ಮಸ್ಕತ್‌ ಬಸವ ಬಳಗದಿಂದ 16ನೇ ವರ್ಷದ ಬಸವ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಭಕ್ತರಾಗಿ ಮಾಡುವ ಸೇವೆ ಹಿರಿದು: ಗುರುಮಹಾಂತ ಶ್ರೀಗಳು

ಮಸ್ಕತ್

ಮಕ್ಕಳ ಭವಿಷ್ಯ ರೂಪಿಸಲು ಸಾಮಾನ್ಯ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣವೂ ಅಗತ್ಯ, ಸರಿಯಾದ ನೀತಿವಂತಿಕೆ ಮಕ್ಕಳಲ್ಲಿ ಬೆಳೆಯದೇ ಹೋದರೆ ಭವಿಷ್ಯದಲ್ಲಿ ಏನನ್ನೂ ಸಾಧಿಸಲಾಗದು, ಎಂದು ವಿಜಯ ಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಸ್ವಾಮಿಗಳು ಹೇಳಿದರು.

ಅವರು ಮಸ್ಕತ್‌ ಬಸವ ಬಳಗ ಆಯೋಜಿಸಿದ್ದ 16ನೇ ವರ್ಷದ ಬಸವ ಜಯಂತ್ಯೋತ್ಸವ-2026ರ ಸಾನ್ನಿಧ್ಯ ವಹಿಸಿ ಆಶೀರ್ವಚನ ಮಾತುಗಳನ್ನಾಡಿದರು.

ನಿಮ್ಮ ಎಡೆಬಿಡದ ನಿತ್ಯದ ದುಡಿಮೆಯಲ್ಲಿ ಮಕ್ಕಳನ್ನು ಆಲಕ್ಷಿಸಬೇಡಿ, ಅವರ ಭವಿಷ್ಯವನ್ನೂ ನಿರ್ಲಕ್ಷಿಸಬೇಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿ, ಮನುಷ್ಯನ ನೆಮ್ಮದಿಯ ಬದುಕಿಗೆ ಅಗತ್ಯವಾದುದು ಭೌತಿಕ ಸಂಪತ್ತು ಎಂದು ಭಾವಿಸಬೇಡಿ, ದೇಹದ ಆರೋಗ್ಯವೇ ಸರಿ ಇಲ್ಲದಿದ್ದರೆ ಎಷ್ಟು ಸಂಪತ್ತಿದ್ದರೂ ಏನು ಪ್ರಯೋಜನ? ಅದನ್ನು ಅನುಭವಿಸಲು ಸಾಧ್ಯವೇ ಎಂಬ ಸತ್ಯವನ್ನರಿತು ದುಶ್ಚಟಗಳಿಂದ, ದುರ್ವ್ಯಸನಗಳಿಂದ ದೂರಾಗಿ, ಬಸವತತ್ವವನ್ನು ಮೈಗೂಡಿಸಿಕೊಂಡು ಸಾರ್ಥಕ ಬದುಕು ಸಾಗಿಸಿರಿ. ಮನಸ್ಸು ಸದೃಢವಾಗಿದ್ದರೆ ದೇಹವೂ ಸಹ ಸದೃಢವಾಗಿರುತ್ತದೆ.

ಲೌಕಿಕವಾದ ಜೀವನ ಸುಖಮಯವಾಗಿರಬೇಕು, ಲೌಕಿಕ ಜೀವನದಲ್ಲಿ ಯಾರೂ ಕಷ್ಟವನ್ನು ಆಹ್ವಾನಿಸುವುದಿಲ್ಲ, ಎಲ್ಲರೂ ಸುಖವನ್ನೇ ಬಯಸುತ್ತಾರೆ. ದೇವರಲ್ಲಿ ಸುಖವನ್ನೇ ಕೊಡು ಎಂದು ಪ್ರಾರ್ಥಿಸುತ್ತಾರೆ. ಆ ಸುಖಕ್ಕಾಗಿ ಜನ ಹಣ, ಅಧಿಕಾರ, ಕೀರ್ತಿಯನ್ನು ಗಳಿಸುತ್ತಾರೆ. ಹಣ, ಅಧಿಕಾರ, ಕೀರ್ತಿಯಿಂದಲೂ ಸುಖ ಸಿಗುತ್ತದೆ ಎಂದು ಭಾವಿಸಿ ಅದನ್ನು ಗಳಿಸಲು ಪ್ರಯತ್ನಿಸುತ್ತಾರೆ.

ಲೌಕಿಕ ಜೀವನವು ಸುಖ ಹಾಗೂ ದು:ಖದ ಸಂಗಮ. ಸದಾಕಾಲ ಸುಖ ಇರುವುದಿಲ್ಲ, ಸದಾಕಾಲ ದು:ಖವೂ ಇರುವುದಿಲ್ಲ, ಸುಖ ದು:ಖಗಳ ಸಂಗಮವೇ ಲೌಕಿಕ ಜೀವನ ಎಂದು ಸ್ವಾಮೀಜಿ ಹೇಳಿದರು.

