ಶಿರಹಟ್ಟಿ:
ಬಸವ ದಳ, ಬಸವ ಕೇಂದ್ರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘಗಳ ಸಂಯುಕ್ತಾಶ್ರಯದಲ್ಲಿ ಗೊಜನೂರು ಗ್ರಾಮದಲ್ಲಿ ವಚನ ಶ್ರಾವಣ ಕಾರ್ಯಕ್ರಮ ನಡೆಯಿತು.

ಚಿಂತನೆ ಆರಂಭಿಸಿದ ಅವರು, ಬಾಲಲೀಲಾ ಮಹಾಂತ ಶಿವಯೋಗಿಗಳ ಗುರುಕೃಪೆ ಹಾಗೂ ಅನುಗ್ರಹದ ಮಹತ್ವವನ್ನು ತಮ್ಮ ವೈಯಕ್ತಿಕ ಅನುಭವವನ್ನು ವಿವರಿಸುತ್ತಾ, 12ನೇ ಶತಮಾನಕ್ಕೂ ಮುನ್ನ ಪಾಂಡಿತ್ಯಪೂರ್ಣ ಸಾಹಿತ್ಯವಿದ್ದರೂ, ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹ ಅನುಭಾವ ಸಾಹಿತ್ಯದ ಕೊರತೆ ಇತ್ತು. ಆದರೆ ಶರಣರ ಅನುಭವ, ಚಿಂತನೆ ಹಾಗೂ ಬದುಕಿನ ಸತ್ಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳ ಮೂಲಕ ನೀಡಲಾಯಿತು. ಅನುಭವ ಮಂಟಪದಲ್ಲಿ ನಡೆದ ಚಿಂತನೆ ಮತ್ತು ಅನುಭಾವದ ಫಲವಾಗಿ ಹೊರಹೊಮ್ಮಿದವುಗಳೇ ವಚನಗಳು ಎಂದು ಅವರು ತಿಳಿಸಿದರು.
“ಕೆಟ್ಟಿತ್ತು ಕಲ್ಯಾಣವಲ್ಲ; ಕಟ್ಟಿತ್ತು ಕಲ್ಯಾಣ”ಎಂಬ ಮಾತಿನ ಅರ್ಥವನ್ನು ಮನೋಜ್ಞವಾಗಿ ವಿವರಿಸಿದ ಚಿಂತಕರು, ರಾಜಪ್ರಭುತ್ವದ ಕಾಲದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತಿದ ಬಸವಣ್ಣನವರು ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಿ, ಅವರಿಗೆ ಗೌರವಯುತ ಬದುಕಿನ ಅವಕಾಶ ಕಲ್ಪಿಸಿದ ಬಸವಣ್ಣನವರ ಕರುಣೆ ಮತ್ತು ಸಾಮಾಜಿಕ ಕಳಕಳಿಯನ್ನು ವಿವರಿಸಿದರು.

ಇಂದಿನ ವಚನವನ್ನು ಅರ್ಥೈಸುತ್ತಾ, ರೈತರು ಉತ್ಪಾದಿಸಿದ ವಸ್ತುಗಳನ್ನು ಖರೀದಿಸುವಾಗ ಯಾರೂ ಬೆಳೆದ ರೈತನ ಜಾತಿಯನ್ನು ಕೇಳುವುದಿಲ್ಲ; ಆದರೆ ಅದೇ ಜನರು ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ಸಂದರ್ಭದಲ್ಲಿ ಜಾತಿಯನ್ನು ವಿಚಾರಿಸುವುದು ಸಮಾಜದಲ್ಲಿರುವ ದ್ವಂದ್ವ ಮನೋಭಾವಕ್ಕೆ ಉದಾಹರಣೆಯಾಗಿದೆ ಎಂದು ವಿಶ್ಲೇಷಿಸಿದರು.
ಈ ಹಿನ್ನೆಲೆಯಲ್ಲಿ ಹೊರಬಂದ ಪ್ರಸಾದ ಮತ್ತು ದಾಸೋಹದ ಮಹತ್ವವನ್ನು ವಿವರಿಸಿದ ಅವರು, ಇಷ್ಟಲಿಂಗ ಕಟ್ಟಿಕೊಂಡವರಲ್ಲಿ ಜಾತಿಗೆ ಸ್ಥಾನವಿಲ್ಲ; ಅಲ್ಲಿ ಸಮಾನತೆಯೇ ಪ್ರಧಾನ ಎಂಬ ಶರಣರ ಆಶಯವನ್ನು ಪ್ರತಿಪಾದಿಸಿದರು.
