾದಿ ಬಸವೇಶ್ವರ ಪ್ರಶಸ್ತಿ’ಯನ್ನು ಹೆಸರಾಂತ ಜಲಸಂರಕ್ಷಕರಾದ ರಾಜೇಂದ್ರಸಿಂಗ್ ಅವರಿಗೆ ಪ್ರದಾನ ಮಾಡಲಾಯಿತು.

ಜೆ.ಕೆ. ಜಮಾದಾರ ಅವರು ರಾಜೇಂದ್ರಸಿಂಗ್ ಅವರ ಬದುಕು ಮತ್ತು ಸಾಧನೆಯನ್ನು ಕುರಿತು ಮಾತನಾಡಿದರು.

ಪ್ರಕಾಶ ಲಿಂಬಯ್ಯಸ್ವಾಮಿ ಪ್ರಸ್ತಾವಿಕವಾಗಿ ಪ್ರತಿಷ್ಠಾನ ಮತ್ತು ಕಾರ್ಯಕ್ರಮದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್. ಎಸ್. ಪಾಟೀಲ, ಜಿ.ಎಸ್. ಗಡ್ಡದ್ದೇವರಮಠ, ಮೋಹನ ಲಿಂಬಿಕಾಯಿ ಮೊದಲಾದವರು ಉಪಸ್ಥಿತರಿದ್ದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ನೆರವೇರಿಸಿದರು. ಗ್ರಂಥ ಪಠಣವನ್ನು ಖುಷಿ ಜಗದೀಶ ಹಳ್ಳಿಕೇರಿ, ವಚನ ಚಿಂತನವನ್ನು ಖುಷಿ ರಾಮಪ್ಪ ಕಳ್ಳಿಮನಿ, ದಾಸೋಹ ಸೇವೆಯನ್ನು ಜಯಶ್ರೀ ಪ್ರಭು ಹಳ್ಳಿಕೇರಿ ಮತ್ತು ಅವರ ಪರಿವಾರದವರು ವಹಿಸಿಕೊಂಡಿದ್ದರು.

ಪ್ರಾರಂಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಸಮಿತಿ ಛೇರ್ಮನ್ನರಾದ ಡಾ. ರಮೇಶ ಕಲ್ಲನಗೌಡರ ಮಾಡಿದರು. ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *