‘ರೈಲ್ವೆ ಪರೀಕ್ಷೆಯಲ್ಲಿ ಕನ್ನಡವಿಲ್ಲದಿರುವುದು ಕನ್ನಡ ಬಾಷೆಗೆ ಮಾಡುತ್ತಿರುವ ಬಹುದೊಡ್ಡ ಅಪಮಾನ‘
ನರಗುಂದ :
ರೈಲ್ವೆ ಪರೀಕ್ಷಾ ನೇಮಕಾತಿಯಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವುದು ಕನ್ನಡ ಬಾಷೆಗೆ ಮಾಡುತ್ತಿರುವ ಬಹುದೊಡ್ಡ ಅಪಮಾನವಾಗಿದೆ. ಇತ್ತಿಚಿಗೆ ನೈರುತ್ಯ ರೈಲ್ವೆ ಇಲಾಖೆಯು ಹೊರಡಿಸಿರುವ ಪರೀಕ್ಷಾ ಸುತ್ತೋಲೆಯಲ್ಲಿ ಪ್ರಾದೇಶಿಕ ಭಾಷೆಯಾದ ಕನ್ನಡ ಬಳಸದೆ ಕೇವಲ ಹಿಂದಿ-ಇಂಗ್ಲೀಷ್ ಬಾಷೆಯಲ್ಲಿ ಮಾತ್ರ ಸುತ್ತೋಲೆ ಹೊರಡಿಸಿರುವ ಕೇಂದ್ರ ಸರಕಾರ ಪ್ರಾದೇಶಿಕ ಬಾಷೆಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ.
ಈ ಬಗೆಗೆ ಸಾಕಷ್ಟು ಹೋರಾಟ ಚಳುವಳಿಗಳನ್ನು ಮಾಡಿದರೂ ಸಹಿತ ಪರೀಕ್ಷೆಯಲ್ಲಿ ಕನ್ನಡವನ್ನು ಬಳಕೆ ಮಾಡದಿರುವುದು ವಿಪರ್ಯಾಸದ ಸಂಗತಿ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಶ್ರೀಗಳು ಕೇಂದ್ರ ಸರಕಾರದ ಭಾಷಾ ವಿರೋಧಿ ನೀತಿಯನ್ನು ಪ್ರಶ್ನಿಸಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿದೋದ್ದೇಶ ಟ್ರಸ್ಟ್ ಭೈರನಹಟ್ಟಿ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ನಾದಬ್ರಹ್ಮಾನಂದ ಸ್ವಾಮಿಗಳ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡ ಅಧಿಕೃತ ಭಾಷೆಯಾಗಿದೆ, ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನವನ್ನು ಕಡ್ಡಾಯಗೊಳಿಸಿದೆ. ಇಷ್ಟಿದ್ದರೂ ಕೇಂದ್ರ ಸರಕಾರದ ನೈಋತ್ಯ ರೇಲ್ವೆ ಇಲಾಖೆಯು ಪರೀಕ್ಷಾ ನೇಮಕಾತಿಯಲ್ಲಿ ಕರ್ನಾಟಕದಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಕಡೆಗಣಿಸುತ್ತಿದೆ.
ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ೨೮ ಜನ ಸಂಸದರು, ರಾಜ್ಯಸಭಾ ಸದಸ್ಯರು ಮತ್ತು ರೈಲ್ವೆ ಇಲಾಖೆಯ ರಾಜ್ಯಖಾತೆ ಸಚಿವರಾದ ಮಾನ್ಯ ವ್ಹಿ. ಸೋಮಣ್ಣ ಅವರು ಮೌನ ಮುರಿದು ಕನ್ನಡಕ್ಕಾಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಪೂಜ್ಯರು ಮನವಿ ಮಾಡಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಕಂಠಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಚೆನ್ನಬಸಪ್ಪ ಕಂಠಿ ಮಾತನಾಡಿ, ಕನ್ನಡ ಭಾಷೆ ಸಾಹಿತ್ಯ ಕಲೆ ಜಾನಪದ ಸಂಸ್ಕೃತಿಗಳ ಸಂವರ್ಧನೆಯ ಉದ್ದೇಶದೊಂದಿಗೆ ಸ್ಥಾಪಿತವಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯನ್ನು ಉಳಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಕರ್ನಾಟಕದ ರಾಜಕೀಯ ಏಕೀಕರಣಕ್ಕೆ ಪರಿಷತ್ತಿನ ಪ್ರಯತ್ನ ಹಾಗೂ ಕರ್ನಾಟಕದ ಬೌಗೋಳಿಕ ಗಡಿ ರೇಖೆಗಳನ್ನು ಗುರುತಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಯತ್ನ ಮಹತ್ವದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ೨೦೨೬ ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಅಲೆಮಾರಿ ಜನಾಂಗದ ನೀಲಾವತಿ ಯಣ್ಣಿ ಹಾಗೂ ಹತ್ತನೆ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಭೈರನಹಟ್ಟಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನೀಯರನ್ನು ಶ್ರೀಮಠದಿಂದ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ವೇದಿಕೆ ಮೇಲೆ ಬಿಆರ್ಸಿ ಅಧಿಕಾರಿಗಳಾದ ಬಿ.ಆರ್. ರಾಯನಗೌಡ್ರ, ಸಿ.ಎಫ್. ಕುರಿ, ಮುಖ್ಯಶಿಕ್ಷಕ ಎಮ್.ಡಿ. ಸಕ್ಕರಿ, ಜೆ.ಆರ್. ಕದಂ, ಸಂಗಪ್ಪ ಪೂಜಾರ, ಪ್ರೊ. ಆರ್. ಬಿ. ಚಿನಿವಾಲರ, ಅಮರೇಶ ತೆಗ್ಗಿಮನಿ ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್.ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.