ಮೌಢ್ಯತೆಯಿಂದ ದೂರಾಗಿ ಬಾಳೋಣ

ವರ್ಷಕ್ಕೊಂದು ದಿನ ಅಪ್ಪ ಬಸವಣ್ಣನವರನ್ನು ನೆನೆದು ಬಸವ ಜಯಂತ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಿದರೆ ಸಾಲದು. ಅಪ್ಪ ಬಸವಣ್ಣನವರ ತತ್ವ ಆದರ್ಶಗಳು, ವಚನ ಸಾಹಿತ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮೌಢ್ಯತೆಯಿಂದ ದೂರಾಗಿ ಬಾಳಲು ಪಣ ತೊಡುವುದೇ ಬಸವ ಜಯಂತ್ಯೋತ್ಸವ ಎಂದರು.

ಕನ್ನಡ ನಾಡಿನಿಂದ ಬಂದ ತಾವೆಲ್ಲ ಬಸವ ಬಳಗ ಕಟ್ಟಿಕೊಂಡು ಒಂದುಗೂಡಿ ಸುಮಾರು 2 ದಶಕ ಸಮೀಪಿಸುತ್ತಿದೆ, ಎಲ್ಲರೂ ಬಸವ ಸೇವಾಕರ್ತರು ಎಂದು ಭಾವಿಸಿ ಯಾವುದೇ ಮೇಲು ಕೀಳು ಇಲ್ಲದ ತಮ್ಮೆಲ್ಲರ ಸೇವಾ ನಿರ್ದಾರ ಇತರರಿಗೆ ಮಾದರಿ ಎಂದರು. ಬಸವ ಬಳಗದ ಸೇವೆ, ತಾಯಂದಿರ ಸೇವೆ ಶ್ಲಾಘನೀಯ ಎಂದರು.

ರೇಣುಕ ಮೂರ್ತಿ, ಮಂಜುನಾಥ ಸಂಗಟಿ, ಶಿವಯೋಗಿ ಜವಳಗಡ್ಡಿ, ರಾಜು ಗಡದಣ್ಣವರ, ಬಸನಗೌಡ ಬಿರಾದಾರ, ಬಸವರಾಜ ಸಿದೇಗಲ್, ಶಿವಪ್ರಕಾಶ, ಡಾ. ನಿರ್ಮಲಾ ಅಮರೇಶ, ಸುಶೀಲಾ ಸತೀಶ ಪಾಟೀಲ ಹಾಗೂ ಲತಾ ಪಂಚಾಳ ಮತ್ತಿತರರು ಪಾಲ್ಗೊಂಡಿದ್ದರು.

ಮಹಾಂತ ಜೋಳಿಗೆ ರೂಪಕ ಪ್ರದರ್ಶನ:

ಮನುಷ್ಯನ ಬದುಕಿಗೆ ಮಾರಕವಾದ ಮೌಡ್ಯತೆಯನ್ನು ದೂರಮಾಡುವಲ್ಲಿ ಪ್ರಮುಖ 5 ಕಾರಣಗಳು, ಅವನ್ನು ಸುಮಾರು 45 ನಿಮಿಷಗಳ ನೃತ್ಯದ ಮೂಲಕವೇ ಪ್ರದರ್ಶನದ ಮಹಾಂತ ಜೋಳಿಗೆ ರೂಪಕ ಪ್ರದರ್ಶನಗೊಂಡಿತು.

 ಪೂಜ್ಯರು ಪ್ರದರ್ಶನ ಮಾಡಿದ ಎಲ್ಲ ಕಲಾವಿದರ ಕಲಾಸೇವೆ ಶ್ಲಾಘನೀಯ ಎಂದರು. ಕನ್ನಡ ನಾಡಿನವರೇ ಆದ 50ಕ್ಕೂ ಹೆಚ್ಚು ಕಲಾವಿದರು, ತಾಯಂದಿರು ತಮ್ಮ ನಿತ್ಯದ ದುಡಿಮೆಯನ್ನೂ ಬದಿಗಿಟ್ಟು ಸುಮಾರು 2 ತಿಂಗಳುಗಳ ಕಾಲ ಪ್ರಯತ್ನ ಮಾಡಿ ರೂಪಕ ತಯಾರಿಸಿದ ಸೇವೆಯನ್ನು ಶ್ರೀಗಳು ತುಂಬು ಹೃದಯದಿಂದ ಶ್ಲಾಘಿಸಿದರು. ಜನತೆಗೆ ಮೌಡ್ಯತೆ ದೂರಮಾಡುವ ಸಂದೇಶ ಸಾರುವ ರೂಪಕದ ಉದ್ದೇಶವಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *