ಒಬ್ಬರು ಸ್ನೇಹಿತರು ಫೋನ್ ಮಾಡಿ, ಕನ್ನೇರಿ ಸ್ವಾಮಿ ಶಹಾಪುರದಲ್ಲಿ ಹಲ್ಲು ಕಿತ್ತ ಹಾವಂತೆ ಮಾತಾಡಿದ್ದಾರೆ ಎಂದು ಹೇಳಿದ್ರು.
ಬೆಂಗಳೂರು
ಕೆಲಸದ ಒತ್ತಡದಿಂದ ಶಹಾಪುರದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಕನ್ನೇರಿ ಸ್ವಾಮಿಯ ಅಮೃತವಾಣಿಯನ್ನು ಸ್ವಾದಿಸುವ ಅವಕಾಶ ಸಿಕ್ಕಿರಲಿಲ್ಲ.
ಅವರ ಭಾಷಣ ಬರೆದು, ಉರು ಹೊಡೆಸಿ ವೇದಿಕೆ ಹತ್ತಿಸುತ್ತಿರುವ ಸಂಘ ಪರಿವಾರದವರ ಕೈ ಚಳಕ ನೋಡಲೂ ಸಾಧ್ಯವಾಗಿರಲಿಲ್ಲ.
ನೆನ್ನೆ ಯೂಟ್ಯೂಬಿನಲ್ಲಿ ಕನ್ನೇರಿ ಸ್ವಾಮಿಯ 55 ನಿಮಿಷದ ಭಾಷಣ ಕೇಳುವ ಸೌಭಾಗ್ಯ ಕೊನೆಗೂ ಸಿಕ್ಕಿತು. ಯಾವುದೇ ಸ್ವರೂಪವಿಲ್ಲದೆ, ಅಡ್ಡಡ್ಡ, ಉದ್ದುದ್ದ, ತುಂಡು ತುಂಡಾಗಿ ಎತ್ತೆತ್ತಲೋ ಸಾಗುವ ಮಾತುಗಳ ಕೇಳಿದ ಹಾಗೆ ಅನಿಸಿತು.
ಮೊದಲು ಗಮನ ಸೆಳೆದಿದ್ದು ಅವರ ಮುಂದಿದ್ದ ಮಹಾಜನತೆಗೆ ‘ಬಸವ ತಾಲಿಬಾನ್’ಗಳ ಬಗ್ಗೆ ಕನ್ನೇರಿ ಸ್ವಾಮಿ ನೀಡಿದ ಎಚ್ಚರಿಕೆ:
“ಬಸವಣ್ಣನವರು ಹೇಳಿದನ್ನು ಆಚರಿಸದಿದ್ದರೆ ಕುತ್ತಿಗಿ ಹಿಚಕ್ತಿವಿ ಅಂತ ಒಬ್ಬ ಹೇಳ್ತಾನೆ, ನಿಮ್ಮನ್ನ ತಿರಗಾಡಿ ಬಡೀತೀವಿ ಅಂತಾರೆ, ಈ ಲೋಕದಿಂದಲೇ ಹೊರಗೆ ಹಾಕ್ತೀವಿ ಅಂತಾರೆ. ಇದು ತಾಲಿಬಾನಿತನ,” ಎಂದರು.
ಕನ್ನೇರಿ ಸ್ವಾಮಿಯ ಕಲ್ಪನೆಯ ತಾಲಿಬಾನಿಗಳಂತೆ ಈ ಮಾತುಗಳೂ ಅವರ ಆರೆಸ್ಸೆಸ್ ಹ್ಯಾಂಡ್ಲರುಗಳ ಕಲ್ಪನೆ. ಅವರು ಮೊದಲು ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾಂಸ, ಮಧ್ಯ ಸೇವಿಸಲು ಕರೆ ಕೊಟ್ಟರು ಅಂತ ರೀಲು ಬಿಟ್ಟರು. ಈಗ ಬಸವ ತಾಲಿಬಾನಿಗಳು ‘ಕುತ್ತಿಗಿ ಹಿಚಕಲು’ ಬರ್ತಾರೆ ಅಂತ ರೈಲು ಬಿಡುತ್ತಿದ್ದಾರೆ.
