ನಾನು ಲಿಂಗಾಯತ ಎಂದು ಹೇಳುವ ಸ್ವಾಭಿಮಾನವಿರಲಿ: ಪಾಂಡೋಮಟ್ಟಿ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಸೆ. 30 ದಾವಣಗೆರೆ ‘ವಚನ ನಾದ ಲೋಕ’ದಲ್ಲಿ ಪಾಲ್ಗೊಳ್ಳಲು ಕರೆ

ಚನ್ನಗಿರಿ:

ಇಷ್ಟಲಿಂಗ ಧರಿಸಿ ಬಸವತತ್ವಗಳನ್ನು ಅನುಸರಿಸಿದಾಗ ನಮಗೆ ನಿಜವಾದ ಗೌರವ ದೊರೆಯುತ್ತದೆ. ನಾನು ಲಿಂಗಾಯತ ಎಂದು ಹೇಳಲು ಸ್ವಾಭಿಮಾನ ಮುಖ್ಯವಾಗಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ಬಡಾವಣೆಯ ಪ್ರಭು ಅವರ ಮನೆಯಂಗಳದಲ್ಲಿ ಶುಕ್ರವಾರ ಸಂಜೆ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಏರ್ಪಡಿಸಿದ್ದ ೪ನೇ ವರ್ಷದ ಶ್ರಾವಣ ಬಂತು-ಅನುಭಾವ ತಂತು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣನವರು ಅಂದಿನ ದಿನಮಾನದಲ್ಲಿಯೇ ಅಂತರ್ಜಾತಿ ವಿವಾಹಕ್ಕೆ ನಾಂದಿಯಾಡಿದ್ದಾರೆ. ಸಮಾಜದಲ್ಲಿ ಸಮಾನತೆಯ ತತ್ವ ಸಾರಿದ್ದಾರೆ. ಬಸವಣ್ಣನವರು ಅಪಮಾನ, ಆರೋಪ ಎದುರಿಸಿ ಸಾಗಿದ್ದಾರೆ.

ವಿಚಾರಗಳನ್ನು ಆಸ್ವಾದಿಸುವ, ಗ್ರಹಿಸುವ, ಅನುಸರಿಸುವ ಗುಣ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ಅಂದಿನ ಅನುಭವ ಮಂಟಪದಲ್ಲಿ ಸಾಹಿತ್ಯ ಭಂಡಾರಕ್ಕೆ ಒತ್ತು ನೀಡಲಾಗಿತ್ತು. ಆದರೆ ಜಾತಿ-ಮತ, ಪಂಥಗಳಿಗೆ ಅವಕಾಶ ಇದ್ದಿಲ್ಲ. ಆದ್ದರಿಂದಲೇ ಅಂದಿನಿಂದ ಇಂದಿನವರೆಗೂ ಶರಣರ ತತ್ವ, ವಿಚಾರ, ವಚನಗಳು ಇಂದಿಗೂ ಸತ್ಯಸಾರವಾಗಿವೆ.

ಮುಂದಿನ ವರ್ಷದ ಕಾರ್ಯಕ್ರಮಗಳು ಸರಳವಾಗಿ, ಅರ್ಥಪೂರ್ಣವಾಗಿ, ಹೆಚ್ಚಿನ ಖರ್ಚು ಇಲ್ಲದೇ ಆಯೋಜಿಸಿ, ತಾಲೂಕಿನ ಕಟ್ಟಕಡೆಯ ವ್ಯಕ್ತಿಗೂ ಬಸವತತ್ವ ತಲುಪಿಸುವ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಇದೇ ಸೆಪ್ಟಂಬರ್ ೩೦ರಂದು ೫ ಸಾವಿರ ಗಾಯಕರಿಂದ ಏಕಕಾಲದಲ್ಲಿ ‘ವಚನ ನಾದ ಲೋಕ’ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸ್ವಾಮೀಜಿ ಹೇಳಿದರು.

ಶಿಕ್ಷಕ ಎಂ.ಬಿ. ನಾಗರಾಜ ಕಾಕನೂರು ಮಾತನಾಡಿ, ಶರಣಗಣ, ಪ್ರಮಥಗಣ ಹಾಗೂ ಅಮರಗಣಗಳನ್ನು ಸೇರಿಸಿ ಅನುಭವ ಮಂಟಪದಲ್ಲಿ ಧರ್ಮವನ್ನು ಜಾರಿಗೆ ತಂದಿದ್ದಾರೆ.

ಮೃತ್ಯುಲೋಕ ಮತ್ತು ಭೂಲೋಕಕ್ಕೆ ಭಕ್ತಿಯ ಮೂಲಕ ಸಂಪರ್ಕವನ್ನು ಕಲ್ಪಿಸಿದವರು ಬಸವಣ್ಣ. ಕಾಯಕ ಮತ್ತು ದಾಸೋಹ ತತ್ವ ಅನುಸರಿಸಿದ್ದಾರೆ.

ಬಸವಣ್ಣರವರು ತಾನು ಹುಟ್ಟಿದ ಜಾತಿ ಹಾಗೂ ಧರ್ಮದ ಕಟ್ಟೆಯನ್ನು ಹೊಡೆದು, ಬಿದ್ದವರನ್ನು ಅಪ್ಪಿಕೊಂಡ, ಒಪ್ಪಿಕೊಂಡ, ನೊಂದವರಿಗೆ ದ್ವನಿಯಾದ, ಸರ್ವರಿಗೂ ಲೇಸನ್ನು ಬಯಸಿದಕ್ಕೆ ಇಂದು ಅವರನ್ನ ವಿಶ್ವ ಸಾಂಸ್ಕೃತಿಕ ನಾಯಕ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ, ಹಾಸ್ಯ ಕಲಾವಿದ ಜಗನ್ನಾಥ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ, ವಕೀಲ ರಾಜಪ್ಪ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಜು, ಕದಳಿ ವೇದಿಕೆ ಅಧ್ಯಕ್ಷೆ ಪ್ರೇಮ, ಕುಬೇಂದ್ರಪ್ಪ, ಕುಮಾರಪ್ಪ, ಚನ್ನಬಸಪ್ಪ, ಶಿವಮೂರ್ತಪ್ಪ, ಚಂದ್ರಪ್ಪ, ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ.ಜೈ ಬಸವ.

Leave a Reply

Your email address will not be published. Required fields are marked *