ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಘಟನೆಗಳಿಂದ ಆಗ್ರಹ
ಭಾಲ್ಕಿ:
ಬಸವಕಲ್ಯಾಣದಲ್ಲಿ ನಡೆಯಲಿರುವ “ಬಸವಾದಿ ಶರಣರ ಹಿಂದೂ ಸಮಾವೇಶ” ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಸವಕಲ್ಯಾಣಕ್ಕೆ ಆಗಮಿಸುತ್ತಿರುವ ಕನೇರಿ ಸ್ವಾಮೀಜಿಯವರ ಪ್ರವೇಶ ತಡೆಯಬೇಕೆಂದು ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದವು.
ನೂತನ ಸಚಿವರಾಗಿ ಜಿಲ್ಲೆಗೆ ಆಗಮಿಸಿ ಇಲ್ಲಿಯ ಹಿರೇಮಠ ಸಂಸ್ಥಾನಕ್ಕೆ ರವಿವಾರ ಭೇಟಿ ಕೊಟ್ಟ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ವಿವಿಧ ಮಠಾಧೀಶರು ಹಾಗೂ ಬಸವಪರ ಸಂಘಟನೆಗಳ ಮುಖ್ಯಸ್ಥರು ಮನವಿಪತ್ರ ಸಲ್ಲಿಸಿದರು.

ಮನವಿ ಪತ್ರದಲ್ಲಿ, ಜೂನ್ 28. 2026 ರಂದು ಬಸವಕಲ್ಯಾಣದಲ್ಲಿ ಕೊಲ್ಲಾಪುರದ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಯವರ ನೇತೃತ್ವದಲ್ಲಿ ಆಯೋಜಿಸಲಾದ “ಬಸವಾದಿ ಶರಣರ ಹಿಂದೂ ಸಮಾವೇಶ” ಕಾರ್ಯಕ್ರಮದ ಕುರಿತು ಜಿಲ್ಲೆಯ ಮಠಾಧೀಶರು, ಬಸವ ಪರ ಸಂಘಟನೆಗಳ ಮುಖಂಡರು ಹಾಗೂ ಬಸವ ಭಕ್ತರ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ತಮ್ಮ ಗಮನಕ್ಕೆ ತರಲು ಈ ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಲಾಗಿದೆ.
ಬಸವ ಭಕ್ತರನ್ನು “ಬಸವ ತಾಲಿಬಾನಿ”ಎಂದು ಪದಪ್ರಯೋಗ ಮಾಡಿ ಅವಮಾನಿಸಿರುವುದು ಹಾಗೂ ಬಸವತತ್ವ ಮತ್ತು ಸಂಸ್ಕೃತಿಯನ್ನು ನಾಡಿನಾದ್ಯಂತ ಪ್ರಚಾರ ಮಾಡುತ್ತಿರುವ ಪೂಜ್ಯರು, ಬಸವಾನುಯಾಯಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದಿಂದಲೂ ಟೀಕೆಗೆ ಗುರಿಯಾಗಿರುವ ಕನೇರಿ ಸ್ವಾಮೀಜಿಯವರ ನಡೆ ಬಸವಾನುಯಾಯಿಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಬಸವಾದಿ ಶರಣರ ಪವಿತ್ರ ನೆಲವಾದ ಬಸವಕಲ್ಯಾಣದ ಗೌರವ, ನಾಡಿನ ಸಮಸ್ತ ಬಸವ ಭಕ್ತರ ಭಾವನೆಗಳು ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಉದ್ಧೇಶದಿಂದ ಕನೇರಿ ಸ್ವಾಮೀಜಿಯವರ ಬಸವಕಲ್ಯಾಣ ಪ್ರವೇಶವನ್ನು ನಾವು ವಿರೋಧಿಸುತ್ತೇವೆ.
ಆದ್ದರಿಂದ ತಮ್ಮ ಮೂಲಕ ಸರ್ಕಾರ ಹಾಗೂ ಸಂಬಂಧಿತ ಜಿಲ್ಲಾಡಳಿತಕ್ಕೆ ಕೆಳಕಂಡಂತೆ ಸೂಚನೆ ನೀಡುವಂತೆ ಸಂಘಟನೆಗಳು ವಿನಂತಿಸಿವೆ.
1) ಬಸವ ಭಕ್ತರ ಭಾವನೆಗಳು ಹಾಗೂ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸೂಕ್ತ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬೇಕು.
2) ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಕನೇರಿ ಸ್ವಾಮೀಜಿಯವರ ಬಸವಕಲ್ಯಾಣ ಪ್ರವೇಶಕ್ಕೆ ಅವಕಾಶ ನೀಡದಂತೆ ಕ್ರಮವಹಿಸಬೇಕು.
ಇದು ಯಾವುದೇ ವೈಯಕ್ತಿಕ ವಿರೋಧವಲ್ಲ: ಬಸವ ತತ್ವ, ಸಾರ್ವಜನಿಕ ಶಾಂತಿ ಹಾಗೂ ಸಾಮಾಜಿಕ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಸಲ್ಲಿಸಲಾಗುತ್ತಿರುವ ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ಮನವಿಯಾಗಿದೆ ಎಂದು ಹೇಳಿವೆ.

ಒಂದು ವೇಳೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದಲ್ಲಿ ಬಸವಭಕ್ತರ ಭಾವನೆಗಳಿಗೆ ಧಕ್ಕೆಯಾಗುವ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸವಾಲುಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಂಘಟನೆಗಳು ವಿನಂತಿಸಿಕೊಂಡಿವೆ.
ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಬೇಲೂರು ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಬಸವಕಲ್ಯಾಣದ ರತ್ನಕಾಂತ ಶಿವಯೋಗಿ, ಸುಗುಣಾತಾಯಿ, ಸತ್ಯಕ್ಕತಾಯಿ, ಗಾಯತ್ರಿ ತಾಯಿ, ಶಿವಕುಮಾರ ಸ್ವಾಮೀಜಿ, ಬೇಲೂರು, ಬಸವದೇವರು ಬಸವಕಲ್ಯಾಣ, ಶಿವಾನಂದ ಸ್ವಾಮಿ ಬಸವಕಲ್ಯಾಣ, ಅನೀಲ ಮಹಾರಾಜ, ಶ್ರೀಶೈಲ ದೇವರು, ಇಂದುಮತಿ ಗಾರಂಪಳ್ಳಿ, ರಾಜೇಂದ್ರ ಜೊನ್ನೆಕೇರಿ, ಯೋಗೇಶ ಶ್ರೀಗೇರೆ, ಸಿದ್ರಾಮ ಶಟಕಾರ, ಪ್ರವೀಣಕುಮಾರ ಎಕಲಾರೆ, ಅರುಣಕುಮಾರ ಮಹಾಜನ ಸೇರಿದಂತೆ ಬಸವಪರ ಸಂಘಟನೆಗಳ ನೂರಾರು ಪ್ರಮುಖರು ಉಪಸ್ಥಿತರಿದ್ದರು.
ಮನವಿಪತ್ರ ಸ್ವೀಕರಿಸಿ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿದರು.
