ಪ್ರವಚನ: ಶರಣರ ಮಹತಿಯ ಒಟ್ಟು ಸಾರವೇ ಪ್ರಭುಲಿಂಗಲೀಲೆ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ:

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 3

ಬಸವಾದಿ ಶರಣರ ವಚನ ಸಿದ್ಧಾಂತ ಸರಳ ಸಿದ್ಧಾಂತ. ಅವರು ಜೀವನದ ಸತ್ಯತೆಯ ಸಂಸ್ಕೃತಿ ಕಲಿಸಿದರು. ಅವರ ಸತ್ಯ ವಚನಗಳನ್ನು ಸುಮ್ಮನೆ ಕೇಳಿದರೇ ಮನಸ್ಸು ಪ್ರಸನ್ನವಾಗುತ್ತದೆ. ಓದುಗರು, ಕೇಳುಗರು ಧನ್ಯರಾಗುತ್ತೇವೆ.

ಮನುಷ್ಯ ಮೊದಲು ಉತ್ತಮ ಓದುಗ ಮತ್ತು ಕೇಳುಗನಾಗಬೇಕು. ಒಳ್ಳೆಯ ಕೇಳುಗ ಒಳ್ಳೆಯ ಹೇಳುಗನಾಗುತ್ತಾನೆ. ಇದನ್ನೇ ನಮ್ಮ ಪೂರ್ವಜರು ಶ್ರವಣಂ, ಕೀರ್ತನಂ, ಸ್ಮರಣಂ, ಪಾದಸೇವೆಯಂ, ಅರ್ಚನಂ, ಸಖ್ಯಂ ಎಂಬ ಎಂದು ಹೇಳಿದ್ದಾರೆ. ‘ಎನಗೆ ನಿಮ್ಮ ನೆನಹಾದಾಗಲೇ ಉದಯ, ಎನಗೆ ನಿಮ್ಮ ಮರೆಹಾದಾಗಲೇ ಅಸ್ತಮಾನ’ ಎಂದು ಬಸವಣ್ಣನವರು ಕರೆದಿದ್ದಾರೆ.

ಅಷ್ಟಿಷ್ಟು ಬಲ್ಲವರು, ಭಾವುಕರು, ಬಲ್ಲಿದರು ಈ ಜಗತ್ತಿನಲ್ಲಿದ್ದಾರೆ. ಎಲ್ಲ ಬಲ್ಲವರು ಯಾರೂ ಇಲ್ಲ. ಇದನ್ನೇ ಸರ್ವಜ್ಞ ಕವಿ

“ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ

ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ

ವೆಲ್ಲರಿಗೆ ಇಲ್ಲ ಸರ್ವಜ್ಞ”

ಎಲ್ಲ ವಿದ್ಯೆಗಳನ್ನು ಅರಿತವರಾರೂ ಇಲ್ಲ. ಇದ್ದರೂ ಅವರು ಬಹು ಅಲ್ಪ ಜನರು, ಅವರು ಸಹ ಬಲಹೀನರಾಗಿದ್ದಾರೆ; ಸಾಹಿತ್ಯವನ್ನು ಎಲ್ಲರೂ ಬರೆಯಲಾರರು ಅಥವಾ ಓದಲಾರರು ಎಂದು ಹೇಳಿದ್ದಾರೆ.

ಅಹಂ ಅಳಿದ ಅಲ್ಲಮನ ಚರಿತ್ರೆಯನ್ನು ಕೇಳುವವರು ಕೂಡ ಮಹಾದೇವ ಸ್ವರೂಪರು ಎಂಬ ಶಿವಭಾವದಲ್ಲಿ ಚಾಮರಸ ತನ್ನೊಳಗಿನ ಅಹಂ ಕಳೆದುಕೊಂಡು ಆತ್ಮನಿವೇದನೆಯ ಭಾವದೊಳಗೆ ಪ್ರಭುಲಿಂಗ ಲೀಲೆಯ ಮಹತಿಯನ್ನು ಈ ಕಾವ್ಯದಲ್ಲಿ ಹೇಳುತ್ತಾರೆ.

“ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗವನು ನಾ ನೆಲ್ಲರಹನರಿವಂದದಲಿ ಪೇಳುವೆನುಚಿತ ವಚನದಲಿ।

ಸೊಲ್ಲಿನೊಳಗಣ ಸೊಂಪನಿಂಪನು ಬಲ್ಲವರು

ಭಾವುಕರು ಭಕ್ತಿಯ ಬಲ್ಲಿದರು|

ಲಾಲಿಪುದಿ ಪ್ರಭುಲಿಂಗಲೀಲೆಯಲಿ”

ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗ ಎಂದರೆ ೧೨ನೇ ಶತಮಾನದ ಶರಣ ಸಂಸ್ಕೃತಿಯಲ್ಲಿನ ಭಕ್ತಿ, ವೈರಾಗ್ಯ ಮತ್ತು ಜ್ಞಾನದ ಪರಿಪೂರ್ಣ ಮಾರ್ಗ. ಇದು ಕೇವಲ ಬಾಹ್ಯ ಆಚರಣೆಗಳಿಗೆ ಸೀಮಿತವಾಗದೆ, ಅಂತರಂಗದ ಶುದ್ಧೀಕರಣ, ನಿರ್ಮಾಯತ್ವ ಮತ್ತು ಅಹಂಕಾರದ ವಿಸರ್ಜನೆಯನ್ನು ಪ್ರತಿಪಾದಿಸುತ್ತದೆ.

ಇದು ಕೇವಲ ಮಾತಿನ ಬೂಟಾಟಿಕೆ ಅಲ್ಲ. ತಮ್ಮ ತನು, ಮನ, ಧನವನ್ನು ಗುರು, ಲಿಂಗ, ಜಂಗಮಕ್ಕೆ ಸವೆಸಿ ಪರಮ ಪದವಿ ಹೊಂದಿದ ಭಕ್ತರು ಕೇಳುವ ಪ್ರಭುಲಿಂಗಲೀಲೆ. ಶರಣರು ಇಂದಿಗೂ ಸ್ಮರಣೀಯರು. ಇಂತಹ ಶರಣರ ಒಟ್ಟು ಸಾರವೇ ಈ ಪ್ರಭುಲಿಂಗಲೀಲೆ ಎಂದು ಬಹಳ ಯೋಗ್ಯವಾದ ಮಾತುಗಳನ್ನು ಹೇಳುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *