ಲೋಕಕಲ್ಯಾಣ ಮೌನಲಿಂಗ ಅನುಷ್ಠಾನದ ಪ್ರಮುಖ ಉದ್ದೇಶ: ಸಿದ್ದರಾಮ ಸ್ವಾಮೀಜಿ

ಬೆಳಗಾವಿಯನ್ನು ಪಾಲಿಕೆಯಲ್ಲಿ ಅಧಿಕೃತವಾಗಿಸುವ ಪ್ರಯತ್ನ ಮಾಡಬೇಕು

ರಾಮದುರ್ಗ:

ಅನುಷ್ಠಾನ ಆಧ್ಯಾತ್ಮ ಸಾಧನೆ ಮತ್ತು ಆತ್ಮಶುದ್ಧಿಯ ಒಂದು ಮಾರ್ಗವಾಗಿದೆ, ಮಾತನ್ನು ಹಾಗೂ ಆಹಾರವನ್ನು ನಿಯಂತ್ರಿಸುವುದರಿಂದ ಮನಸ್ಸಿನ ಏಕಾಗ್ರತೆ ಹಾಗೂ ಅಂತರ್ಮುಖಿ ಸಾಧನೆಯ ಜೊತೆಗೆ ಲೋಕಲ್ಯಾಣವನ್ನು ಮಾಡುವುದು ಮೌನಲಿಂಗಾನುಷ್ಠಾನದ ಪ್ರಮುಖ ಉದ್ದೇಶವಾಗಿದೆ ಎಂದು ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

ಅವರು ತಾಲೂಕಿನ ಕಲ್ಲೂರು ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜ್ಯ ಶಾಂತಲಿಂಗ ಶ್ರೀಗಳು ಕೈಗೊಂಡಿದ್ದ ೩೧ ದಿನಗಳ ಮೌನಲಿಂಗಾನುಷ್ಠಾನ ಮಂಗಲೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಅನುಷ್ಠಾನಕ್ಕೆ ಎಲ್ಲವನ್ನೂ ನಿಗ್ರಹಿಸುವ ಶಕ್ತಿಯಿದೆ. ಅಂತಹ ಶ್ರೇಷ್ಠ ವೃತವನ್ನು ಪೂಜ್ಯರು ಸುಮಾರು ೧೭ ವರ್ಷಗಳಿಂದ ನಿರಂತರವಾಗಿ ಕೈಗೊಳ್ಳುತ್ತ ಈ ಭಾಗದಲ್ಲಿ ಭಕ್ತೋದ್ಧಾರ ಮಾಡುತ್ತಿದ್ದಾರೆ. ಅಪಾರ ಭಕ್ತಸಮೂಹವನ್ನು ಹೊಂದಿರುವ ಅವರು ಕನ್ನಡ ನೆಲ ಜಲ ಭಾಷೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

೧೨ ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಾದಾಗ ವಚನ ಸಂರಕ್ಷಣೆಗಾಗಿ ವಚನ ಕಟ್ಟುಗಳನ್ನು ಸಾಗಿಸುವ ಸಂದರ್ಭದಲ್ಲಿ ಜ್ಞಾನನಿಧಿ ಚೆನ್ನಬಸವಣ್ಣನವರು ತಂಗಿ ಹೋದ ಪುಣ್ಯಸ್ಥಳವಾದ ಕಲ್ಲೂರು ಸಿದ್ದೇಶ್ವರ ದೇವಸ್ಥಾನ ಈ ಭಾಗದ ಆರಾಧ್ಯ ದೇವರಾಗಿದೆ ಎಂದು ಅವರು ಹೇಳಿದರು.

ಚಿಪ್ಪಲಕಟ್ಟಿ ಬೃಹನ್ಮಠದ ಪೂಜ್ಯ ಸಿದ್ಧಲಿಂಗ ಸ್ವಾಮಿಗಳು ಶ್ರೀಕ್ಷೇತ್ರ ಕಲ್ಲೂರು ಸಿದ್ದೇಶ್ವರ ದೇವಸ್ಥಾನ ಐತಿಹಾಸಿಕ ಪವಿತ್ರ ತಾಣವಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಈ ಪುಣ್ಯಕ್ಷೇತ್ರದಲ್ಲಿ ಪೂಜ್ಯರು ಮೌನಲಿಂಗಾನುಷ್ಠಾನ ಕೈಗೊಂಡಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದು ಹೇಳಿದರು.

ಶಿರೋಳ-ಭೈರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಶ್ರೀಗಳು ಮಾತನಾಡುತ್ತ, ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸ್ ಅದಿವೇಶನದಲ್ಲಿ ಮಹಾತ್ಮಾ ಗಾಂದೀಜಿಯವರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದರು. ಆದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ್ದೆ ಎನ್ನುವಂತೆ ಇಲ್ಲಿಯವರೆಗೂ ಅದಿಕೃತವಾಗಿ ಠರಾವು ಅಂಗೀಕಾರವಾಗದಿರುವುದು ದುರ್ದೈವದ ಸಂಗತಿ.

ಇತ್ತೀಚೆಗೆ ಈ ವಿಷಯವಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಎಲ್ಲ ಮಠಾದೀಶರನ್ನು, ಕನ್ನಡಪರ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದು ಜಾಗೃತಿ ಮೂಡಿಸಿ ಜನಾಂದೋಲನ ಮಾಡಿದ್ದು ಐತಿಹಾಸಿಕ ಕಾರ್ಯವಾಗಿದೆ.

ಈ ವಿಷಯವಾಗಿ ಕೂಡಲೇ ನಮ್ಮ ನಾಡಿನ ಜನಪ್ರತಿನಿಧಿಗಳು ಮೌನ ಮುರಿದು ಪಕ್ಷಾತೀತವಾಗಿ ಹೋರಾಟ ಮಾಡುವುದರ ಮೂಲಕ ಕರ್ನಾಟಕದ ಹೃದಯ ಬೆಳಗಾವಿಯನ್ನು ಮಹಾನಗರ ಪಾಲಿಕೆಯಲ್ಲಿ ಅಧಿಕೃತವಾಗಿಸುವಂತೆ ಪ್ರಯತ್ನ ಮಾಡಬೇಕಾಗಿದೆ.

ಧಾರವಾಡದ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ ತೋಡಕರ, ಧಾರವಾಡದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಎ.ಎಂ. ಮಾನ್ವಿ ಮಾತನಾಡಿದರು.

ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿಗಳಾದ ಬಸವರಾಜ ಸಿಂಧನೂರ ದಂಪತಿಗಳನ್ನು ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಮುಳ್ಳೂರು ಹಿರೇಮಠ ಪೂಜ್ಯ ಚಂದ್ರಶೇಖರ ಶಿವಾಚಾರ್ಯರು, ರಾಮದುರ್ಗ ಪೂಜ್ಯ ಶಾಂತವೀರ ಮಹಾಸ್ವಾಮಿಗಳು, ಚಂದ್ರಶೇಖರ ಮಟ್ಟಿ, ಬಸವರಾಜ ಚಿಕ್ಕಮಠ, ಸುರೇಶ ಸಿ. ಪೂಜಾರ ಪ್ರಮುಖರು ಉಪಸ್ಥಿತರಿದ್ದರು.

ಚಂದ್ರಶೇಖರ ಸೊಬರದ ಕಾರ್ಯಕ್ರಮ ನಿರ್ವಹಿಸಿದರು. ನೂರಾರು ಭಕ್ತರು ಭಾಗಿಯಾಗಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *