ವನಜಭಾವಿ ಗ್ರಾಮದಲ್ಲಿ ಬಸವ ಜಯಂತಿ
ಯಲಬುರ್ಗಾ :
ತಾಲೂಕಿನ ವನಜಭಾವಿ ಗ್ರಾಮದಲ್ಲಿ ಶನಿವಾರ ರಾಷ್ಟ್ರೀಯ ಬಸವದಳದ ವತಿಯಿಂದ 893ನೇ ಬಸವ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಸಾನಿಧ್ಯ ವಹಿಸಿ ಮನಗುಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮಿಗಳು ಮಾತನಾಡಿ, ಗುರು ಬಸವಣ್ಣನವರು ಸಮಾಜಕ್ಕೆ ಕಲ್ಪಿಸಿಕೊಟ್ಟಂತಹ ಮೂರು ಮಹತ್ವದ ತತ್ವಗಳೆಂದರೆ ಕಾಯಕ, ದಾಸೋಹ ಮತ್ತು ಇಷ್ಟಲಿಂಗ ಪೂಜೆ. ಇವುಗಳನ್ನು ಪ್ರತಿಯೊಬ್ಬ ಮಾನವಜೀವಿ ಅರಿತುಕೊಂಡು ಆಚರಣೆಯಲ್ಲಿ ತಂದರೆ, ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.
ಸಮಾಜದಲ್ಲಿ ಜಾತಿಪದ್ಧತಿ ತುಂಬಿ ತುಳುಕುತ್ತಿದೆ. ಲಿಂಗತಾರತಮ್ಯ, ಅಜ್ಞಾನ, ಮೌಢ್ಯತೆ, ಭ್ರಷ್ಟಾಚಾರ, ಸುಲಿಗೆ ಇದೆ. ಬಡವ ಶ್ರೀಮಂತ ಎನ್ನುವ ಭೇದಭಾವ ಇಂದಿಗು ಇದೆ. ಇಂತಹ ಎಲ್ಲ ಸಮಸ್ಯೆಗಳ ನಿವಾರಣೆಗೆ ನಿಜವಾದ ಮದ್ದು ಗುರು ಬಸವಣ್ಣನವರ ತತ್ವಾದರ್ಶಗಳು.

ಪರಮಪೂಜ್ಯ ಡಾ. ಲಿಂಗಾನಂದ ಸ್ವಾಮಿಗಳು ಮತ್ತು ಹರ್ಡೇಕರ್ ಮಂಜಪ್ಪನವರದು ಅನುಕರಣೀಯ ಜೀವನ. ಅಪ್ರತಿಮ ರಾಷ್ಟ್ರಭಕ್ತರಾಗಿದ್ದ ಅವರು ಸಮಾಜ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟವರು. ಜನಸಮುದಾಯ ಒಂದುಗೂಡಬೇಕೆಂದು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಶ್ರಮಿಸಿದರು.
ಮಂಜಪ್ಪನವರು ಬಸವ ಜಯಂತಿಯನ್ನು ಮೊದಲಿಗೆ ಆಚರಣೆಗೆ ತಂದರು. ಸಂಸ್ಕೃತ, ಕನ್ನಡ, ಮರಾಠಿ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಅವರು ಪಡೆದಿದ್ದರು. ಅವರ ತತ್ವಾದರ್ಶಗಳನ್ನು ನಾವೆಲ್ಲ ಪಾಲಿಸಬೇಕಿದೆ ಎಂದು ಸ್ವಾಮೀಜಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜಪ್ಪ ಇಂಗಳದಾಳ ಅವರು, ಗುರು ಬಸವಣ್ಣನವರ ತತ್ವಾದರ್ಶಗಳನ್ನ ಜನಮನಕ್ಕೆ ಬಿತ್ತರಿಸಬೇಕಾದರೆ ಶರಣರ ಸತ್ಸಂಗ ಮತ್ತು ಮಹಾತ್ಮರ ಜಯಂತಿಯ ನೆಪ ಮಾಡಿಕೊಂಡು ಶಿವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ನಮ್ಮ ಮನ ಮನೆ ಪರಿವರ್ತನೆಗೊಳ್ಳಲು ಸಾಧ್ಯವಿದೆ ಎಂದರು.
ಷಟಸ್ಥಲ ಧ್ವಜಾರೋಹಣವನ್ನು ರುದ್ರಪ್ಪ ಮರಕಟ್ ಅವರು ನೆರವೇರಿಸಿದರು. ಬಸವನಗೌಡ ಪೋಲಿಸಪಾಟೀಲ, ಹನಮಂತಪ್ಪ ದಳಪತಿ, ಮಹಾದೇವಪ್ಪ ಚನ್ನಳ್ಳಿ, ಅಮರೇಶಪ್ಪ ಗಡಿಹಳ್ಳಿ, ಕೃಷ್ಣ ಪತ್ತಾರ ಶಿಕ್ಷಕರು, ಹನಮಗೌಡ ಡಿ.ಗೌಡ್ರ,ಯ ವೇದಿಕೆ ಹಂಚಿಕೊಂಡು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೇವಪ್ಪ ಕೋಳೂರು ಮಾತನಾಡಿ, ಬಸವಣ್ಣನವರು ನಾಲ್ಕು ಕಾಲಿನ ಎತ್ತಲ್ಲ. ಮಾನವಕುಲವನ್ನು ಎತ್ತಿ ಹಿಡಿದ ಮಹಾಮಾನವತಾವಾದಿ ಆಗಿದ್ದರು.
ವಚನ ಸಾಹಿತ್ಯದ ತತ್ವಾದರ್ಶಗಳಂತೆ ನಡೆಯುವವರು ಮಾತ್ರ ವ್ಯಕ್ತಿಗತ ದೋಷಗಳನ್ನು ನಿವಾರಿಸಿಕೊಂಡು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ, ಅದಕ್ಕಾಗಿ ನಾವುಗಳು ಇಂದು ನಮ್ಮ ಗ್ರಾಮದಲ್ಲಿ ಸಮಾನತೆಯ ತತ್ವ ಸಾರಿದ ಮಹಾತ್ಮ ಬಸವೇಶ್ವರರ ಜಯಂತಿಯನ್ನ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕುವುದರ ಮೂಲಕ ಜನ್ಮದಿನವನ್ನು ಆಚರಿಸುತ್ತಿದ್ದೇವೆ ಎಂದು ನುಡಿದರು.
ಈ ಸಂದರ್ಭದಲ್ಲಿ ಅಕ್ಕ ನಾಗಲಾಂಬಿಕ ಮಹಿಳಾ ಗಣದ ಸಾವಿತ್ರಮ್ಮ ಆವಾರಿ ಮತ್ತು ಬಸಮ್ಮ ಹೂಗಾರ ಅವರನ್ನು ಸನ್ಮಾನಿಸಲಾಯಿತು.

ಬಸವರಾಜ ಹೂಗಾರ, ಶರಣಪ್ಪ ಹೊಸಳ್ಳಿ, ಗಿರಿಮಲ್ಲಪ್ಪ ಪರಂಗಿ, ಚಿದಾನಂದಗೌಡ ಗೊಂದಿ, ನಿಂಗಪ್ಪ ಪರಂಗಿ, ವಿರುಪಾಕ್ಷಪ್ಪ ಮೇಟಿ, ಪರಮೇಶ್ವರ ಉಚ್ಚಲಕುಂಟಿ, ಹನಮಂತಪ್ಪ ಮೇಟಿ, ಹನಮಂತಪ್ಪ ಹೊರಪೇಟಿ, ಭೀಮನಗೌಡ ಗೌಡ್ರ, ಮಹಾಂತಗೌಡ ಪೋಲಿಸಪಾಟೀಲ, ಅಮರೇಶ್ ನಿಡಶೇಸಿ, ಶರಣಪ್ಪ ಗೊಂದಿ, ಯಲ್ಲಪ್ಪ ಅತ್ತಿಗುಡ್ಡದ ಮತ್ತು ಗ್ರಾಮದ ಗುರು ಹಿರಿಯರು ಸುತ್ತಮುತ್ತಲಿನ ಗ್ರಾಮದ ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.
