ಲಿಂಗಾಯತ ಧರ್ಮ ಮಾನ್ಯತೆಗೇಕೆ ವಿರೋಧ? : ಶರಣಬಸವ ದೇವರು

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ:

ಭಾರತದಲ್ಲಿ ಧರ್ಮ ಮಾನ್ಯತೆ ಪಡೆದ ಅನೇಕ ಧರ್ಮಗಳಿವೆ. ಇಸ್ಲಾಂ, ಕ್ರೈಸ್ತ, ಪಾರ್ಸಿ, ಬೌದ್ಧ, ಸಿಖ್, ಜೈನ ಧರ್ಮಗಳಿವೆ. ಸಿಖ್ ಮತ್ತು ಜೈನ ಧರ್ಮಗಳಿಗೆ ಸ್ವಾತಂತ್ರ್ಯ ನಂತರ ಮಾನ್ಯತೆ ಸಿಕ್ಕಿದೆ. ಅದರಲ್ಲೂ ಜೈನ ಧರ್ಮಕ್ಕೆ ಕೆಲವೇ ವರ್ಷಗಳ ಹಿಂದಷ್ಟೇ ಧರ್ಮಮಾನ್ಯತೆ ನೀಡಲಾಯಿತು.

ಜೈನ ಧರ್ಮಕ್ಕೆ 2014ರಲ್ಲಿ ಮಾನ್ಯತೆ ನೀಡಿದಾಗ, ಬಾಯಿ ಮುಚ್ಚಿಕೊಂಡಿದ್ದವರು ಲಿಂಗಾಯತ ಧರ್ಮ ಮಾನ್ಯತೆಗಾಗಿ ನಡೆದ ಹೋರಾಟದ ನಂತರ ಹಲವರು ಹುಯಿಲೆಬ್ಬಿಸಿ ವಿರೋಧಿಸುತ್ತಿದ್ದಾರೆ.

ಜೈನ, ಸಿಖ್ ಧರ್ಮಗಳಿಗೆ ಇಲ್ಲದ ನಿಮ್ಮ ವಿರೋಧ ನಮ್ಮ ಲಿಂಗಾಯತ ಧರ್ಮ ಮಾನ್ಯತೆಗೇಕೆ? ಎಂದು  ಬಸವಬೆಳವಿಯ ಚರಂತೇಶ್ವರ ಮಠದ ಪೂಜ್ಯ ಶರಣಬಸವ ಸ್ವಾಮೀಜಿ ಪ್ರಶ್ನಿಸಿದರು.

ಬಸವದಳದ ಬಸವ ಮಂಟಪದಲ್ಲಿ ನಡೆದ ೧೭೦೯ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಶರಣ ಹಡಪದ ಅಪ್ಪಣ್ಣ, ಲಿಂಗಮ್ಮ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ೧೨ನೇ ಶತಮಾನದಲ್ಲಿ ಬಸವಣ್ಣನವರ ನಾಯಕತ್ವದಲ್ಲಿ ಶರಣರು ವೈದಿಕರಿಂದ ಶೋಷಿತ ಸರ್ವ ಜಾತಿ, ಪಂಗಡಗಳ ಜನರನ್ನು ಅನುಭವ ಮಂಟಪಕ್ಕೆ ಕರೆ ತಂದು ಅವರಲ್ಲಿ ಸಂಸ್ಕಾರ ತುಂಬಿ ಶರಣರನ್ನಾಗಿಸಿದರು.

ಅಲ್ಲಿ ಚರ್ಚೆ, ಚಿಂತನ, ಮಂಥನದಿಂದ ಹುಟ್ಟಿದ ಧರ್ಮವೇ ಲಿಂಗಾಯತ.

ಅಂದು ತಳ ಜಾತಿಯವರು ಗುಡಿಯೊಳಗೆ ಪ್ರವೇಶಿಸುವ ಹಾಗಿರಲಿಲ್ಲ. ಶರಣರು ಅಂಥ ದೇವರ ಗೊಡವೆ ಬೇಡವೆಂದು ಇಷ್ಟಲಿಂಗ ನೀಡಿ ದೇವರು ನಿಮ್ಮಲ್ಲಿಯೇ ಇದ್ದಾನೆ ಅದನ್ನೇ ಪೂಜಿಸಿರೆಂದು ಹೇಳಿದ ಧರ್ಮ ಇದಾಗಿದೆ. ಎಲ್ಲರೂ ಸಮಾನರೆನ್ನುವ ಈ ಧರ್ಮಕ್ಕೆ ವಿರೋಧವೇಕೆ? ಎಂದರು.

ಅದರಲ್ಲೂ ಇತ್ತೀಚಿಗೆ ‘ಬಸವ ಸಂಸ್ಕೃತಿ ಅಭಿಯಾನ’ದ ಯಶಸ್ಸಿನ ನಂತರ ಲಿಂಗಾಯತ ಧರ್ಮದ ಬಗ್ಗೆ, ಬಸವಾದಿ ಶರಣರ ಅನುಯಾಯಿಗಳ ವಿರುದ್ಧ ಬಸವ ವಿರೋಧಿಗಳಿಂದ ವಿಪರೀತ ಅಪಪ್ರಚಾರ ನಡೆಯುತ್ತಿದೆ. ಶತಾಯಗತಾಯ ಈ ಧರ್ಮಾನುಯಾಯಿಗಳನ್ನು ಬಾಯಿ ಮುಚ್ಚಿಸಲು ಯತ್ನಿಸಲಾಗುತ್ತಿದೆ. ಇತ್ತೀಚಿಗೆ ಹಲವರು ನಡೆಸಿದ ಅಪಪ್ರಚಾರಗಳನ್ನು ಉದಾಹರಣೆಯಾಗಿ ನೀಡಿದರು.

ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಲಿಂಗಾಯತ ಧರ್ಮ, ಶರಣರ ವಿರುದ್ದ ಸುಳ್ಳು ಪ್ರಚಾರ ಮಾಡಲಾಗುತ್ತಿದೆ.

ಶರಣರ ವಚನಗಳು ಲಿಂಗಾಯತರಿಗೆ ಅತ್ಯಂತ ಪವಿತ್ರ. ಬಸವಾದಿ ಶರಣರು ಏಕದೇವೋಪಾಸನೆ ಹೇಳಿದ್ದಾರೆ.

ಗುಡಿ-ಗುಂಡಾರಗಳ ಮೂರ್ತಿ, ಸ್ಥಾವರ ದೇವರಗಳನ್ನು ಶರಣರು ಧಿಕ್ಕರಿಸಿದರು, ವೇದಾಗಮಗಳನ್ನು ಅಲ್ಲಗಳೆದರು. ಅಂಥ ಶರಣರ ವಚನಗಳನ್ನು ತಿರುಚಿ, ಶರಣರು ಏಕದೇವೋಪಾಸಕರಲ್ಲ, ಮೂರ್ತಿ ಪೂಜೆಯನ್ನು ಮಾಡುತ್ತಿದ್ದರು. ವೇದಾಗಮ ವಿರೋಧಿಗಳಲ್ಲವೆಂದು ಹೇಳುತ್ತಿರುವುದು ಖಂಡನೀಯವೆಂದರು.

ಶರಣರೆಂದಿಗೂ ಸನಾತನತೆ ಒಪ್ಪಿಯೇ ಇಲ್ಲ. ಇತ್ತೀಚಿಗೆ ಒಬ್ಬ ಸ್ವಾಮಿ ಶರಣ ಸಿದ್ಧರಾಮೇಶ್ವರರು ಹಲವಾರು ಸ್ಥಾವರ ದೇವರ ಗುಡಿಗಳನ್ನು ಸ್ಥಾಪಿಸಿದರೆಂದು ಹೇಳುತ್ತ ನಡೆದಿದ್ದಾರೆ. ಶರಣರೆಂದೂ ಎಡಬಿಡಂಗಿಗಳಲ್ಲ, ನುಡಿ ನಡೆ ಒಂದಾದ ಬದುಕು ಅವರದು. ಜೊತೆಗೆ ಕೈ ಬಗ್ಗೆ ಜನ ಜಾಗೃತರಾಗಿದ್ದಾರೆ.

ಬಸವತತ್ವ ಓದುವವರ, ಅರಿತವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದರಲ್ಲೂ ಬಸವಪರ ಸಂಘಟನೆಗಳು ಬಸವತತ್ವವನ್ನು ಜನರ ಬಳಿಗೊಯ್ಯುತ್ತಿವೆ. ವಿರೋಧಿಗಳು ಅಪಪ್ರಚಾರ ನಡೆಸಿದಷ್ಟು ಜನ ಬಸವಾದಿ ಶರಣರ ಬಗ್ಗೆ ಅರಿಯುತ್ತಿದ್ದಾರೆಂದರು.

ಧರ್ಮದ ಹೆಸರಿನಲ್ಲಿ ಇಷ್ಟು ಕಾಲ ಲೂಟಿ ಹೊಡೆದವರು ಈಗ ದಿಗಿಲುಗೊಂಡಿದ್ದಾರೆಂದರು.  ಅಂದು ಯಾರು ಮುಂಜಾನೆದ್ದು ಸಮಾಜದವರ ಮುಖ ನೋಡಬಾರದೆಂದು ಮೂಢನಂಬಿಕೆ ತುಂಬಿತ್ತೋ, ಅಂತಹ ಸಮಾಜದ ಹಡಪದ ಅಪ್ಪಣ್ಣನವರನ್ನೇ ಬಸವಣ್ಣನವರು ಆಪ್ತ ಕಾರ್ಯದರ್ಶಿಗಳನ್ನಾಗಿಸಿಕೊಂಡಿದ್ದರು. ಈ ಮೂಲಕ ಸನಾತನರಿಗೆ ಸವಾಲು ಎಸೆದಿದ್ದರು. ಅಪ್ಪಣ್ಣ, ಲಿಂಗಮ್ಮ ತಾಯಿಯವರ ಬದುಕು ಆದರ್ಶವೆಂದರು.

ಗದುಗಿನ ಬಸವದಳ ಶರಣತತ್ವ ಪ್ರಸಾರದಲ್ಲಿ ಮುಂಚೂಣಿಯಲ್ಲಿದ್ದು ಈ ಕಾರ್ಯ ಸ್ತುತ್ಯಾರ್ಹವೆಂದರು.

ನಂತರ ಸಂತಕಡೂರು ಬಸವ ನವಲಿಂಗ ಶರಣರು ಮಾತನಾಡುತ್ತಾ, ಶರಣ ಧರ್ಮ ವಿಶಿಷ್ಟವಾದುದು. ಬಸವಾದಿ ಶರಣರು ತಮ್ಮನ್ನು ಅವಲೋಕನ ಮಾಡಿಕೊಂಡಷ್ಟು ಮತ್ತಾರು ಮಾಡಿಕೊಂಡಿಲ್ಲ. ಲಿಂಗಾಯತರ ಧರ್ಮಗುರು ಬಸವಣ್ಣನವರಾಗಿದ್ದರೆ, ನಮ್ಮ ಧರ್ಮ ಕರ್ತೃ ಚೆನ್ನಬಸವಣ್ಣ ಆಗಿದ್ದಾರೆ. ಜೊತೆಗೆ ನಾವು ಅಕ್ಕನಾಗಮ್ಮ ತಾಯಿಯವರನ್ನು ನೆನೆಯಬೇಕಾಗಿದೆ ಎಂದರು.

ಅಲ್ಲದೇ ತಾವೇ ಬರೆದ ಗ್ರಂಥಗಳನ್ನು ಬಸವದಳ ಶರಣರಿಗೆ ನೀಡಿದರು. ಇದೇ ಸಂದರ್ಭದಲ್ಲಿ ವೆಂಕಟಾಪೂರ ಶರಣರು ಸಹ ಮಾತನಾಡಿದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ರಾಮಣ್ಣ ಕಳ್ಳಿಮನಿ ಅವರು ಮಾತನಾಡುತ್ತಾ, ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರ ಕಾರ್ಯ ಅನುಪಮವಾದುದು. ೧೧೬೦ರಲ್ಲಿದ್ದ ಈ ಶರಣರ ಊರು ತಂಗಡಗಿಯಾಗಿದೆ. ‘ನಿಜಸುಖಿ ಅಪ್ಪಣ್ಣ’ ಎಂದೇ ಇವರನ್ನು ಇತರ ಶರಣರು ಸಂಬೋಧಿಸುತ್ತಿದ್ದರು.

‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಇವರ ಅಂಕಿತನಾಮವಾಗಿದೆ. ಇವರ ಪತ್ನಿ ಲಿಂಗಮ್ಮ ತಾಯಿಯವರು ಪತಿಗೆ ತಕ್ಕ ಸಹಧರ್ಮಿಣಿಯಾಗಿದ್ದರು.

ಇಬ್ಬರಿಂದಲೂ ವಚನಗಳು ರಚನೆಯಾಗಿವೆ. ಲಿಂಗಮ್ಮ ತಾಯಿಯವರ ೧೧೪ ವಚನಗಳು ಲಭ್ಯವಿವೆ. ಲಿಂಗಮ್ಮರ ವಚನಾಂಕಿತ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ಎಂದಾಗಿದೆ. ನಂತರ ಇರ್ವರ ವಚನಗಳನ್ನು ಅವರು ನಿರ್ವಚನಗೈದರು.

ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಅಧ್ಯಕ್ಷೀಯ ನುಡಿಗಳನ್ನಾಡಿದರು.  ಪ್ರಾರಂಭದಲ್ಲಿ ನಾಗರತ್ನಾ ಅಸುಂಡಿ ಹಾಗೂ ಜಯಶ್ರೀ ಪಿ. ಹಳ್ಳಿಕೇರಿ ಅವರಿಂದ ವಚನ ಪ್ರಾರ್ಥನೆ ಜರುಗಿತು.

ಹಡಪದ ಅಪ್ಪಣ್ಣ ಸಮಾಜದ ಹಿರಿಯರು, ಬಾಂಧವರು ಭಾಗಿಗಳಾಗಿದ್ದರು. ಸ್ವಾಗತವನ್ನು ಗಂಗಮ್ಮ ಹೂಗಾರ ಮಾಡಿದರು. ಮಂಜುಳಾ ಹಾಸಿಲಕರ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಅಸುಂಡಿ ಶರಣು ಸಮರ್ಪಣೆ ಗೈದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
1 Comment

Leave a Reply

Your email address will not be published. Required fields are marked *