ಬೆಂಗಳೂರು:
ವೀರಶೈವ ಲಿಂಗಾಯತ ಸಮುದಾಯದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಸುಮಾರು 14 ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೀರಶೈವ ಲಿಂಗಾಯತ ಮಹಾಸಭೆಯ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ 13,500 ವಿದ್ಯಾರ್ಥಿಗಳಿಗೆ ಕೊಡುವುದಲ್ಲದೇ ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣದ 500 ವಿದ್ಯಾರ್ಥಿಗಳಿಗೂ ಮಹಾಸಭಾದಿಂದ ಪುರಸ್ಕಾರ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ಒಟ್ಟು ಆರು ರಾಜ್ಯಗಳಿಂದ 16,117 ಅರ್ಜಿಗಳು ಬಂದಿದ್ದು, ಬಂದಂತ ಅರ್ಜಿಗಳನ್ನು ಪರಿಶೀಲಿಸಿದ ಮೇಲೆ ಒಟ್ಟು 14 ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಲು ಮಹಾಸಭಾದ ಕಾರ್ಯಕಾರಿ ಮಂಡಳಿ ತೀರ್ಮಾನಿಸಿದೆ’ ಎಂದರು.
ಇತ್ತೀಚೆಗೆ ನಡೆದ ಸುಜ್ಞಾನ ಮಂದಿರದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಘಟಕದ ವತಿಯಿಂದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ ₹1 ಸಾವಿರ ನಗದು, ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು ಎಂದೂ ಖಂಡ್ರೆ ತಿಳಿಸಿದರು.
