ವಚನಾಮೃತ ಕನ್ನಡ ಸಂಘದ ಕಾರ್ಯಕ್ರಮ
ಬೀದರ:
ಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ವಚನಗಳಲ್ಲಿ ಸುಂದರ ಬದುಕಿನ ದಾರಿ ಅಡಕವಾಗಿದೆ ಎಂದು ಚಿಂತಕ ಲೋಕೇಶ ಉಡಬಾಳೆ ಹೇಳಿದರು.
ವಚನಾಮೃತ ಕನ್ನಡ ಸಂಘದ ವತಿಯಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ಶ್ರೀ ಕೃಷ್ಣದರ್ಶಿನಿ ಹೋಟೆಲ್‍ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಆಯ್ದಕ್ಕಿ ಲಕ್ಕಮ್ಮ ಹಾಗೂ ಬಾಚಿ ಕಾಯಕದ ಬಸವಯ್ಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಲಕ್ಕಮ್ಮ ಅವರು 25 ವಚನಗಳನ್ನು ಬರೆದಿದ್ದಾರೆ. ಮಾರಯ್ಯಪ್ರಿಯ ಅಮರೇಶ್ವರಲಿಂಗ ಅವರ ಅಂಕಿತ ನಾಮವಾಗಿದೆ ಎಂದು ತಿಳಿಸಿದರು.
ಲಕ್ಕಮ್ಮನವರಂತೆ ನಿಷ್ಠೆ ಹಾಗೂ ಭಕ್ತಿಯಿಂದ ಕಾಯಕ ಮಾಡಿದರೆ ಸಂಪತ್ತು ನಮಗೆ ಗೊತ್ತಾಗದಂತೆ ನಮ್ಮ ಮನೆ ಬಾಗಿಲಲ್ಲಿ ಬಂದು ಬೀಳುತ್ತದೆ ಎಂದು ಹೇಳಿದರು.
ಅಕ್ಕಿಯಲ್ಲಿನ ಹರಳುಗಳನ್ನು ಆಯ್ದು ಹಸನು ಮಾಡಿದಂತೆ ಮನುಷ್ಯನ ಆಲೋಚನೆಗಳಲ್ಲಿನ ಕೆಡಕುಗಳನ್ನು ಆಯ್ದು ಮನಸ್ಸು ಪರಿಶುದ್ಧಗೊಳಿಸಿದ್ದಲ್ಲಿ ಮನುಷ್ಯ ಮಹಾನ್ ವ್ಯಕ್ತಿಯಾಗುತ್ತಾನೆ ಎಂದು ತಿಳಿಸಿದರು.
ಬಸವಕಲ್ಯಾಣ ಹತ್ತಿರದ ರಾಜೇಶ್ವರದಲ್ಲಿ ಜನಿಸಿದ ಬಸವಯ್ಯ ಅವರು ಬಡಿಗ ವೃತ್ತಿ ಮಾಡುತ್ತಲೇ ಅಧ್ಯಾತ್ಮದ ಶಿಖರಕ್ಕೆ ಏರಿದರು ಎಂದು ಬಸವಯ್ಯ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಸುನೀತಾ ದಾಡಗೆ ಹೇಳಿದರು.
ಬಸವಯ್ಯ ಅವರು 30 ವಚನಗಳನ್ನು ರಚಿಸಿದ್ದು, ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ ಅವರ ವಚನಾಂಕಿತವಾಗಿದೆ ಎಂದು ತಿಳಿಸಿದರು.
ಅತಿ ಆಸೆಯೇ ಮನುಷ್ಯನ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಬಸವಯ್ಯ ಅವರ ವಚನ ಉಲ್ಲೇಖಿಸಿ ಹೇಳಿದರು.
ವಚನಾಮೃತ ಕನ್ನಡ ಸಂಘವು ಸುಸಂಸ್ಕೃತ ಸಮಾಜ ಕಟ್ಟಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಕ್ಕಳಿಗೆ ಶರಣರ ಜೀವನ ಪರಿಚಯಿಸಲು ಬರುವ ದಿನಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ವಿಚಾರ ಸಂಕಿರಣ ಆಯೋಜಿಸಲಿದೆ ಎಂದು ಅಧ್ಯಕ್ಷತೆ ವಹಿಸಿದ್ದ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ತಿಳಿಸಿದರು.

ತಾಲ್ಲೂಕುಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪದ್ಮರಾಜ ಅಜಿತಮಣಿ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೂರ್ಯಕಾಂತ ವಲ್ಲೇಪುರೆ ಉದ್ಘಾಟಿಸಿದರು. ಚಿತ್ರಕಲಾ ಶಿಕ್ಷಕ ಚಂದ್ರಶೇಖರ ತೂಗಾ, ಶೋಭಾರಾಣಿ ತೂಗಾ ಮುಖ್ಯ ಅತಿಥಿಯಾಗಿದ್ದರು.
ಸುಗಂಧಾ ಕಮಠಾಣೆ ಹಾಗೂ ಶಿಲ್ಪಾ ಮಜಗೆ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಅಕ್ಕಮಹಾದೇವಿ ಖಳ್ಳಾಳೆ ಸ್ವಾಗತಿಸಿದರು. ಸ್ವರೂಪರಾಣಿ ನಾಗೂರೆ ನಿರೂಪಿಸಿದರು. ಬಸವರಾಜ ಬಿರಾದಾರ ವಂದಿಸಿದರು.
