ಬೀದರ:
ಅಂತರಂಗ-ಬಹಿರಂಗದಲ್ಲಿ ಲೌಕಿಕ ಮತ್ತು ಆಧ್ಯಾತ್ಮಿಕದ ಬದುಕು ಸತಿ-ಪತಿಗಳ ಭಕ್ತಿ ಒಳ ಹೊರಗು ಒಂದಾಗಿದ್ದು, ಉತ್ತಮ ಶರಣ ಸಂಸ್ಕೃತಿ, ಸಂಸ್ಕಾರ ಹೊಂದಿದ ಬದುಕು ಕುಂಬಾರ ಗುಂಡಯ್ಯ ಅವರದಾಗಿತ್ತು. ಗುಂಡಯ್ಯ ಅವರು ಬಸವಾದಿ ಶರಣರಲ್ಲಿ ಪ್ರಮುಖರಾಗಿದ್ದರು ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಅಕ್ಕ ಗಂಗಾಬಿಕಾ ಪಾಟೀಲ ನುಡಿದರು.

ನಗರದ ಶಿವಯೋಗಿ ಶಿವಾಚಾರ್ಯ ಮಂಟಪದಲ್ಲಿ ಮಾಸಿಕ ಚಿಂತನ ಗೋಷ್ಠಿಯಲ್ಲಿ ಕುಂಬಾರ ಗುಂಡಯ್ಯ ಅವರ ಕುರಿತು ಹಾಗೂ ಸುನೀತಾ ಗೌಡರ ಅವರು ರಚಿಸಿದ ‘ಸಮರಸ’ ಕವನ ಸಂಕಲನ ಬಿಡುಗಡೆ ಹಾಗೂ ಸುನೀತಾ ಡಾ. ಶ್ರೀಧರ ಗೌಡರ (ದಾಡಗೆ) ಅವರ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ನಿಮಿತ್ತ 25 ಶರಣ ಸಂಸ್ಕೃತಿವುಳ್ಳ ದಂಪತಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣ ಸಾಹಿತ್ಯ ಸೇವೆ ಮಾಡುತ್ತಿರುವ ಸತಿಪತಿಗಳ ಭಕ್ತಿ ಸಮರಸ, ಸಾಮರಸ್ಯದಿಂದ ಕೂಡಿರುತ್ತದೆ. ಎಲ್ಲಿ ಸಮರಸದ ಜೀವನವಿರುತ್ತದೆಯೋ ಅಲ್ಲಿ ಸ್ವರ್ಗವಿರುತ್ತದೆ. ಅಂತಹ ಶರಣರ ಬದುಕು ಸುನೀತಾ ಡಾ. ಶ್ರೀಧರ ಗೌಡರ ಅವರದಾಗಿದೆ.
ಪ್ರಸ್ತುತ ಸಮಯದಲ್ಲಿ ಕುಟುಂಬದಲ್ಲಿ ಸಾಮರಸ್ಯದ ಕೊರತೆ ಇದೆ, ಅಂತಹ ಸಾಮರಸ್ಯದ ಬದುಕು ಶರಣ ಸಂಸ್ಕೃತಿ ಮತ್ತು ಸಂಸ್ಕಾರದಿಂದ ಮಾತ್ರ ಸಾಧ್ಯವಿದೆ ಎಂದು ನುಡಿದರು.
ಕಲಬುರಗಿಯ ಸಾಹಿತಿಗಳಾದ ಮಹಾಂತೇಶ ಕುಂಬಾರ ಕಾರ್ಯಕ್ರಮ ಉದ್ಘಾಟಿಸಿ, ಕುಂಬಾರ ಗುಂಡಯ್ಯ ಅವರ ಕುರಿತು ಅನುಭಾವ ನೀಡುತ್ತಾ, ಕುಂಬಾರ ಗುಂಡಯ್ಯ ಅವರು ಬಸವಾದಿ ಶರಣರ ಕಾಯಕ, ದಾಸೋಹ, ಭಕ್ತಿ ಅಳವಡಿಸಿಕೊಂಡು ಉನ್ನತ ಆಧ್ಯಾತ್ಮ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದರು.
ಸಾಹಿತಿ ನಾಗೇಶ ಸ್ವಾಮಿ ಅವರು ‘ಸಮರಸ ಕವನ ಸಂಕಲನ’ ಕೃತಿ ಬಿಡುಗಡೆ ಮಾಡಿ, ಕೃತಿ ಪರಿಚಯ ಮಾಡಿದರು. ಗೌರವ ಸಲಹೆಗಾರ ಕಲ್ಯಾಣರಾವ ಚಳಕಾಪೂರೆ ಪ್ರಾಸ್ತಾವಿಕ ಮಾತನಾಡಿ, ನಮ್ಮ ಶರಣ ಸಂಸ್ಕೃತಿ, ಪರಂಪರೆಯಲ್ಲಿ ಆದರ್ಶ ದಾಂಪತ್ಯ ಜೀವನಕ್ಕೆ ಮಹತ್ವ ನೀಡಲಾಗಿದೆ ಎಂದರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಮತ್ತು ‘ಸಮರಸ’ ಕೃತಿಯ ಲೇಖಕರಾದ ಸುನೀತಾ ದಾಡಗೆ ಅವರ 25ನೇ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ 25 ಆದರ್ಶ ದಂಪತಿಗಳಿಗೆ ಗೌರವಿಸಿದರು.
ಸುನೀತಾ ಡಾ. ಶ್ರೀಧರ ಗೌಡರ, ಕಂಟೆಪ್ಪಾ ದಾಡಗೆ, ಕಾಶಿಬಾಯಿ ಗೌಡರ ಮತ್ತು ವಚನ ಸಾಹಿತ್ಯ ಪರಿಷತ್ತಿನ ಪ್ರೊ. ಉಮಾಕಾಂತ ಮೀಸೆ, ಹೇಮಲತಾ ವೀರಶೆಟ್ಟೆ, ಚೇತನಾ ಪಾಟೀಲ, ಸುವರ್ಣ ಚಿಮಕೊಡೆ, ಡಾ. ರಘುನಾಥ ಖರಾಬೆ, ಅಶೋಕ ಬೂದಿಹಾಳ ಮತ್ತಿತರರು ಉಪಸ್ಥಿತರಿದ್ದರು.
ಶಿವಲಿಂಗ ಹೆಡೆ ಸ್ವಾಗತಿಸಿದರೆ, ದೀಪಕ ಠಮಕೆ ನಿರೂಪಿಸಿದರು. ಶ್ರೇಯಾ ಗೌಡರ ವಂದಿಸಿದರು. ಶರಣ ಶರಣೆಯರು ಉಪಸ್ಥಿತರಿದ್ದರು.

🙏🙏