ಇವರು ಹೀಗೆ ಮುಂದೆ ಹೋದರೆ ಮಾತು ಕೇಳದ ತಮ್ಮ ಜಾತಿಯ ಮಕ್ಕಳಿಗೆ ರಾತ್ರಿ ಹೊತ್ತು ‘ಬಸವ ತಾಲಿಬಾನಿ’ಗಳು ಬರ್ತಾರೆ ಅಂತ ಬೆದರಿಸಲು ಅಮರಚಿತ್ರ ಕಥೆ ಪುಸ್ತಕ ಬರಸೋ ಹಾಗೂ ಕಾಣಿಸುತ್ತಿದೆ.
ಬಸವಾದಿ ಶರಣರ ಹೆಸರಿನ ಹತಾಶೆಯ ಸಮ್ಮೇಳನಗಳು ಶುರುವಾದ ಮೇಲೆ ಲಿಂಗಾಯತರಿಗೆ ಕನ್ನೇರಿ ಸ್ವಾಮಿ ಒಬ್ಬ ನಿಷ್ಠ ಆರೆಸ್ಸೆಸ್ ಏಜೆಂಟ್ ಎಂದು ಅರ್ಥವಾಗುತ್ತಿದೆ.
ಕನ್ನೇರಿ ಸ್ವಾಮಿ ಆರೆಸ್ಸೆಸ್ ನಾಯಕರೊಂದಿಗೆ ಸಲ್ಯೂಟ್ ಮಾಡುತ್ತಿರುವ, ಅವರೊಡನೆ ಗುಪ್ತ ಸಮಾಲೋಚನೆ ನಡೆಸುತ್ತಿರುವ ಫೋಟೋಗಳೆಲ್ಲಾ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಇದರ ಬಗ್ಗೆ ಶಹಪುರದಲ್ಲಿ ಕನ್ನೇರಿ ಸ್ವಾಮಿ ಯಾರೂ ಕೇಳದಿದ್ದರೂ ಸ್ಪಷ್ಟನೆ ನೀಡಿದರು.
“ನಾನು ಯಾರ ಕೈಗೊಂಬೆಯಲ್ಲ, ನನಗೆ ಜೀವನದಲ್ಲಿ ಮಹತ್ವಾಕಾಂಕ್ಷೆಯಿಲ್ಲ. ದೇಶ, ಸಮಾಜ, ಧರ್ಮ ರಕ್ಷಣೆಯೇ ನನ್ನ ಗುರಿ. ನನ್ನ ಕೈಗೊಂಬೆ ಮಾಡಿಕೊಳ್ಳೋಕೆ ಹುಟ್ಟಿ ಬರಬೇಕು,” ಅಂತ ಆರೆಸ್ಸೆಸ್ಸಿನವರಿಗೂ ಯಾಕೋ ಬೈದು ಹೇಳಿದರು.
ಕರ್ನಾಟಕದ ಯೋಗಿ, ಭಾವಿ ಮುಖ್ಯಮಂತ್ರಿ ಎಂದೆಲ್ಲಾ ಕನಸು ಕಾಣುತ್ತಿರುವ ಖಾವಿ-ಕುಂಕುಮದಾರಿಯಿಂದ ಇಂತಹ ವೈರಾಗ್ಯದ ನುಡಿಗಳನ್ನು ಕೇಳಿ ಆಶ್ಚರ್ಯವಾಯಿತು.
ಬಸವತತ್ವದ ಪ್ರಚಾರದ ನೆಪದಲ್ಲಿ ವಿಶ್ವವ್ಯಾಪ್ತಿಯಾಗಬೇಕಿದ್ದ ಬಸವಣ್ಣನವರನ್ನು ಲಿಂಗಾಯತರಿಗೆ ಸೀಮಿತಗೊಳಿಸಲಾಗಿದೆ ಎಂದು ಕನ್ನೇರಿ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
“ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಸಮಾವೇಶ ನಡೆಯುತ್ತಿದೆ,” ಎಂದು ಗುಡುಗಿದರು.
ಇದೇ ಮಾತುಗಳು ಮುಂಚೆ ಕೇಳಿಸಿದ್ದು ವಚನ ದರ್ಶನ ತಂಡದಿಂದ. ಬಸವಣ್ಣನವರನ್ನು ವೈದಿಕ ವಟುವಂತೆ ಬಿಂಬಿಸುವ ಪ್ರಯತ್ನ ನಡೆಸಿದಾಗ ಲಿಂಗಾಯತರು ಆ ಪುಸ್ತಕ ಸುಟ್ಟು ಹಾಕಿದ್ದರು. ಆಗ ಒಂದು ಚರ್ಚೆಯಲ್ಲಿ ಬಸವಣ್ಣ ಲಿಂಗಾಯತರಿಗೆ ಸೀಮಿತವಲ್ಲ ಅನ್ನೋ ಮಾತು ಯಾರೋ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಇನ್ನೊಬ್ಬರು ಹಾಗಿದ್ರೆ ಉಡುಪಿ ಮಠಗಳಲ್ಲಿ ಬಸವಣ್ಣನವರ ಫೋಟೋ ಹಾಕಿಸಿ ಅಂತ ಸವಾಲು ಹಾಕಿದ್ದರು.
ಕನ್ನೇರಿ ಸ್ವಾಮಿ ಈ ಸವಾಲು ಸ್ವೀಕರಿಸಿ ಬಸವಣ್ಣವರನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಉಡುಪಿ ಮಠಗಳಿಂದಲೇ ಶುರು ಮಾಡಬೇಕು.
ಒಬ್ಬರು ಸ್ನೇಹಿತರು ಫೋನ್ ಮಾಡಿ, ಕನ್ನೇರಿ ಸ್ವಾಮಿ ಭಾಷಣ ಕೇಳ್ರಿ, ಬಾಗಲಕೋಟೆಗೆ ಹೋಲಿಸಿದ್ರೆ ಮೆತ್ತಗಾಗಿದ್ದಾರೆ, ಹಲ್ಲು ಕಿತ್ತ ಹಾವಂತೆ ಮಾತಾಡಿದ್ದಾರೆ ಎಂದು ಹೇಳಿದ್ರು.
ಎರಡು ತಿಂಗಳ ಬಾಗಲಕೋಟೆ ಹತಾಶೆ ಸಮಾವೇಶದಲ್ಲಿ ಕನ್ನೇರಿ ಸ್ವಾಮಿ ಲಿಂಗಾಯತ ಸಮಾಜದ ಮುಖಂಡರನ್ನು ‘ಶಿಖಂಡಿ’, ‘ಹಂದಿ’, ‘ನಾಯಿ‘ ಎಂದೆಲ್ಲಾ ಕರೆದು ತಮ್ಮ ವಿದ್ವತ್ತನ್ನು ಸಾಬೀತುಪಡಿಸಿದ್ದರು.
ಲಿಂಗಾಯತ ಸ್ವಾಮೀಜಿಗಳನ್ನು ಏಕವಚನದಲ್ಲಿ ಕರೆದು, ಪೂಜ್ಯ ನಿಜಗುಣಾನಂದ ಸ್ವಾಮೀಜಿಯವರ ಮೇಲೆ ಹಲ್ಲೆಗೂ ಪರೋಕ್ಷವಾಗಿ ಪ್ರಚೋದನೆ ನೀಡಿದ್ದರು. ಆ ತರಹದ ಭಾಷಾ ಪಾಂಡಿತ್ಯದಿಂದಲೇ ಅವರನ್ನು ಖಾವಿ ಧರಿಸಲು ನಾಲಾಯಕ್ ಎಂದು ಸುಪ್ರೀಂ, ಹೈ ಕೋರ್ಟ್ ನ್ಯಾಯಮೂರ್ತಿಗಳು ಝಾಳಿಸಿದ್ದು.
ಈ ಹಿಂದಿನ ಅವತಾರಗಳಿಗೆ ಹೋಲಿಸಿದರೆ ಕನ್ನೇರಿ ಸ್ವಾಮಿ ಶಹಾಪುರದಲ್ಲಿ ಸೌಮ್ಯಮೂರ್ತಿಯಂತೆ ಕಂಗೊಳಿಸಿದರು.
ಹಿಂದೂ ಸ್ಥಾನಿಕ ಪದ, ಧರ್ಮವಲ್ಲ ಅಂತ ಹೇಳಿದ್ದ ಯಾರೋ ಲಿಂಗಾಯತ ಪೂಜ್ಯರ ಹೆಸರು ಹೇಳದೆ ಪ್ರತಿಕ್ರಿಯೆ ನೀಡಿದರು. “ಪೂಜ್ಯರೇ ಅಧ್ಯಯನ ಮಾಡ್ಲಿಕ್ಕೆ ಕಲೀರಿ, ಕೂಪ ಮಂಡೂಕ ಆಗಬ್ಯಾಡ್ರಿ,” ಅಂತ ತಮಗೆ ತಿಳಿದ ಹಾಗೆ ಪ್ರೀತಿಯಿಂದಲೇ ಹೇಳಿದರು.
ಕನ್ನೇರಿ ಸ್ವಾಮಿಯ ಬದಲಾದ ಬಣ್ಣಕ್ಕೆ ಕಾರಣ ಕೆದಕಬೇಕು. ಲಿಂಗಾಯತ ಪೂಜ್ಯರನ್ನು ಟಾರ್ಗೆಟ್ ಮಾಡಿರುವುದಕ್ಕೆ ಅವರ ಹ್ಯಾಂಡ್ಲರುಗಳು ಅಂದುಕೊಂಡಿದ್ದಕಿಂತಲೂ ತೀಕ್ಷ್ಣ ಪ್ರತಿಕ್ರಿಯೆ ಬಂದಿದೆ.
ಬಾಗಲಕೋಟೆಯಲ್ಲಿ ಕನ್ನೇರಿ ಸ್ವಾಮಿಯ ಕಿಡಿಗೇಡಿತನದ ಮಾತುಗಳಿಗೆ ಪ್ರತಿಕ್ರಿಯೆಯಾಗಿ ಲಿಂಗಾಯತ ಸಮಾಜ, ಬಸವ ಸಂಘಟನೆಗಳು ಪೂಜ್ಯ ನಿಜಗುಣಾನಂದ ಸ್ವಾಮಿಗಳನ್ನು ಹೊತ್ತು ಹಳ್ಳಿ ಹಳ್ಳಿಗಳಲ್ಲಿ ಅವರನ್ನು ಮೆರೆಸಿದವು.
ಬಾಗಲಕೋಟೆ ಹಿಂದೂ ಸಮಾವೇಶದ ಕೆಲವು ದಿನಗಳ ನಂತರ ಅಲ್ಲಿ ಉಪ ಚುನಾವಣೆ ನಡೆಯಿತು. ಅದರಲ್ಲಿ ಹಿಂದುತ್ವದ ಮೇಲೆಯೇ ಸ್ಪರ್ದಿಸಿದ ಆರೆಸ್ಸೆಸ್ ಅಭ್ಯರ್ಥಿ ಹೀನಾಯವಾಗಿ ಸೋತಿದ್ದು ಮತ್ತೊಂದು ಪಾಠ ಕಲಿಸಿರಬಹುದು.
ಬಾಗಲಕೋಟೆಯಲ್ಲಿ ಕನ್ನೇರಿ ಸ್ವಾಮಿಯ ಜೊತೆ ಸಾನಿಧ್ಯ ವಹಿಸಿದ್ದ ಹಿಂದೂ ಹುಲಿದ್ವಯರಾದ ಯತ್ನಾಳ, ಈಶ್ವರಪ್ಪರನ್ನು ಹ್ಯಾಂಡ್ಲರುಗಳು ಶಹಾಪುರದಲ್ಲಿ ಕೈ ಬಿಟ್ಟರು ಎನ್ನುವುದನ್ನೂ ಗಮನಿಸಬೇಕು. ಯತ್ನಾಳ ಪರವಾಗಿ ಚಪ್ಪಾಳೆ ಬಿದ್ದರೂ ಮತಗಳು ಉಲ್ಟಾ ಹೊಡೆಯುತ್ತವೆ ಎನ್ನುವುದು ನಿಧಾನವಾಗಿ ಅರ್ಥವಾಗುತ್ತಿರುವ ಹಾಗೆ ಕಾಣುತ್ತದೆ.
ಆದರೆ ‘ಬಸವ ತಾಲಿಬಾನ್’ ಅಥವಾ ‘ಕಮ್ಯುನಿಸ್ಟರ’ ಬಗ್ಗೆ ಮಾತಾಡುವಾಗ ಕನ್ನೇರಿ ಸ್ವಾಮಿ ಗೊಂದಲಕ್ಕೆ ಒಳಗಾಗಿ ಮತ್ತೆ ಸ್ಥಿಮಿತ ಕಳೆದುಕೊಂಡರು.
“ಬೊಗಳುತ್ತಿರುವ ಕಮ್ಯೂನಿಷ್ಟ್ ನಾಯಿಗಳ ಬಾಯಿ ಬಂದ್ ಮಾಡೋಕ್ ಹೋಗಬಾರದು, ಅವರಿಗೆ ಇನ್ನಷ್ಟು ಶಕ್ತಿ ಕೊಡು, ಇನ್ನಷ್ಟು ಜೋರಾಗಿ ಬೊಗಳಲಿ ಅಂತ ದೇವರಿಗೆ ಪ್ರಾರ್ಥನೆ ಮಾಡ್ತೀನಿ.”
“ಇವರಿಗೆ ಸೈದ್ಧಾಂತಿಕವಾಗಿ ಮಾತಾಡೋ ಕೆಪ್ಯಾಸಿಟಿ ಇಲ್ಲ, ವೈಯಕ್ತಿಕ ನಿಂದನೆ ಮಾಡ್ತವೆ. ಕಾಡಸಿದ್ದೇಶ್ವರ ಸ್ವಾಮಿಗಳಿಗೆ ಬೈದರೆ ಪ್ರಚಾರ ಸಿಗತ್ತೆ ಅಂದ್ಕೊಂಡಿವೆ ಹುಚ್ಚು ನಾಯಿಗಳು,” ಎಂದು ಬೇಸರ ತೋಡಿಕೊಂಡರು.

ಕನ್ಹೆರಿ ಸ್ವಾಮಿಯ ಬಾಯಿಂದ ಹೊಲಸು ಶಬ್ದ ಬರದಿದ್ದರೆ ಅದು ಕನ್ಹೆರಿ ಸ್ವಾಮಿಗೆ ಅವಮಾನ ಆದಂತೆ.
ಕರ್ನಾಟಕದ ತುಂಬ ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಲ್ಲಿ ಚಕ್ರವರ್ತಿ ಸೂಲಿಬೆಲೆ ಓಡಾಡಬೇಕಿತ್ತು, ಆತ ಬಂದರೆ ರಾಜಕೀಯ ನಷ್ಟ ಜಾಸ್ತಿ ಎಂದು ಕನ್ಹೆರಿ ಯನ್ನು ಓಡಾಡಿಸಿ ಟೆಸ್ಟ್ ಮಾಡುತ್ತಿದ್ದಾರೆ, ಬಾಗಲಕೋಟೆಯಲ್ಲಿ 35000 ಅಂತರದಲ್ಲಿ ರಿಸಲ್ಟ್ ಸಿಕ್ಕಿದೆ.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದನ್ನು ಅರಗಿಸಿಕೊಳ್ಳದ ಸಂಘ ಪರಿವಾರ ಮತ್ತು ಬಿಜೆಪಿ, ಈ ಕನ್ಹೆರಿಯ ಮೂಲಕ ಮಾಡುವ ಸಮಾವೇಶ ಲಿಂಗಾಯತರನ್ನು, ಶರಣರನ್ನು ನಿಂದಿಸುವ ತಿರುಚುವ ಕಾರ್ಯಕ್ರಮಕ್ಕೆ ಈಗಾಗಲೇ ಬಾಗಲಕೋಟೆಯಲ್ಲಿ ರಿಸಲ್ಟ್ ಬಂದಿದೆ.
ಹೀಗೆ ಇದೆ ರೀತಿ ಕನ್ಹೆರಿ ಬಿಜೆಪಿ ಬಾಹುಳ್ಳ್ಯದ ಎಲ್ಲ ಕ್ಷೇತ್ರಗಳಲ್ಲಿ ಅಡ್ಡಾಡಿ ಬರಲಿ ಎಂದು ವಿನಂತಿ, ಪ್ರಸ್ತುತ ಬಿಜೆಪಿ ಶಾಸಕರು ಮತ್ತು ಭಾವಿ ಆಕಾ0ಕ್ಷಿಗಳು ದಯವಿಟ್ಟು ಕನ್ಹೆರಿ ಯನ್ನು ಕರೆದು ಮೆರೆಸಿರಿ, ಮುಂದಿನ ಚುನಾವಣೆಯಲ್ಲಿ ಲೆಕ್ಕ ಚುಕ್ತಾ ಮಾಡುತ್ತೇವೆ, ಅಲ್ಲಿಯವರೆಗೆ ನಿಮ್ಮ ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಲ್ಲಿ ಲಿಂಗಾಯತ ಮಠಧೀಶರಿಗೆ ಬೈಯುವ್ವ, ಲಿಂಗಾಯತರಿಗೆ ಬೆದರಿಸುವ, ಶರಣರ ಅಸ್ಮಿತೆ ತಿರುಚುವ ಕೆಲಸ ನಡೆಯುತ್ತಾ ಇರಲಿ.
ಅಂದ ಹಾಗೆ ಗದುಗಿನಲ್ಲಿ ಮೇ 31 ಕ್ಕೆ ಕನ್ಹೆರಿಯಸಮಾವೇಶ ನಡೆಯಲಿದೆ, ಅಲ್ಲಿ ಸ್ಟೇಜ್ ಹತ್ತುವ ಪ್ರತಿಯೊಬ್ಬ ರಾಜಕಾರಣಿ ಯ ನಡೆಯನ್ನು ನೋಡುತ್ತೇವೆ ಮತ್ತು ಪ್ರಶ್ನಿಸುತ್ತೇವೆ. ಉತ್ತರವನ್ನು 2028 ಕ್ಕೆ ಕೊಡುತ್ತೇವೆ.
ಪ್ರೊಫೆಸರ್ ನಿಂದ MLC ಆದ ಸಂಕನೂರ್ ಅವರ ನಡೆಯನ್ನು ಎಲ್ಲರು ನೋಡುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೂ ಬರಲಿ.
ಹೌದ್ರಿ ಶರಣರೇ, ಒಬ್ಬ ಲಿಂಗಾಯತ ಎದ್ರೆ ಈ ಮಕ್ಕಳಿಗೆ ಐವತ್ತು ವೋಟು ಕಡಿಮೆ ಬೀಳ್ತವೆ.