ಕ್ರಾಂತಿಕಾರಿ ವಿಚಾರಗಳಿಂದ ಶ್ರೇಷ್ಠ ಶರಣರಾಗಿದ್ದ ಮಡಿವಾಳ ಮಾಚಿದೇವರು: ಸಚಿವ ಬಸವಂತಪ್ಪ

ಬಸವ ಮೀಡಿಯಾ
ಬಸವ ಮೀಡಿಯಾ

ಮಾಚಿದೇವ ಸಮುದಾಯ ಭವನದಿಂದ ಬಿ.ಪಿ. ರಸ್ತೆಯವರೆಗೆ ಇರುವ ರಸ್ತೆಗೆ ಮಡಿವಾಳ ಮಾಚಿದೇವರ ಹೆಸರು ನಾಮಕರಣ

ದಾವಣಗೆರೆ:

ಮಡಿವಾಳ ಹಾಗೂ ಹಡಪದ ಅಪ್ಪಣ್ಣ ಶ್ರಮಿಕ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಏಳಿಗೆಗೆ ಸರಕಾರ ಬದ್ಧವಾಗಿದ್ದು, ಈ ಸಮುದಾಯಗಳ ಕಾಯಕನಿಷ್ಠೆಯನ್ನು ಶ್ಲಾಘಿಸಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಮಾತನಾಡಿದರು.

ಇಲ್ಲಿನ ವಿನೋಬ ನಗರದ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಇತ್ತಿಚೆಗೆ ಮಡಿವಾಳ ಮಾಚಿದೇವ ಸಂಘ, ಮಹಿಳಾ ಸಂಘ ಹಾಗೂ ಮಡಿಕಟ್ಟೆ ಸಮಿತಿಯಿಂದ ಆಯೋಜಿಸಿದ್ದ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಡಿವಾಳ ಮಾಚಯ್ಯ ಸಮುದಾಯವು ಶೈಕ್ಷಣಿಕವಾಗಿ ಮುನ್ನಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದ ಕಾಲದಿಂದಲೂ ಮಡಿವಾಳ ಮಾಚಯ್ಯನವರು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ಮತ್ತು ಕ್ರಾಂತಿಕಾರಿ ವಿಚಾರಗಳಿಂದ ಶ್ರೇಷ್ಠ ಶರಣರಾಗಿ ಗುರುತಿಸಿಕೊಂಡಿದ್ದು, ಈ ಸಮುದಾಯವು ಪ್ರಾಮಾಣಿಕ ಕಾಯಕಕ್ಕೆ ಹೆಸರಾಗಿದೆ. ಸಮಾಜದ ಕಡೆಯ ಹಂತದಲ್ಲಿರುವ ಜನರಿಗೆ ಶಿಕ್ಷಣವೇ ಏಕೈಕ ಆಶಾಕಿರಣವಾಗಿದ್ದು, ಪೋಷಕರು ಇದರತ್ತ ಗಮನ ಕೊಡಬೇಕು ಎಂದರು.

ಹಿಂದೆ ಎಚ್. ಆಂಜನೇಯ ಅವರು ಸಚಿವರಾಗಿದ್ದಾಗ ಜಿಲ್ಲೆಯ ಪ್ರತಿಯೊಂದು ಸಣ್ಣ ಸಮುದಾಯಕ್ಕೂ ಕನಿಷ್ಠ 50 ಲಕ್ಷದಿಂದ 1 ಕೋಟಿ ರೂ.ವರೆಗೂ ಅನುದಾನ ನೀಡಿ ಸಮುದಾಯ ಭವನ, ಶಾಲೆ ಹಾಗೂ ಹಾಸ್ಟೆಲ್ ನಿರ್ಮಾಣಕ್ಕೆ ನೆರವಾಗಿದ್ದರು. ಅದೇ ರೀತಿ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಅವರೊಂದಿಗೆ ಸೇರಿ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಮುಜರಾಯಿ ಸಚಿವರಾಗಿ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲು ಅವಕಾಶವಿದ್ದು, ಮಡಿವಾಳ ಸಮುದಾಯದ ಮಠ ಮತ್ತು ದೇವಸ್ಥಾನದ ಆವರಣದಲ್ಲಿ ಗುರುಗಳು ತಂಗಲು ಅನುಕೂಲವಾಗುವಂತೆ ಕುಠೀರ ನಿರ್ಮಾಣಕ್ಕೆ ಸಂಬಂಧಪಟ್ಟ ಆಯುಕ್ತರೊಂದಿಗೆ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

“ನನ್ನ ಅಧಿಕಾರದ ಅವಧಿಯಲ್ಲಿ ನಗರದ ಪ್ರಮುಖ ರಸ್ತೆಗಳಿಗೆ ಎಲ್ಲ ಶರಣರ ಹೆಸರು ನಾಮಕರಣ ಮಾಡಬೇಕೆಂದು ನಿರ್ಧರಿಸಿದಂತೆ ಮಾಚಿದೇವ ಸಮುದಾಯ ಭವನದಿಂದ ಬಿ.ಪಿ. ರಸ್ತೆಯವರೆಗೆ ಇರುವ ರಸ್ತೆಗೆ ಮಡಿವಾಳ ಮಾಚಿದೇವ ಹೆಸರು ನಾಮಕರಣ ಮಾಡಿದ್ದು, ಸರಕಾರವೂ ಮಂಜೂರು ಮಾಡಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಬೇಕು.” ಆ ಮೂಲಕ ಶಿವಶರಣರ ಹೆಸರು ಮುಂದಿನ ಪೀಳಿಗೆ ಸ್ಮರಿಸಿ ಅವರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಪಾಲಿಕೆ ಮಾಜಿ ವಿಪಕ್ಷ ನಾಯಕ ಪ್ರಸನಕುಮಾರ ಮಾತನಾಡಿದರು.

ಪಾಲಿಕೆ ಮಾಜಿ ವಿಪಕ್ಷ ನಾಯಕ ಎ. ನಾಗರಾಜ ಸಹ ಮಾತನಾಡಿದರು.

ಮೂಡಬಿದಿರೆಯ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಟಿ.ಜಿ. ರಮೇಶಬಾಬು, ಎಂ.ಎನ್. ಬಸವರಾಜಪ್ಪ, ಎಂ. ನಾಗರಾಜ, ಎಂ.ಎಚ್. ಮಂಗಳಾ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *