ಬೆಂಗಳೂರು
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಗುರುವಾರ ಉಡುಗೊರೆಯಾಗಿ ನೀಡಿದರು.
ದೆಹಲಿ ಪ್ರವಾಸದಲ್ಲಿರುವ ಡಿಕೆಶಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಮೋದಿಯವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದ ಸಂದರ್ಭದಲ್ಲಿ ಬಸವ ಮೂರ್ತಿಯನ್ನು ನೀಡಿದರು.
ಪ್ರಧಾನಿ ಭೇಟಿಯ ಫೋಟೊಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಡಿಕೆಶಿ ʼಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದೆ. ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ನಡೆಸಿದ್ದೇವೆ,ʼ ಎಂದಿದ್ದಾರೆ.
ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡಿರುವ ಹಿರಿಯ ಅಧಿಕಾರಿಯೊಬ್ಬರು ಇದರ ಬಗ್ಗೆ ಮಾತನಾಡಿದರು:
“ಕರ್ನಾಟಕದ ಗಣ್ಯರು ಇತರ ಪ್ರಮುಖರನ್ನು ಭೇಟಿಯಾದಾಗ ರಾಜ್ಯವನ್ನು ಪ್ರತಿನಿಧಿಸುವ ಅಧಿಕೃತ ಚಿಹ್ನೆಗಳನ್ನು ಉಡುಗೊರೆಯಾಗಿ ನೀಡುವುದು ಸಂಪ್ರದಾಯ.
ಸಿದ್ದರಾಮಯ್ಯನವರ ಅವಧಿಯಲ್ಲಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಅಧಿಕೃತ ಸ್ಥಾನ ನೀಡಲಾಯಿತು. ಅದರಂತೆ ಶಿವಕುಮಾರ್ ನಡೆದುಕೊಂಡಿದ್ದಾರೆ. ಮುಂದಿನ ಮುಖ್ಯಮಂತ್ರಿಗಳೂ ಇದನ್ನು ಮುಂದುವರೆಸುವುದು ಶಿಷ್ಟಾಚಾರವಾಗುತ್ತದೆ.
ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಮಂತ್ರಿಗಳು ಇಂತಹ ಸಂದರ್ಭಗಳಲ್ಲಿ ಶಿವಾಜಿಯವರ ಪ್ರತಿಮೆ ನೀಡುತ್ತಾರೆ,” ಎಂದು ಹೇಳಿದರು.
ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟವನ್ನು ವಿರೋಧಿಸಿರುವ ಶಿವಕುಮಾರ್ ಬಸವ ಮೂರ್ತಿಯನ್ನು ಉಡುಗೊರೆ ನೀಡಿರುವುದು ಮಾಧ್ಯಮಗಳ ಗಮನ ಸೆಳೆದಿದೆ.
ಒಂದು ವೈದಿಕ ದಿನಪತ್ರಿಕೆ, “ಬಸವಣ್ಣ ಎಂದರೆ ಪ್ರಧಾನಿ ಮೋದಿ ಅವರಿಗೆ ವಿಶೇಷ ಗೌರವ. ಹಿಂದೆ ಹಲವು ಬಾರಿ ಅವರು ತಮ್ಮ ಭಾಷಣದಲ್ಲಿ ಬಸವಣ್ಣನವರನ್ನು ಉಲ್ಲೇಖಿಸಿದ್ದಾರೆ. ಹೀಗಾಗಿ ಕನ್ನಡ ನಾಡಿನ ಆಸ್ಮಿತೆಯ ಪ್ರತೀಕ ಬಸವಣ್ಣ ಅವರ ಪ್ರತಿಮೆಯನ್ನು ಡಿಕೆಶಿ ಮೋದಿ ಅವರಿಗೆ ನೀಡಿದ್ದಾರೆ,” ಎಂದು ಬರೆದುಕೊಂಡಿದೆ.

