ಮೈಸೂರು
ಸೆಪ್ಟೆಂಬರ್ 29 ಮೈಸೂರಿನಲ್ಲಿ ನಡೆಯಲಿರುವ ಮಹಿಷ ಉತ್ಸವಕ್ಕೆ 10,000 ಜನ ಸೇರುವ ನಿರೀಕ್ಷೆ ಇದೆ. ಕಳೆದ ವರ್ಷದ ಉತ್ಸವದಲ್ಲಿ 5,000 ಜನ ಭಾಗವಹಿಸಿದ್ದರೆಂದು ಆಯೋಜಕರು ತಿಳಿಸಿದರು.
ಮೈಸೂರು ಸೇರಿದಂತೆ ಹಲವಾರು ಜಿಲ್ಲೆಗಳಿಂದ ಜನ ತಮ್ಮ ಸ್ವಂತ ಖರ್ಚಿನಲ್ಲಿ ಬರುತ್ತಿದ್ದಾರೆಂದು ಮಹಿಷ ದಸರಾ ಆಚರಣಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಹೇಳಿದರು.
ಕಾರ್ಯಕ್ರಮದ ದಿನ ಬೆಳಗ್ಗೆ 8.30ಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚಯೇ ಮಾಡಲಾಗುತ್ತದೆ. “ಪೊಲೀಸರು ಮುಕ್ತವಾಗಿ ಮಹಿಷ ಬೆಟ್ಟಕ್ಕೆ ಹೋಗಲು ಅವಕಾಶ ಮಾಡಿಕೊಡುತ್ತಾರೆಂಬ ಆಶಯವಿದೆ,” ಎಂದು ಪುರುಷೋತ್ತಮ್ ಹೇಳಿದರು.
10.30ಯಿಂದ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದಿ ಮಠದ ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ ಮತ್ತು ನಳಂದ ಬುದ್ಧ ವಿಹಾರದ ಪೂಜ್ಯ ಬೋದಿದತ್ತ ಬಂತೇಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಚಿಂತಕ ಯೋಗೇಶ ಮಾಸ್ಟರ್ ಉದ್ಘಾಟಿಸುವ ಕಾರ್ಯಕ್ರಮಕ್ಕೆ ಪುರುಷೋತ್ತಮ್ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿವ ಸುಂದರ್, ಕೆ ಎಸ್ ಭಗವಾನ್, ನಂಜರಾಜ ಅರಸ್, ಕೃಷ್ಣಮೂರ್ತಿ ಚಮರಂ ಮತ್ತು ಇತರ ಚಿಂತಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಹಲವಾರು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಕಾರ್ಯಕ್ರಮವನ್ನು ನಗರದ ಪುರಭವನದ ಆವರಣದಲ್ಲಿ ಆಯೋಜಿಸಿವೆ ಎಂದು ಪುರುಷೋತ್ತಮ್ ಹೇಳಿದರು.
