‘ತೋಂಟದಾರ್ಯ ಮಠವನ್ನು ಎಲ್ಲರಿಗೂ ಮುಕ್ತವಾಗಿ ತೆರೆದ ಸಿದ್ಧಲಿಂಗ ಸ್ವಾಮೀಜಿ’

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಬಸವಾದಿ ಶಿವಶರಣರ ತತ್ವಗಳನ್ನು ಪಾಲಿಸುತ್ತಾ, ಶ್ರೀ ತೋಂಟದಾರ್ಯ ಮಠವನ್ನು ಎಲ್ಲ ಜನಾಂಗದವರಿಗೆ-ಬಡವ-ಬಲ್ಲಿದ-ದೀನ-ದಲಿತರಿಗೆ ಮುಕ್ತವಾಗಿ ಅವಕಾಶ ಕಲ್ಪಿಸಿ, ಆ ಎಲ್ಲರ ಶ್ರೇಯೋಭಿವೃದ್ಧಿಗೆ ಬಿಡುವಿಲ್ಲದೇ ದುಡಿದ ಸಮಾಜಮುಖಿ ಸಂತರು ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಎಂದು ಲೇಖಕ ಶಿವನಗೌಡ ಗೌಡರ ಮಾತನಾಡಿದರು.

ಬಸವದಳದ ವತಿಯಿಂದ ಬಸವ ಸಮುದಾಯ ಭವನದಲ್ಲಿ ನಡೆದ ೧೭೨೦ ನೇ ಶರಣ ಸಂಗಮ ಅನುಭಾವ ಗೋಷ್ಠಿಯಲ್ಲಿ, ಶರಣರಾದ ಹರಳಯ್ಯ-ಮಧುವಯ್ಯರ ಹುತಾತ್ಮ ದಿನಾಚರಣೆ – ತೋಂಟದ ಸಿದ್ಧಲಿಂಗ ಶ್ರೀಗಳ ೮ ನೇ ಸ್ಮರಣೋತ್ಸವದಲ್ಲಿ ನುಡಿ-ನಮನ ಸಲ್ಲಿಸುತ್ತಾ ಮಾತನಾಡುತ್ತಿದ್ದರು.

ತೋಂಟದ ಶ್ರೀಗಳು ಬಸವಾದಿ ಪ್ರಮಥರ ತತ್ವಗಳನ್ನು ಬದ್ಧತೆಯಿಂದ ಪಾಲಿಸುತ್ತಾ, ಸಮಾಜದ ಏಳ್ಗೆಗಾಗಿ ಹಗಲಿರುಳೂ ಶ್ರಮಿಸಿದರು. ನಾಡು-ನುಡಿ, ಗಡಿ, ಜಲ, ಭಾಷೆಗಾಗಿ ಕಂಕಣಬದ್ಧರಾಗಿ ಗೋಕಾಕ ಚಳುವಳಿ, ನಂಜುಡಪ್ಪ ವರದಿ ಜಾರಿಗಾಗಿ, ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕಾಗಿ, ಕಳಸಾಬಂಡೂರಿ-ಮಹದಾಯಿ ನದಿ ನೀರಿಗಾಗಿ, ಪೋಸ್ಕೋ ಕಂಪನಿ ಬಾರದಂತೆ – ಕಪ್ಪತ್ತಗುಡ್ಡ ರಕ್ಷಣೆಗಾಗಿ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕಾಗಿ, ಮಹಾಜನ ವರದಿ ಜಾರಿಗಾಗಿ ಹೀಗೆ ಎಲ್ಲ ಹೋರಾಟಗಳ ಬಗೆಗೆ, ಮಠವನ್ನು ಸಮಾಜಮುಖಿಯಾಗಿ ಬೆಳೆಸಿದ ಬಗೆ, ತಾಂಡಾಗಳನ್ನು-ಹರಿಜನ ಕೇರಿಗಳನ್ನು ದತ್ತಕ ತೆಗೆದುಕೊಂಡು ಆ ಜನಾಂಗದ ಬೆಳವಣಿಗೆಗಾಗಿ ಬಡವರ-ದುಃಖಿಗಳ ಮಹಾತಾಯಿಯಂತೆ ಅವರ ಕಣ್ಣೀರು ಒರೆಸಿದ್ದುದನ್ನು ಎಳೆ-ಎಳೆಯಾಗಿ ಶ್ರೀಯುತರು ವಿವರಿಸಿದರು.