“ನಡೆದಂತೆ ನುಡಿದವರು ಶರಣರು”ಎಂಬ ಶರಣರ ಬದುಕಿನ ಸಂದೇಶವನ್ನು ಉಲ್ಲೇಖಿಸಿದ ಅವರು, ಯಾರ ಮನಸ್ಸನ್ನೂ ನೋಯಿಸದವನೇ ಪರಮ ಪಾವನ ಎಂಬ ವಿಚಾರವನ್ನು ತಿಳಿಸಿದರು. ವೈವಾಹಿಕ ಸಂಬಂಧಗಳಲ್ಲಿ ಜಾತಿಯನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿದರು. ಮೂಲ ಕಸುಬುಗಳು ಕಾಲಕ್ರಮೇಣ ಹೇಗೆ ಜಾತಿಗಳಾಗಿ ಪರಿವರ್ತನೆಯಾದವು ಎಂಬುದನ್ನು ಶರಣರ ವಚನಗಳ ಮೂಲಕ ಮಾರ್ಮಿಕವಾಗಿ ವಿಶ್ಲೇಷಿಸಿದರು.
ಒಳಗೊಂದು ಭಾವ, ಹೊರಗೊಂದು ಭಾವ ಇಟ್ಟುಕೊಂಡು ಡಾಂಬಿಕ ಜೀವನ ನಡೆಸಬಾರದು; ಅಂತರಂಗ ಮತ್ತು ಬಹಿರಂಗ ಎರಡೂ ಶುದ್ಧವಾಗಿರಬೇಕು ಎಂಬುದೇ ಶರಣರ ಪ್ರಮುಖ ಆಶಯವಾಗಿತ್ತು ಎಂದು ಅವರು ಹೇಳಿದರು.
ಶರಣರ ಮಾರ್ಗದಲ್ಲಿ ಯಾವುದೇ ರೀತಿಯ ಪಂಚಸೂತಕಗಳಿಗೆ ಅವಕಾಶವಿಲ್ಲ. ಬಸವಣ್ಣನವರು ತಾವು ಸಮಾಜದ ತಳಮಟ್ಟದಲ್ಲಿರುವರೊಂದಿಗೆ ಹೋಲಿಸಿಕೊಂಡು ಅವರೊಂದಿಗೆ ಒಂದಾಗಿ ನಿಂತು, ಶೋಷಿತರಿಗೆ ಮತ್ತು ದುರ್ಬಲರಿಗೆ ಗೌರವಯುತವಾಗಿ ಕಂಡುದುದರ ಬಗ್ಗೆ ವಿವರಿಸಿದರು.

ಇಂದಿನ ಮಕ್ಕಳಲ್ಲಿ ಶರಣರ ವಿಚಾರವನ್ನು ಬಿತ್ತಿ ಉತ್ತಮ ಸಂಸ್ಕಾರ ನೀಡುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಕುಟುಂಬದಲ್ಲಿ ಸಂಸ್ಕಾರದ ಕೊರತೆಯೇ ವೃದ್ಧಾಶ್ರಮಗಳ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. “ನಾವು ಹೇಗೆ ಬದುಕುತ್ತೇವೋ, ಅದೇ ನಮಗೆ ಮರಳಿ ಬರುತ್ತದೆ”ಎಂಬುದನ್ನು ವಿವಿಧ ದೃಷ್ಟಾಂತಗಳ ಮೂಲಕ ವಿವರಿಸಿದರು.
ಮಠದೊಳಗಿನ ಬೆಕ್ಕು ಪುಟಿದು ಇಲಿಯನ್ನು ತಿನ್ನುವ ಉದಾಹರಣೆಯ ಮೂಲಕ ಕೇವಲ ಬಹಿರಂಗ ಶುದ್ಧತೆ ಸಾಲದು; ಅಂತರಂಗದ ಶುದ್ಧತೆಯೂ ಅಷ್ಟೇ ಮುಖ್ಯ ಎಂಬುದನ್ನು ಮನದಟ್ಟು ಮಾಡಿದರು.
ದುರಾಸೆ ಬೇಡ ಎಂದು ಶರಣರು ಬೋಧಿಸಿದರೂ, ಇಂದಿನ ಬದುಕಿನಲ್ಲಿ ಪ್ರತಿಯೊಂದು ವಿಷಯಕ್ಕೂ ಜನರು “ಇದು ಬೇಕು, ಅದು ಬೇಕು”ಎಂಬ ಮನೋಭಾವ ಹೆಚ್ಚುತ್ತಿರುವುದು ವಿಷಾದನೀಯ ಎಂದು ಹೇಳಿದರು. ಸರಳತೆ, ಸತ್ಯ, ಸಮಾನತೆ, ದಾಸೋಹ, ಕಾಯಕ ಮತ್ತು ಅಂತರಂಗ ಶುದ್ಧತೆಯೇ ಶರಣರ ಬದುಕಿನ ಮೂಲ ಮೌಲ್ಯಗಳಾಗಿವೆ ಎಂದು ತಿಳಿಸಿದರು. ವಿವಿಧ ಶರಣರ ವಚನಗಳನ್ನು ಉಲ್ಲೇಖಿಸುತ್ತಾ, ಪ್ರತಿಯೊಬ್ಬರೂ ತಮ್ಮ ಅಂತರಂಗವನ್ನು ಶುದ್ಧವಾಗಿಟ್ಟುಕೊಂಡು ಬದುಕಬೇಕು ಎಂಬ ಅರಿವನ್ನು ಮೂಡಿಸಿದರು.
ಕಾರ್ಯಕ್ರಮದಲ್ಲಿ ಗದಗದ ಪ್ರೊ. ಎಸ್.ಯು. ಸಜ್ಜನಶೆಟ್ರು ಅವರು ವಿಶ್ವಗುರು ಬಸವಣ್ಣನವರ “ಉಂಬಲ್ಲಿ ಉಡುವಲ್ಲಿ ಕ್ರಿಯಾಳಿತ್ತೆಂಬರು, ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು, ಎಂತಯ್ಯ ಅವರ ಭಕ್ತರೆಂಬೆ? ಎಂತಯ್ಯ ಅವರ ಯುಕ್ತರಂಬೆ? ಕೂಡಲಸಂಗಮದೇವ ಕೇಳಯ್ಯ, ಹೊಲತಿ ಶುದ್ಧನೀರ ಮಿಂದಂತಾಯಿತ್ತಯ್ಯ”ಎಂಬ ವಚನದ ಕುರಿತು ಅರ್ಥಪೂರ್ಣ ವಚನ ಚಿಂತನೆಯನ್ನು ನಡೆಸಿದರು.
ಕಾರ್ಯಕ್ರಮದ ಪ್ರಸ್ತಾವನೆಯನ್ನು ಪ್ರಕಾಶ ಅಸುಂಡಿ ಅವರು ಮಂಡಿಸಿದರು. ದಾಸೋಹವನ್ನು ವಕೀಲರಾದ ಬಸವರಾಜ ಸಂಶಿ ಅವರು ಸಮರ್ಪಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಗ್ರಾಮದ ಚಿಕ್ಕಮಕ್ಕಳು ಶರಣರ ವೇಷಭೂಷಣದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಮಕ್ಕಳ ಈ ವಿಶೇಷ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.
ಒಟ್ಟಾರೆ, ಗೊಜನೂರಿನಲ್ಲಿ ನಡೆದ ಇಂದಿನ ವಚನ ಶ್ರಾವಣ ಕಾರ್ಯಕ್ರಮವು ಬಸವಣ್ಣನವರ ವಚನಗಳ ಮೂಲಕ ಸಮಾನತೆ, ಕಾಯಕ, ದಾಸೋಹ, ಸಂಸ್ಕಾರ, ಅಂತರಂಗ ಶುದ್ಧತೆ ಹಾಗೂ ಧಾಂಭಿಕತೆಯಿಂದ ಮುಕ್ತವಾದ ಸರಳ ಬದುಕಿನ ಸಂದೇಶವನ್ನು ಸಮಾಜಕ್ಕೆ ಸಾರಿದ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದಿತು.
