ಸರಕಾರದ ವಿರುದ್ಧ ಗವಿಸಿದ್ದೇಶ್ವರ ಸ್ವಾಮೀಜಿ ಧ್ವನಿ ಎತ್ತಲಿ: ಕುಂ. ವೀರಭದ್ರಪ್ಪ

ಬಸವ ಮೀಡಿಯಾ
ಬಸವ ಮೀಡಿಯಾ

ಕಾರ್ಖಾನೆ ವಿರೋಧಿ ಹೋರಾಟಕ್ಕೆ ಕೊರಣೇಶ್ವರ ಸ್ವಾಮೀಜಿ   ಬೆಂಬಲ

ಕೊಪ್ಪಳ:

ಜನ ಯಾವುದೇ ಪಕ್ಷದ ಮುಖಂಡರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ, ಇಲ್ಲಿನ ಗವಿಶ್ರೀಗಳು ಮೊದಲು ಇಲ್ಲಿನ ಜನರ ಜೀವ ಉಳಿಸಲಿ, ಸರಕಾರದ ವಿರುದ್ಧ ಧ್ವನಿ ಎತ್ತಲಿ ಎಂದು ನಾಡಿನ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಹೇಳಿದ್ದಾರೆ.

175ನೇ ದಿನದ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಭಾಗವಹಿಸಿ ಬೆಂಬಲ ಸೂಚಿಸಿ ಮಾತನಾಡಿದ ಅವರು, ಈ ಹೋರಾಟ ಆರಂಭ ಮಾಡಿದ ಗವಿಶ್ರೀ ಅವರೇ ಈ ಹೋರಾಟಕ್ಕೆ ತಾರ್ಕಿಕ ಅಂತ್ಯವನ್ನು ಕಾಣಿಸಬೇಕು. ಆದರೆ ಅವರು ಯಾಕೆ ಹಿಂದಡಿ ಇಟ್ಟರು ಎನ್ನುವುದು ನಿಗೂಢವಾಗಿದೆ ಎಂದರು.

ಕಾರ್ಖಾನೆ ಬಾಧಿತ ಹಳ್ಳಿ ಪ್ರದೇಶ ಸುಟ್ಟ ಮಸಣವಾಗಿ ಕಪ್ಪಿಟ್ಟಂತೆ ಕಾಣುತ್ತಿದೆ. ಅಲ್ಲಿಗೆ ಹೋದ ವೈದ್ಯರು ಇಲ್ಲಿರಬೇಡಿ, ದನಕರು ಕಟ್ಟಬೇಡಿ ಎಂದು ಸಲಹೆ ನೀಡುತ್ತಾರೆ. ಮತ್ತೆ ಈ ಜನ ಎಲ್ಲಿಗೆ ಹೋಗಬೇಕು. ಸರಕಾರದ ಹತ್ತಿರ ಇದಕ್ಕೆ ಉತ್ತರ ಇದೆಯೇ, ‘ಗಂಗಾ ಸ್ನಾನ, ತುಂಗಾ ಪಾನ’ ಎನ್ನುವ ಗಾದೆ ಮಾತಿದ್ದರೂ, ತುಂಗಾ ಪಾನ ಮಾಡಬೇಡಿ ಎಂದು ಸರಕಾರ ಎಚ್ಚರಿಸುವ ಮಟ್ಟಿಗೆ ನೀರು ಮಾಲಿನ್ಯ ಮಾಡಿದ್ದು ಇದೇ ಫ್ಯಾಕ್ಟರಿಗಳಲ್ಲವೆ ಎಂದು ಅವರು ಕಿಡಿಕಾರಿದರು.

ಕಾರ್ಖಾನೆಗಳ ಮಾಲಿನ್ಯದಿಂದ ಮಕ್ಕಳಿಗೆ ರೋಗ ಬಂದು ಸತ್ತರೆ ನಮ್ಮ ಶವಗಳಿಗೆ ಸಂಸ್ಕಾರ ಮಾಡಲು ಯಾರಿರುತ್ತಾರೆ. ಇಲ್ಲಿಗೆ ಅಧಿಕಾರಿಗಳು, ರಾಜಕಾರಣಿಗಳು ಬರುತ್ತಾರೆ. ಅಯ್ಯೋ ಪಾಪ ಎನ್ನುತ್ತಾರೆ. ಮುಂದೆ ಹೋಗಿ ಮರೆತು ಬಿಡುತ್ತಾರೆ. ನಮ್ಮನ್ನು ಈ ಕಷ್ಟದಿಂದ ಪಾರು ಮಾಡುವವರು ಯಾರು ಎಂದು ಬಾಧಿತ ಗ್ರಾಮಗಳ ಮಹಿಳೆಯರು ನಮ್ಮನ್ನೇ ಕೇಳುತ್ತಾರೆ. ‘ತಾಯಿ ಎದೆಹಾಲು ನಂಜಾಗಿ ಕೊಲುವೆಡೆ ಮತ್ತಾರಿಗೇಳಲಿ’ ಎನ್ನುವ ಶರಣರ ವಚನ ಉಲ್ಲೇಖ ಮಾಡಿದ ವೀರಭದ್ರಪ್ಪ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಆಳಂದ ವಿರಕ್ತ ಮಠದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಈ ಹೋರಾಟ ಅತ್ಯಂತ ಸಾರ್ಥಕ, ಸಾತ್ವಿಕವಾಗಿದೆ. ಜೀವ, ಆರೋಗ್ಯ, ಭೂಮಿ, ಕೃಷಿ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟಕ್ಕೆ ಗದುಗಿನ ತೋಂಟದ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿಗಳು ಪ್ರೇರಣೆಯಾಗಿದ್ದಾರೆ. ಇಲ್ಲಿ ಜಾನುವಾರುಗಳು ನೀರಿಲ್ಲದೆ, ಬಸಾಪುರ ಕೆರೆಯನ್ನು ಬಲ್ಡೋಟ ನುಂಗಿದಾಗ ಗೋರಕ್ಷಕರು ಎಲ್ಲಿದ್ದರು, ಈಗಲಾದರೂ ಮುಂದೆ ಬರಬೇಕು, ಅವರಿಗೆ ಈಗ ಗೋವುಗಳು ನೆನಪಾಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗೆದ್ದು ತುಪ್ಪುವಾಗ ಬಾಯಿಯಿಂದ ಬರೀ ಕಪ್ಪು ಉಗುಳು ಬರುತ್ತದೆ. ಮೂಗಿನಿಂದಲೂ ಕಪ್ಪು ದ್ರವವೇ ಬರುತ್ತದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಸರಕಾರಗಳು ಬದಲಾದರೂ ಅವರ ಧೋರಣೆ ಬದಲಾಗಲಿಲ್ಲ. ಎಲ್ಲ ಪಕ್ಷಗಳ ಧೋರಣೆಗಳು ನಿಸರ್ಗ ನಾಶ ಮಾಡುವುದೇ ಆಗಿದೆ. ನಾನು ಈ ಹೋರಾಟಕ್ಕಾಗಿ ಹಲವು ಸ್ವಾಮಿಗಳೊಂದಿಗೆ ಇಲ್ಲಿಯೇ ಇದ್ದು ಹೋರಾಡಲು ಸಿದ್ದ, ಗವಿಶ್ರೀ ಮುಂದೆ ಬಂದು ನಿಲ್ಲುವ ಕಾಲ ಇದು ಎಂದರು.