‘ಮರಣವೇ ಮಹಾನಮಿ’ ಶರಣರಾದ ಹರಳಯ್ಯ-ಮಧುವಯ್ಯ ಕುರಿತು ಗಿರಿಜಕ್ಕ ಧರ್ಮರೆಡ್ಡಿ ಅವರು ಮಾತನಾಡುತ್ತ, ವರ್ಣಸಂಕರಕ್ಕೆ ಕಾರಣರಾಗುವ ಮೂಲಕ, ರಾಜ ಬಿಜ್ಜಳನ ಮಗ ಹಾಗೂ ಕುಟಿಲ ಮಂತ್ರಿಗಳ ಕಾರಸ್ಥಾನದಿಂದ ಕಲ್ಯಾಣ ಕ್ರಾಂತಿಯಾಯಿತು, ಶರಣರ ಮಾರಣಹೋಮವಾಯಿತು. ಬಸವಾದಿ ಶರಣರ ವಚನ ಸಾಹಿತ್ಯವನ್ನು ದಹಿಸುವ ಮೂಲಕ ಹಾಗೂ ಲಿಂಗಾಯತ ಧರ್ಮವನ್ನು ನಾಶ ಮಾಡುವ ಮೂಲಕ, ಮೂಲಭೂತವಾದಿ ವೈದಿಕ ಶಾಹಿಗಳು ಅಟ್ಟಹಾಸ ಮೆರೆದರು ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ, ಅಲ್ಲಮಪ್ರಭುವಿನ ನೇತೃತ್ವದಲ್ಲಿ ಶಿವಶರಣರೆಲ್ಲರ ಅನುಭವದ ವಚನಗಳು, ‘ಅರಿವಿನ ಮನೆ’ಯಲ್ಲಿ ಎರಕಹೊಯ್ದು ಸ್ವಾನುಭವದ ನೆಲೆಯನ್ನು ಒದಗಿಸುತ್ತಿದ್ದವು. ಸತ್ಯಕ್ಕನಿಂದ ಅಕ್ಕಮಹಾದೇವಿ ವರೆಗೆ, ಮಾದಾರ ಚನ್ನಯ್ಯನಿಂದ ಹಿಡಿದು ಅಲ್ಲಮಪ್ರಭು ವರೆಗೆ ಎಲ್ಲ ಶರಣೆ-ಶರಣರು ಬರೆದ ವಚನಗಳ ಚರ್ಚೆ-ವಿಚರ್ಚೆಗಳು ತುಂಬ ತಾರ್ಕಿಕವಾಗಿ ಸಮಾಜಮುಖಿಯಾಗಿ ಮಾನವೀಯ ಹಿನ್ನಲೆಯಲ್ಲಿ ರೂಪಗೊಳ್ಳುತ್ತಿದ್ದವು. ಇದನ್ನೆಲ್ಲ ಸಹಿಸದ ಮೂಲಭೂತವಾದಿಗಳು ವರ್ಣಸಂಕರಕ್ಕೆ ಪ್ರಮುಖ ಕಾರಣರಾಗುವರೆಂದು ಗಿರಜಕ್ಕ ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಕಾಶ ಅಸುಂಡಿ ಅವರು ವಹಿಸಿದ್ದರು. ಅವರು ಮಾತನಾಡುತ್ತಾ, ಶಿವಶರಣ ಹರಳಯ್ಯ-ಮಧುವರಸರ ಬದುಕು ಶರಣ ಸಂಕುಲಕ್ಕೆ ಮಾದರಿಯಾದುದು. ತಮ್ಮ-ತಮ್ಮ ಸತ್ಯ ಶುದ್ಧ ಕಾಯಕದೊಂದಿಗೆ ಈರ್ವರೂ ಪ್ರಮಥರ ಆಶಯವನ್ನು ಈಡೇರಿಸುತ್ತ ದಾಸೋಹ ಗೈಯ್ಯುತ್ತಾ ಸುಖಿ ಜೀವನವನ್ನು ಕಳೆದ ಶರಣರಿವರು.

ಬಸವಣ್ಣಣವರ ಆಶಯಗಳನ್ನು ಕಾಯ-ವಾಚಾ-ಮನಸಾ ಪರಿಪಾಲಿಸುತ್ತಾ, ಶರಣ ಸಂಕುಲವನ್ನು ಸಮೃದ್ಧವಾಗಿರಿಸಿ, ಕಲ್ಯಾಣವನ್ನು ಆನಂದಮಯಗೊಳಿಸಿದರು.

ಮೂಲಭೂತವಾದಿಗಳು ಈ ಸಂಕುಲವನ್ನು ಸರ್ವನಾಶಗೊಳಿಸುವ ಅಪೇಕ್ಷೆ ಈಡೇರಿಸಿಕೊಳ್ಳುವ ಮೂಲಕ ಎಳೆಹೂಟೆ ಶಿಕ್ಷೆಯ ಮೂಲಕ, ಕಲ್ಯಾಣಕ್ರಾಂತಿಯೊಂದಿಗೆ ಪ್ರಮಥರ ಕನಸನ್ನು ನುಚ್ಚುನೂರು ಮಾಡಿದರು ಎಂದು ಮಾತನಾಡಿದರು.

ಪೂಜ್ಯಶ್ರೀ ತೋಂಟದ ಸಿದ್ಧಲಿಂಗ ಶ್ರೀಗಳ ಬಗೆಗೆ ಮಾತನಾಡುತ್ತಾ, ಶ್ರೀ ತೋಂಟದಾರ್ಯ ಮಠವನ್ನು ಬಸವತತ್ವದ ಮಠವನ್ನಾಗಿ, ಡಾ. ಫ. ಗು. ಹಳಕಟ್ಟಿ ಅವರು ಸಂಪಾದಿಸಿದ ವಚನ ಸಾಹಿತ್ಯವನ್ನು ಶ್ರೀಮಠದಿಂದ ಪ್ರಕಟಿಸಿ, ಬಸವಾಯಿಯಾನುಗಳಿಗೆ ಶರಣ ಸಾಹಿತ್ಯ ಒದಗಿಸಿದರು. ಕಾಲಗರ್ಭದಲ್ಲಿ ಮರೆಯಾಗಿ ಹೋಗುತ್ತಿದ್ದ ಲಿಂಗಾಯತ ಪುಣ್ಯಪುರುಷರ ಜೀವನ ಚರಿತ್ರೆಯನ್ನು ಪ್ರಕಟಿಸುವ ಮೂಲಕ, ಮುಂದಿನ ತಲೆಮಾರಿಗೆ ಇತಿಹಾಸವನ್ನು ನಿರ್ಮಿಸಿದರು.

ನಿತ್ಯನಿರಂತರ ದಾಸೋಹ ಸ್ಥಾಪಿಸಿ, ಹಸಿದವರಿಗೆ ಅನ್ನದಾಸೋಹವನ್ನು ಪ್ರಾರಂಭ ಮಾಡಿದರು. ಬಡ ಮಕ್ಕಳು ಆರ್ಥಿಕವಾಗಿ ಶ್ರೀಮಂತರಾಗಬೇಕು, ಸಾಮಾಜಿಕವಾಗಿ ಭದ್ರರಾಗಬೇಕೆಂದು ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಶಿವಾನುಭವಗಳ ಮೂಲಕ ನಾಡಿನಲ್ಲಿ ಸಾಮಾಜಿಕ ಜಾಗೃತಿ ಉಂಟು ಮಾಡಿದರು. ನಾಡು-ನುಡಿ, ನೆಲ-ಜಲ-ಭಾಷೆಗಳ ಕುರಿತಾಗಿ ಶಿವಾನುಭವದಲ್ಲಿ ಉಪನ್ಯಾಸ-ವಿಚಾರಸಂಕಿರಣ-ಶಿಬಿರ ಏರ್ಪಡಿಸುವ ಮೂಲಕ ಸಾಂಸ್ಕೃತಿಕ ವಾತಾವರಣ ಕಲ್ಪಿಸಿದರು.

ಆಧುನಿಕ ಕೃಷಿಯನ್ನು ಅಳವಡಿಸಬೇಕೆಂದು ನೇಗಿಲಯೋಗಿಯಾಗಿ ಡಂಬಳ ಮಠದ ಹೊಲಗಳಲ್ಲಿ ದುಡಿದು ೧೦೦ ಎಕರೆಯನ್ನು ಸಮೃದ್ಧಗೊಳಿಸಿ ರೈತರಿಗೆ ಮಾರ್ಗದರ್ಶನ ಮಾಡಿದರು. ಕೃಷಿಯಲ್ಲಿ ಕೃಷಿ ವಿಜ್ಞಾನಿಗಳೂ ನಿಬ್ಬೆರಗಾಗುವಂತೆ ಕೃಷಿಯಲ್ಲಿ ಪ್ರಗತಿ ಕಂಡರು. ಬಡವರ, ದೀನ, ದುಃಖಿಗಳ ಉದ್ಧಾರ ಮಾಡುವದೇ ಮಾನವೀಯ ಲಕ್ಷಣವೆಂದರಿತು, ಮದರ ಥೆರೆಸಾರ ಹಾಗೆ ರೋಗಿಗಳ-ದೀನ ದುರ್ಬಲರ ಕಾಳಜಿ ಮಾಡುತ್ತಾ ಮಾನವೀಯತೆಯನ್ನು ಮೆರೆದ ಮಾಹನ್ ಸ್ವಾಮಿಗಳೆಂದು ತಮ್ಮ ಕಂಡುಂಡ ಅನುಭಾವದ ಮಾತುಗಳನ್ನಾಡಿದರು.

ಪ್ರಾರಂಭದಲ್ಲಿ ಶರಣೆ ಗಂಗಮ್ಮ ಹೂಗಾರ ಇವರಿಂದ ಸಾಮೂಹಿಕವಾಗಿ ಪ್ರಾರ್ಥನೆ ಜರುಗಿತು. ಮಂಗಳಕ್ಕ ಕಾಮಣ್ಣವರ ಸ್ವಾಗತ ನೆರವೇರಿಸಿದರು. ವೇದಿಕೆಯ ಮೇಲಿದ್ದ ಗಣ್ಯರಿಂದ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಲಾಯಿತು. ಮಂಜುಳಾ ಹಾಸಿಲಕರ ಅವರು ಪೂಜ್ಯರ ಬಗೆಗೆ ಕವನವನ್ನು ಹಾಡಿದರು.

ವ್ಹಿ. ಕೆ. ಕರೇಗೌಡರ ಅವರಿಂದ ಶರಣು ಸಮರ್ಪಣೆ, ಗೌರಕ್ಕ ಬಡಿಗಣ್ಣವರ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ ಸೇವೆಯನ್ನು ವಿಜಯಕುಮಾರ ಗೋಣಿ ಕುಟುಂಬ ವರ್ಗದವರು ವಹಿಸಿಕೊಂಡಿದ್ದರು. ಸಾಮೂಹಿಕ ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *