‘ಹಡಪದ ಅಪ್ಪಣ್ಣ ಕಲ್ಯಾಣದಲ್ಲಿ ಬಸವಣ್ಣನವರ ನೆರಳಿನಂತಿದ್ದರು’

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

೧೨ನೇ ಶತಮಾನದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಮಾರ್ಗದರ್ಶನ ಮಾಡುತ್ತಾ, ಅವರ ನೆರಳಾಗಿದ್ದಂತವರು ಶರಣ ಹಡಪದ ಅಪ್ಪಣ್ಣನವರು ಎಂದು ಕಿತ್ತಲಿಯ ಪೂಜ್ಯ ಅಭಿನವ ಸಿದ್ಧರಾಮ ಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೦೯ನೆಯ ಶಿವಾನುಭವದಲ್ಲಿ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ಶಿವಾನುಭವದಂತಹ ಧಾರ್ಮಿಕ ಕಾರ್ಯಗಳು ಜನರ ಮನದ ಮಲೀನ ಕಳೆದು ಶುದ್ಧರನ್ನಾಗಿ ಮಾಡುತ್ತವೆ.

೧೨ನೆಯ ಶತಮಾನದ ಶರಣರು ಸಮಾಜದಲ್ಲಿಯ ಮೌಢ್ಯತೆಗಳನ್ನು ಕಳೆಯಲು ವಚನಗಳನ್ನು ಬರೆದು ಸಮಾನತೆಯನ್ನು ತಂದರು. ಅಂತಹ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು. ಇಂತಹ ಶರಣರನ್ನು ನಾಡಿಗೆ ಕೊಟ್ಟ ಹಡಪದ ಸಮಾಜ ಅವರು ಹೊಂದಿದ್ದ ಆದರ್ಶ- ಮೌಲ್ಯಗಳನ್ನು ಅನ್ವಯಿಸಿಕೊಂಡು ನಡೆಯಬೇಕು ಎಂದರು.

ಶರಣ ಹಡಪದ ಅಪ್ಪಣ್ಣ ಮತ್ತು ಶರಣೆ ಲಿಂಗಮ್ಮ ಅವರ ಕುರಿತು ಉಪನ್ಯಾಸ ನೀಡಿದ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಎ. ವಿ. ಪ್ರಭು ಮಾತನಾಡಿ, ಅಪ್ಪಣ್ಣನವರು ೧೨ನೆಯ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಬಸವಣ್ಣನವರ ಮೆದುಳಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಮೌಢ್ಯತೆಗಳನ್ನು ಕಿತ್ತೊಗೆಯಲು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದರು. ಅಂತಹ ಶರಣರ ವಾರಸುದಾರರಾದ ನಾವು ಅಪ್ಪಣ್ಣನವರ ವ್ಯಕ್ತಿತ್ವಕ್ಕೆ ಮತ್ತಷ್ಟು ಹಿರಿಮೆ -ಗರಿಮೆ ಬರುವಂತೆ ನಡೆದುಕೊಳ್ಳಬೇಕು ಎಂದರು.

ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಮೋಹನ ಚಂದಪ್ಪನವರ ಮಾತನಾಡಿ, ತೋಂಟದಾರ್ಯ ಸಂಸ್ಥಾನ ಮಠದ ಲಿಂಗೈಕ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ನಮ್ಮನ್ನು ಪ್ರಸ್ತುತ ಸಮಾಜದಲ್ಲಿ ಎತ್ತಿಹಿಡಿದರು. ನಮ್ಮ ಸಮಾಜದ ಸ್ಥಿತಿಯ ಕುರಿತು ನಮಗೆ ಮನವರಿಕೆ ಮಾಡಿಕೊಟ್ಟರು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಿ. ವಿ. ಬಡಿಗೇರ, ನ್ಯಾಯವಾದಿಗಳಾದ ಮೆಹರವಾಡೆ, ದಾನಯ್ಯ ಗಣಾಚಾರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಧರ್ಮಗ್ರಂಥ ಪಠಣವನ್ನು ಪ್ರಣಾಳಿ ಬಾಹುಬಲಿ ಜೈನರ, ವಚನ ಚಿಂತನ ಗೌತಮಿ ಹೊಸೂರ ನೆರವೇರಿಸಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರು ವಚನ ಸಂಗೀತ ನೆರವೇರಿಸಿದರು. ದಾಸೋಹ ಸೇವೆಯನ್ನು ರಾಜೇಶ ಈಶ್ವರಪ್ಪ ಮಾನ್ವಿ, ವಿಜಯಕುಮಾರ ಶೆಟ್ಟರ ವಹಿಸಿಕೊಂಡಿದ್ದರು.

ಕಾರ್ಯಕ್ರಮದ ನಿರ್ವಹಣೆ ವಿದ್ಯಾ ಗಂಜಿಹಾಳ, ಸ್ವಾಗತ ಡಾ. ಉಮೇಶ ಪುರದ ಮಾಡಿದರು. ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *