ಮಾನವಿ: ಭಟ್ಟ, ಹಂಜ್ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಲೋಕೇಶ ಮಾನ್ವಿ
ಲೋಕೇಶ ಮಾನ್ವಿ

ಮಾನವಿ :

ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ರವಿ ಹಂಜ್ ಹಾಗೂ ಆತನನ್ನು ಪ್ರಚೋದಿಸಿ ಬಸವ ಮಂಟಪ ಪುಸ್ತಕ ಪ್ರಕಟಿಸಿದ ವಿಶ್ವೇಶ್ವರ ಭಟ್ ವಿರುದ್ಧ ಕಠಿಣ ರೀತಿಯ ಕಾನೂನು ಕ್ರಮಕ್ಕೆ ಆಗ್ರಹಿಸಿ, ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ಬಸವಕೇಂದ್ರ, ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಸಮಾಜ, ತಾಲೂಕಿನ ಪ್ರಗತಿಪರ, ದಲಿತಪರ, ಕನ್ನಡಪರ, ಕಾಯಕ ಸಂಘಟನೆಗಳು ಸೇರಿದಂತೆ ಬಸವ ಅಭಿಮಾನಿಗಳು ಒಗ್ಗೂಡಿ, ಬಸವ ವೃತ್ತದಲ್ಲಿ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ, ಮಾನ್ಯ ಶಾಸಕರ ಸಮ್ಮುಖದಲ್ಲಿ ತಹಸೀಲ್ದಾರರ ಮೂಲಕ ಮನವಿ ಪತ್ರವನ್ನು ನೀಡಿ ದುಷ್ಕರ್ಮಿಗಳ ಮೇಲೆ ಸೂಕ್ತ ರೀತಿಯ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಬಸವ ಕೇಂದ್ರದ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲ, ಅಣ್ಣ ಬಸವಣ್ಣನವರು ನಮಗಾಗಿ ಮನೆ ಬಿಟ್ಟು ಬಂದರು. ಇಂದು ಅವರ ತತ್ವಗಳಿಗೆ ಚ್ಯುತಿ ಬಂದಾಗ ನಾವು ಮಹಿಳೆಯರು ಮನೆಯಿಂದ ಹೊರಬಂದು ಧ್ವನಿ ಎತ್ತಬೇಕಾಗಿದೆ. ನಮ್ಮೆಲ್ಲರಿಗೆ ಸಮಾನತೆ ತಂದುಕೂಟ್ಟ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಮಾತನಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಬಸವ ಕೇಂದ್ರದ ಗೌರವ ಅಧ್ಯಕ್ಷರಾದ ಡಾ. ಬಸವಪ್ರಭು ಪಾಟೀಲ ಮಾತನಾಡಿ, ಕೇವಲ ರವಿ ಹಂಜ್ ಬಂಧಿಸಿದರೆ ಸಾಲದು, ಅವನು ಇಲ್ಲಿ ನಿಮಿತ್ತ ಮಾತ್ರ. ಇದರ ಹಿಂದಿರುವ ಕುಶಕ್ತಿ ವಿಶ್ವೇಶ್ವರ ಭಟ್ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕರಾದ ಹಂಪಯ್ಯ ಸಾಹುಕಾರ ಮಾತನಾಡಿ , ಮಹಾತ್ಮ ಬಸವಣ್ಣನವರು ಸಮಸಮಾಜದ ಹರಿಕಾರರು. ಇಂತವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವವರನ್ನು ಸುಮ್ಮನೆ ಬಿಡಬಾರದು ಎಂದು ಅಭಿಪ್ರಾಯಪಟ್ಟರು.

ದಲಿತ ಸಂಘಟನೆ ಮುಖಂಡರಾದ ಬಾಲಸ್ವಾಮಿ ಕೊಡ್ಲಿ ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವಗಳು ಇಡೀ ಮಾನವಕುಲದ ಒಳಿತು ಬಯಸುವ ತತ್ವಗಳು. ಇಂತಹ ಬಸವಣ್ಣನವರನ್ನು ಅವಮಾನಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಬಸವ ಕೇಂದ್ರದ ಅಧ್ಯಕ್ಷರಾದ ಶರಣಬಸವ ಬೆಟ್ಟದೂರು, ಅವರು ಜಗಜ್ಯೋತಿ ಬಸವೇಶ್ವರರನ್ನು ಅವಮಾನಿಸಿ ರವಿ ಹಂಜಿಮಠ ಹಾಗೂ ವಿಶ್ವೇಶ್ವರ ಭಟ್ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ರಾಯಚೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಝಿಶಾನ್ ಮಾತನಾಡಿ, ದೂರದ ಅಮೇರಿಕಾದಲ್ಲಿ ಕುಳಿತು ಬರೆಯುವ ಒಬ್ಬ ಫೇಸ್ಬುಕ್ ಬರಹಗಾರನನ್ನು ಸಂಶೋಧಕ ಎಂದೂ ಕರೆಯಲಾಗದು. ಮನುಕುಲದ ಒಳಿತನ್ನು ಬಯಸಿದ ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹವುಳ್ಳ ಬಸವ ಮಂಟಪ ಕೃತಿ ಬ್ಯಾನ್ ಮಾಡಬೇಕು. ಪ್ರಕಾಶಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಸವದ್ರೋಹಿ ವಿಶ್ವೇಶ್ವರ ಭಟ್ ಮತ್ತು ರವಿ ಹಂಜ್ ಪ್ರತಿಕೃತಿ ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಅರುಣ ಚಂದಾ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಹರಿಹರ ಪಾಟೀಲ, ನಾಗರತ್ನ ಪಾಟೀಲ, ನಿಕಟಪೂರ್ವ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಶಾಸಕರಾದ ಹಂಪಯ್ಯ ಸಾಹುಕಾರ ಸೇರಿದಂತೆ ಎಲ್ಲ ಪ್ರಗತಿಪರ, ದಲಿತಪರ, ಕನ್ನಡಪರ ಸಂಘಟನೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು, ಸೇರಿದಂತೆ ನೂರಾರು ಬಸವ ಅನುಯಾಯಿಗಳು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *