ದಾವಣಗೆರೆ:
ಕಾಯಕಯೋಗಿ ಸೊನ್ನಲಗಿ ಸಿದ್ಧರಾಮೇಶ್ವರರು ಕಾಯಕವೇ ಕೈಲಾಸ ಎಂಬ ತತ್ವವನ್ನು ನಂಬಿ, ಸಮಾಜಸೇವೆ ಮತ್ತು ಯೋಗ ಸಾಧನೆಯ ಮೂಲಕ ಜನಮಾನಸದಲ್ಲಿ ದೇವರಾದವರು. 12ನೇ ಶತಮಾನದ ಪ್ರಸಿದ್ಧ ವಚನಕಾರ, ಶಿವಯೋಗಿ ಹಾಗೂ ಸಮಾಜ ಸುಧಾರಕರು.
ಬಸವಣ್ಣನವರ ಸಮಕಾಲೀನರಾಗಿದ್ದು, ಅನುಭವ ಮಂಟಪದ ಪ್ರಮುಖ ಶರಣರಾಗಿದ್ದರು ಎಂದು ಮಹಾರಾಷ್ಟ್ರ ಕೊಲ್ಲಾಪುರದ ಕೆಎಲ್ಇ ಸೊಸೈಟಿಯ ಶಾಲಾ ಸಮಿತಿ ಅಧ್ಯಕ್ಷರಾದ ಸಿಂಧೂ ತಾಯಿ ಶಿವಶಂಕರ ಕಾಡಾದಿ ಹೇಳಿದರು.

ನಗರದ ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಅಜ್ಜಂಪುರ ಶೆಟ್ರು ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ 21 ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ‘ಶ್ರೀ ಗುರು ಸಿದ್ಧರಾಮೇಶ್ವರರು ನಡೆದು ಬಂದ ದಾರಿ’ ವಿಷಯ ಕುರಿತು ಅವರು ಮಾತನಾಡಿದರು.
ಕಪಿಲಸಿದ್ಧ ಚನ್ನಮಲ್ಲಿಕಾರ್ಜುನ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿದ ಸಿದ್ಧರಾಮೇಶ್ವರರು ಸುಮಾರು 68 ಸಾವಿರ ವಚನಗಳನ್ನು ರಚಿಸಿದ್ದಾರೆಂದು ಹೇಳಲಾಗಿದೆ. ಪ್ರಸ್ತುತ 1300 ಕ್ಕೂ ಹೆಚ್ಚು ವಚನಗಳು ಲಭ್ಯವಿವೆ ಎಂದು ಅವರು ತಿಳಿಸಿದರು.
ಕೇವಲ ಶರಣರ ವಚನಗಳನ್ನು ಆಲಿಸುವುದು, ಹಾಡುವುದರಿಂದ ಯಾವುದೇ ಪ್ರಯೋಜನವಾಗದು. ನಿತ್ಯ ಜೀವನದಲ್ಲಿ ವಚನಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ಸಿದ್ದರಾಮೇಶ್ವರ ವಚನಗಳ ಸಾರವನ್ನು ಅರಿಯಬೇಕಾಗಿದೆ ಎಂದು ಹೇಳಿದರು.
ದಾವಣಗೆರೆಯ ಅಜ್ಜಂಪುರ ಶೆಟ್ರು ಮನೆತನದವರು ಮಠಗಳು ಮಾಡುವ ಕೆಲಸವನ್ನು ಮಾಡುತ್ತ ಬರುತ್ತಿದ್ದು, ಕಳೆದ 21 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪುರಸ್ಕರಿಸುವ ಕೆಲಸ ಮಾಡುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ ಎಂದರು.
ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೇ, ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ತಂದೆ – ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಾಗಿದೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿರಿಯ ವೈದ್ಯ ಡಾ. ಸುರೇಶ ಹನಗವಾಡಿ ಮಾತನಾಡಿ, ಪ್ರತಿಭೆಗಳ ಪರಿಶ್ರಮಕ್ಕೆ ಬೆನ್ನೆಲುಬಾಗಿ ನಿಂತು ಎಷ್ಟೋ ತ್ಯಾಗಗಳನ್ನು ಮಾಡಿರುವವರು ತಾಯಂದಿರು. ಈ ಪುರಸ್ಕಾರದಿಂದ ನಿಮಗೆ ದೇವರು ಇನ್ನೂ ಹೆಚ್ಚಿನ ಅವಕಾಶಗಳನ್ನು ನೀಡಲಿ, ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
2025 ಸಾಲಿನಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ರಾಷ್ಟ್ರಕ್ಕೆ 53ನೇ ಬ್ಯಾಂಕ್ ಪಡೆದಿರುವ ಕಿರಣ್ ಸಣ್ಣಪ್ಪ ಕಮತೆ ಅವರ ಸಾಧನೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಆದರ್ಶಿಸಿದರು.

ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಎ.ಎಂ. ಪ್ರಕಾಶ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯ ಡಾ.ಎಸ್.ಎಂ. ಎಲಿ, ಯುಪಿಎಸ್ ಬ್ಯಾಂಕ್ ವಿಜೇತ ಸಣ್ಣಪ್ಪ ಕಮತೆ, ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ರಾಜಣ್ಣ, ಮೃತ್ಯುಂಜಯ, ಷಡಕ್ಷರಿ, ಪ್ರತಾಪ್, ವಿಜಯಕುಮಾರ, ಡಾ.ಎ.ಎಂ. ರಾಜಶೇಖರ, ಹಾಸಬಾವಿ ಶಿವಕುಮಾರ ಸೇರಿದಂತೆ ಅಜ್ಜಂಪುರ ಮನೆತನದವರು ಭಾಗವಹಿಸಿದ್ದರು.
ಅಕ್ಕಮಹಾದೇವಿ ಸಮಾಜದ ಸದಸ್ಯರು ವಚನ ಪ್ರಾರ್ಥನೆ ಮಾಡಿದರು. ಸುವಿದಾ ಅಜ್ಜಂಪುರ ಸ್ವಾಗತಿಸಿದರು. ನಮ್ರತಾ ಅಜ್ಜಂಪುರ ನಿರೂಪಿಸಿದರು. ಪೂಜಾ ಅಜಯ್ ವಂದಿಸಿದರು.