ಧಾರವಾಡ ಪರಿಸರ, ಮಹಿಳಾಪರ ಬರಹಗಾರ್ತಿ ಶಾರದಾ ಗೋಪಾಲ ಮಾತನಾಡಿ, ಕಾರ್ಖಾನೆಗಳು ಹೊರಸೂಸುವ ಮಾಲಿನ್ಯದ ಪರಿಣಾಮದಿಂದ ಮೂರು ವರ್ಷದ ಮಗುವಿಗೆ ಪಾರ್ಶ್ವವಾಯು, ಹುಟ್ಟುವಾಗಲೇ ಹೃದಯದಲ್ಲಿ ರಂಧ್ರವಿರುತ್ತದೆ. ಏನಿದು ಆಶ್ಚರ್ಯ ಮಹಿಳೆಯರು ಗರ್ಭದರಿಸುತ್ತಿಲ್ಲ. ಅಂಗವಿಕಲ ಮಕ್ಕಳು, ವೈವಾಹಿಕ ಸಂಬಂಧಗಳಿಗೆ ಹಿನ್ನೆಡೆ, ಯಾರೂ ಸಂಬಂಧ ಬೆಳೆಸಲು ಮುಂದೆ ಬರುತ್ತಿಲ್ಲ ಎಂದು ನೋವು ವ್ಯಕ್ತಪಡಿಸಿದರು.

ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಕಲಬುರಗಿ ವಿವಿ ವಿಶ್ರಾಂತ ಉಪಕುಲಪತಿ ಡಾ. ಪ್ರತಾಪಸಿಂಗ್ ತಿವಾರಿ, ಗವಿಸಿದ್ದೇಶ್ವರ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಕಲಬುರಗಿ ನಿವಾಸಿ ಎಸ್.ಎಲ್. ಮಾಲಿಪಾಟೀಲ, ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ ಮಾತನಾಡಿದರು.

ಸಮಾವೇಶದಲ್ಲಿ ಡಾ. ಮಂಜುನಾಥ ಸಜ್ಜನ, ಜ್ಯೋತಿ ಎಂ. ಗೊಂಡಬಾಳ, ಸರೋಜಾ ಬಾಕಳೆ, ಮಾಲಾ ಬಡಿಗೇರ, ಸಾವಿತ್ರಿ ಮುಜುಮದಾರ, ವಿದ್ಯಾ ನಾಲ್ವಾಡ, ವಿಜಯ ದೊರೆರಾಜು, ಭೀಮಸೇನ ಕಲಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಂಜುನಾಥ ಕೆಂಚನಗೌಡ್ರ ಹಾಲವರ್ತಿ, ಗವಿಸಿದ್ದರೆಡ್ಡಿ, ಬಸವರಾಜ ಪೂಜಾರ ಕಾಸನಕಂಡಿ, ಮಹಾದೇವಪ್ಪ ಮಾವಿನಮಡು, ವಿಜಯಮಹಾಂತೇಶ ಹಟ್ಟಿ, ಸಿ.ಬಿ. ಪಾಟೀಲ, ಉಮೇಶ ಗಣಪಾ ಕುಣಿಕೇರಿ, ಮಂಜುನಾಥ ಪಾಟೀಲ, ಗವಿಸಿದ್ದಪ್ಪ ಹಲಗಿ, ಶರಣು ಶೆಟ್ಟ‌ರ್, ಡಿ.ಎಂ. ಬಡಿಗೇರ, ಶರಣು ಗಡ್ಡಿ, ಶರಣು ಪಾಟೀಲ, ಯಮನೂರಪ್ಪ ಹಾಲಳ್ಳಿ ಉಪಸ್ಥಿತರಿದ್ದರು.

ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ ಸಸಿಮಠ ಸ್ವಾಗತಿಸಿದರು. ಸೌಮ್ಯ ನಾಲ್ವಾಡ ವಂದಿಸಿದರು.

ಕೃಪೆ : ವಾರ್ತಾ ಭಾರತಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *