ಕೋಮುವಾದಿಗಳ ವಿರುದ್ಧ ಕೊನೆ ಉಸಿರು ಇರುವವರೆಗೆ ಹೋರಾಟ: ಸಿದ್ದರಾಮಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

‘ಕೋಮುವಾದ ಸಂವಿಧಾನಕ್ಕೆ ವಿರುದ್ಧವಾದುದು. ಕೋಮುವಾದಿ ಶಕ್ತಿಗಳ ವಿರುದ್ಧ ಕೊನೆ ಉಸಿರು ಇರುವವರೆಗೆ ಹೋರಾಟ ಮಾಡುತ್ತೇನೆ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಜೀವದ ಕೊನೆಯುಸಿರು ಇರುವವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ,’ ಎಂದು ಸಿದ್ದರಾಮಯ್ಯ ಹೇಳಿದರು.

ಸಂವಿಧಾನ ಇಲ್ಲದೇ ಇದ್ದಿದ್ದರೆ ನಾನು ಶಾಸಕ, ಮಂತ್ರಿ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನಾಗಲು ಸಾಧ್ಯ ಆಗುತ್ತಿರಲಿಲ್ಲ. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅದನ್ನು ವಿರೋಧಿಸಿ, ಸಮಾನತೆಗಾಗಿ ಹೋರಾಟ ಮಾಡುತ್ತೇನೆ. ಅದೇ ರೀತಿ, ಕನ್ನಡ ನಾಡಿನ ನೆಲ, ಜಲ ಮತ್ತು ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಕರ್ನಾಟಕದ ಹಕ್ಕುಗಳಿಗಾಗಿ ಹೋರಾಡುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ಮೊದಲಿನಿಂದಲೂ ಬುದ್ಧ, ಬಸವ, ಅಂಬೇಡ್ಕರ್‌, ಗಾಂಧೀಜಿ ಇವರ ತತ್ವ ಆದರ್ಶಗಳ ಮೇಲೆ ನಂಬಿಕೆ ಇಟ್ಟವನು. ಸಂವಿಧಾನದ ಮೇಲೆ ಅಪಾರ ಗೌರವ ಇಟ್ಟುಕೊಂಡವನು. ಇಂತಹದ್ದೊಂದು ದುಬಾರಿ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ. ಈ ಸಂವಿಧಾನದ ಬಲ ಇಲ್ಲದೆ ಹೋಗಿದ್ದರೆ ನಾನು ಎಲ್ಲೋ ಕುರಿ ಮೇಯಿಸಿಕೊಂಡೋ, ಇನ್ನೇನೋ ಆಗಿ ಇರುತ್ತಿದ್ದೆ’ ಎಂದರು.

‘ಹೀಗಾಗಿ ಜಾತಿ, ಧರ್ಮ ಮೀರಿ ಎಲ್ಲರೂ ಒಂದು ಕುಟುಂಬವಾಗಿ ಬಾಳಬೇಕು ಎಂಬ ವಿಚಾರದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ಆರ್ಥಿಕವಾಗಿ, ಸಾಮಾಜಿಕವಾಗಿ ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಕುವೆಂಪು ಅವರು ಹೇಳಿದಂತೆ, ಸರ್ವಜನಾಂಗದ ಶಾಂತಿಯ ತೋಟ ಎಂಬ ವಿಚಾರದಲ್ಲಿ ನಂಬಿಕೆ ಇಟ್ಟವನು’ ಎಂದು ಹೇಳಿದರು.

‘ನಾನು ಎಂದಿಗೂ ನಂಬಿದ ಮೌಲ್ಯಗಳ ಜತೆ ರಾಜೀ ಮಾಡಿಕೊಳ್ಳಲಿಲ್ಲ. ಸಿದ್ಧಾಂತದ ಜತೆಗೆ ರಾಜೀ ಮಾಡಿಕೊಳ್ಳಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಆತನ ಬದುಕಿನ ಪ್ರಾಥಮಿಕ ಆದ್ಯತೆಯಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ ಒದಗಿಸಬೇಕು ಎಂಬುದು ನನ್ನ ನಂಬಿಕೆ. ಅದಕ್ಕಾಗಿ ಎಲ್ಲ ಬಡವರಿಗೂ ಅನ್ನ, ಗೃಹಲಕ್ಷ್ಮಿ ಮೂಲಕ ₹2,000, ಗೃಹಜ್ಯೋತಿ ಮೂಲಕ ಉಚಿತ ವಿದ್ಯುತ್‌, ಯುವನಿಧಿ, ಶಕ್ತಿ ಯೋಜನೆ ಜಾರಿ ಮಾಡಿದೆ. ಬರ ಬಂದಾಗಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ, ಇಂಧನ ಸಚಿವ ಕೆ.ಜೆ.ಜಾರ್ಜ್‌, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಉಪಸ್ಥಿತರಿದ್ದರು.

ಹೈಕಮಾಂಡ್ ರಾಜೀನಾಮೆಗೆ ಕಾರಣ

‘ಹೈಕಮಾಂಡ್‌ ಯಾವಾಗ ಸೂಚಿಸುತ್ತದೋ ಆವಾಗ ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ. ಆ ಪ್ರಕಾರ ಮೊನ್ನೆ ಕರೆಸಿ ರಾಜೀನಾಮೆ ಕೊಡಿ ಎಂದು ಹೇಳಿದ್ದರಿಂದಾಗಿ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಯಮಾನದವನಲ್ಲ. ಈ ರಾಜೀನಾಮೆ ಪತ್ರವನ್ನು ಕೂಡಾ ಮನಃಪೂರ್ವಕವಾಗಿ ನೀಡಿದ್ದೇನೆ’ ಎಂದು ಹೇಳಿದರು.

ಸಿದ್ದರಾಮಯ್ಯ ‘ಕೃಷ್ಣಾ’ದಿಂದ ನಿರ್ಗಮಿಸಿದ ಬಳಿಕ ಅಭಿಮಾನಿಗಳ ಗುಂಪೊಂದು ‘ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಅನ್ಯಾಯ ಮಾಡಿದೆ. ಹೈಕಮಾಂಡ್‌ಗೆ ಧಿಕ್ಕಾರ’ ಎಂದು ಘೋಷಣೆ ಕೂಗಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *