ಬೀದರ :
ಬಸವ ಪಥದಲ್ಲಿ ಮುನ್ನಡೆದರೆ ಭಾರತ ವಿಶ್ವಗುರು ಆಗಲಿದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಲಿಂಗಾಯತ ಮಹಾ ಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಗುರುವಾರ ನಡೆದ ಬಸವ ಜಯಂತ್ಯುತ್ಸವ ಹಾಗೂ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವಣ್ಣನವರು ಬೋಧಿಸಿದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ ತತ್ವಗಳಿಗೆ ದೇಶವನ್ನು ವಿಶ್ವಗುರು ಆಗಿಸುವ ಶಕ್ತಿ ಇದೆ ಎಂದು ತಿಳಿಸಿದರು.
ಬಸವಣ್ಣನವರ ಕಾಲದಲ್ಲಿ ಒಂದೂ ಯುದ್ಧ ನಡೆದಿರಲಿಲ್ಲ. ಬದಲಾಗಿ, ಪಾಂಡ್ಯ, ಚೇರ, ಜೋಳ ಮುಂತಾದ 11 ದೇಶಗಳ ಶರಣರು ರಾಜ್ಯ ಕೋಶ ತೊರೆದು ಕಲ್ಯಾಣಕ್ಕೆ ಬಂದು ಶರಣರಾದರು. ಸಾಮಾನ್ಯ ಕಾಯಕ ಮಾಡಿ ಸರಳ ಜೀವನ ಸಾಗಿಸಿದರು. ಬಸವ ಭಕ್ತಿಯಲ್ಲಿ ಮಿಂದು ಮಡಿಯಾದರು. ಇದು, ಬಸವ ಕ್ರಾಂತಿಯ ಶಕ್ತಿ ಎಂದು ಬಣ್ಣಿಸಿದರು.
ಬಸವಣ್ಣನವರು ಬಿದ್ದವರನ್ನು ಮೇಲಕ್ಕೆ ಎತ್ತಲು ಭುವನಕ್ಕೆ ಬಂದ ಮಹಾನುಭಾವ. ಅನಾಥರು, ದೀನರು, ದಲಿತರು, ಶೋಷಿತರೆಲ್ಲ ಬಸವ ಧ್ವನಿ ಕೇಳಿ ಮೈಕೊಡವಿ ಎದ್ದು ನಿಂತರು. ಶೋಷಕರನ್ನು ಪ್ರಶ್ನಿಸಿದರು ಎಂದು ತಿಳಿಸಿದರು.
ಬಸವಣ್ಣನವರ ನೇತೃತ್ವದಲ್ಲಿ ಶರಣ-ಶರಣೆಯರು ವಚನಗಳನ್ನು ಸಂಗ್ರಹಿಸಿದರು. ಅವು ಕೇವಲ ಶಬ್ದಗಳ ಜೋಡಣೆಯಲ್ಲ. ಅನುಭಾವದ ಆಗರ. ಮನುಕುಲಕ್ಕೆ ಮಾರ್ಗದರ್ಶಿ. ವ್ಯಕ್ತಿ ವಿಕಾಸದ ಜತೆಗೆ ವಿಶ್ವದ ಬೆಳವಣಿಗೆಗೆ ದಾರಿದೀಪ ಎಂದು ಹೇಳಿದರು.
ಬಸವಣ್ಣನವರ ವಚನಗಳಲ್ಲಿ ವಿಶ್ವದ ಸರ್ವ ಸಮಸ್ಯೆಗಳಿಗೂ ಪರಿಹಾರವಿದೆ. ವಚನಗಳಿಂದ ಪರಿವರ್ತನೆ ಆಗುತ್ತದೆ. ಆತ್ಮವಿಶ್ವಾಸ ವೃದ್ಧಿಸುತ್ತದೆ. ಹೀಗಾಗಿ ವಚನಗಳನ್ನು ಓದಬೇಕು ಎಂದು ಮುಖ್ಯ ಅನುಭಾವ ಮಂಡಿಸಿದ ಗೋರ್ಟಾ(ಬಿ) ಗ್ರಾಮದ ಜಿ.ಎಸ್. ಪ್ರೌಢಶಾಲೆಯ ಶಿಕ್ಷಕಿ ಮೀರಾಬಾಯಿ ಮಲ್ಲಿಕಾರ್ಜುನ ಮಾಲಿಪಾಟೀಲ ತಿಳಿಸಿದರು.
ಪರುಷಕಟ್ಟೆ ಚನ್ನಬಸವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರಜ್ವಲ ಎಸ್. ರಾಜೋಳೆ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಪ್ರವೀಣ ಬರಗಲ್ ಕಾರ್ಯಕ್ರಮ ಉದ್ಘಾಟಿಸಿದರು. ಲಿಂಗಾಯತ ಮಹಾಮಠದ ಅನ್ನಪೂರ್ಣ ಯೋಜನೆ ಪ್ರಮುಖ ಶಿವಕುಮಾರ ಪಾಖಾಲ್ ಅಧ್ಯಕ್ಷತೆ ವಹಿಸಿದ್ದರು. ಜರ್ಮನಿಯ ಸ್ಟಲ್ಲಾಂಟಿಸ್ ಪ್ರಾಂಕ್ಫರ್ಟ್ನ ರಾಜಕುಮಾರ ಕೆ. ಬೆಳಕೋಟಿ, ನೀಲಮ್ಮನ ಬಳಗದ ಗೋದಾವರಿ ರಾಜೋಳೆ, ಸಾಹಿತಿ ರಮೇಶ ಮಠಪತಿ, ರಾಜಕುಮಾರ ಪಾಟೀಲ ಇದ್ದರು.
ಅನಿಲಕುಮಾರ ಹಂಡೆ ಗುರು ಪೂಜೆಗೈದರು. ನೀಲಮ್ಮ ಬಳಗದ ಸದಸ್ಯೆಯರು ಪ್ರಾರ್ಥನೆ ನಡೆಸಿಕೊಟ್ಟರು. ಗುರುಶ್ರೀ, ಶ್ಯಾಮಲಾ ಎಲಿ ಹಾಗೂ ಮಹಾಂತೇಶ ವಚನ ಗಾಯನ ಮಾಡಿದರು.
ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು. ರೂಪಾ ಮಲ್ಲಿಕಾರ್ಜುನ ಹಂಡೆ ಭಕ್ತಿ ದಾಸೋಹಗೈದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
